ಸಾರಾಂಶ
ನವದೆಹಲಿ: ದೆಹಲಿ ಅಬಕಾರಿ ಹಗರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಭಾನುವಾರ ಎಎಪಿ ನಾಯಕರು ದೇಶ-ವಿದೇಶಗಳಲ್ಲಿ ಸಾಮೂಹಿಕ ಉಪಹಾಸ ಕೈಗೊಂಡರು. ಬೆಳಗ್ಗೆ 11 ಗಂಟೆಗೆ ಇಲ್ಲಿನ ಜಂತರ್ ಮಂತರ್‌ನಲ್ಲಿ ಆರಂಭವಾದ ಉಪವಾಸ ಸತ್ಯಾಗ್ರಹ ಸಂಜೆಯವರೆಗೆ ನಡೆಯಿತು.
ಈ ಸಾಮೂಹಿಕ ಉಪವಾಸದಲ್ಲಿ ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್, ಡೆಪ್ಯೂಟಿ ಸ್ಪೀಕರ್ ರಾಖಿ ಬಿರ್ಲಾ, ಸಚಿವರಾದ ಅತಿಷಿ, ಗೋಪಾಲ್ ರೈ ಮತ್ತು ಇಮ್ರಾನ್ ಹುಸೇನ್ ಸೇರಿದಂತೆ ಅನೇಕ ಹಿರಿಯ ಆಪ್ ನಾಯಕರು ಭಾಗವಹಿಸಿದ್ದರು.
ಮಹಾರಾಷ್ಟ್ರದ ಮುಂಬೈ, ಪುಣೆ, ಹರ್ಯಾಣ, ಪಂಜಾಬ್ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲೂ ಆಪ್ ನಾಯಕರು ಮತ್ತು ಕಾರ್ಯಕರ್ತರು ತಮ್ಮ ನಾಯಕನ ಬಂಧನವನ್ನು ವಿರೋಧಿಸಿ ಸಾಮೂಹಿಕ ಉಪವಾಸ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿದೇಶದಲ್ಲೂ ಪ್ರತಿಭಟನೆ: ಬೋಸ್ಟನ್‌ನ ಹಾರ್ವರ್ಡ್ ಸ್ಕ್ವೇರ್, ಲಾಸ್ ಏಂಜಲೀಸ್‌ನ ಹಾಲಿವುಡ್ ಸೈನ್, ವಾಷಿಂಗ್ಟನ್‌ನ ಭಾರತೀಯ ರಾಯಭಾರಿ ಕಚೇರಿಯ ಹೊರಗೆ, ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್, ಟೊರೊಂಟೊ, ಲಂಡನ್, ಮೆಲ್ಬರ್ನ್ ಸೇರಿದಂತೆ ಇತರೆ ದೇಶಗಳಲ್ಲೂ ಪ್ರತಿಭಟನೆ ನಡೆದಿವೆ ಎಂದು ಮುಖಂಡರು ಹೇಳಿದ್ದಾರೆ.