ನವದೆಹಲಿ : ಆಪ್‌ಗೆ ಅಧಿಕಾರ ತಪ್ಪಿಸಿದ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದ ಕಳಂಕ- ಕೆಲ ಎಡವಟ್ಟುಗಳು

| N/A | Published : Feb 09 2025, 01:32 AM IST / Updated: Feb 09 2025, 04:37 AM IST

arvind kejriwal

ಸಾರಾಂಶ

ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದ ಕಳಂಕ ಮತ್ತು ತಾನೇ ಮಾಡಿಕೊಂಡ ಕೆಲ ಎಡವಟ್ಟುಗಳು ಹತ್ತು ವರ್ಷಗಳ ಕಾಲ ದೆಹಲಿಯ ಗದ್ದುಗೆಯಲ್ಲಿದ್ದ ಆಮ್‌ ಆದ್ಮಿ ಪಕ್ಷ(ಆಪ್‌) ಅಧಿಕಾರ ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ.

ನವದೆಹಲಿ: ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದ ಕಳಂಕ ಮತ್ತು ತಾನೇ ಮಾಡಿಕೊಂಡ ಕೆಲ ಎಡವಟ್ಟುಗಳು ಹತ್ತು ವರ್ಷಗಳ ಕಾಲ ದೆಹಲಿಯ ಗದ್ದುಗೆಯಲ್ಲಿದ್ದ ಆಮ್‌ ಆದ್ಮಿ ಪಕ್ಷ(ಆಪ್‌) ಅಧಿಕಾರ ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ.ಮೊದಲ ಐದು ವರ್ಷಗಳ ಆಡಳಿತಾವಧಿಯಲ್ಲಿ ಆಮ್‌ ಆದ್ಮಿ ಪಕ್ಷವು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆ ತಂದಿತ್ತು. ಇದು ಮತದಾರರ ಮೆಚ್ಚುಗೆಗೂ ಪಾತ್ರವಾಗಿತ್ತು. ಹೀಗಾಗಿ ಪ್ರಧಾನಿ ಮೋದಿ ಅವರ ವರ್ಚಸ್ಸಿನ ಹೊರತಾಗಿಯೂ ಬಿಜೆಪಿಯನ್ನು ಎದುರಿಸಿ ಎರಡನೇ ಬಾರಿ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿತ್ತು.

ಆದರೆ, ಎರಡನೇ ಅವಧಿಯಲ್ಲಿ ಕೇಂದ್ರದ ಜತೆಗೆ ಪದೇ ಪದೆ ನಡೆಸಿದ ತಿಕ್ಕಾಟ ಹಾಗೂ ಪಕ್ಷದೊಳಗಿನ ಆಂತರಿಕ ಕಚ್ಚಾಟ, ಕೇಜ್ರಿವಾಲ್‌ ಸೇರಿ ಪ್ರಮುಖ ನಾಯಕರು ಭ್ರಷ್ಟಾಚಾರದ ಕಳಂಕ ಹೊತ್ತು ಜೈಲು ಪಾಲಾಗಿದ್ದು ಸೇರಿ ಹಲವು ಕಾರಣಗಳಿಂದಾಗಿ ಈ ಬಾರಿ ಮತದಾರರು ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರವೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದರು.

ಲಿಕ್ಕರ್‌ ಹಗರಣ ಮತ್ತು ಶೀಷ ಮಹಲ್‌ ಆರೋಪಗಳು ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್‌ ಅವರ ಸ್ವಚ್ಛ ನಾಯಕನ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿತ್ತು. ಇದರಿಂದ ಕೇಜ್ರಿವಾಲ್‌, ಸಿಸೋಡಿಯಾರಂಥ ನಾಯಕರು ಅಧಿಕಾರದಿಂದ ಕೆಳಗಿಳಿಯಬೇಕಾಯಿತು.

ಕಳೆದ ಬಾರಿ ಬಿಜೆಪಿ ಸೋಲಿಸಲು ಕಾಂಗ್ರೆಸ್‌ ಕಾರ್ಯಕರ್ತರು ಆಪ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ, ಈ ಬಾರಿ ಕಾಂಗ್ರೆಸ್‌ ಮತ್ತು ಆಪ್‌ ನಾಯಕರು ಎದುರಾಳಿಗಳಂತೆ ಕಾದಾಡಿದರು. ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಕೂಡ ಪ್ರಚಾರದ ವೇಳೆ ಆಪ್‌ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.ಆಪ್‌ ಸೋಲಿಗೆ ಕಾರಣಗಳೇನು?

10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಆಮ್‌ ಆದ್ಮಿ ಪಕ್ಷದ ವಿರುದ್ಧದ ಹೆಚ್ಚಿದ್ದ ಆಡಳಿತ ವಿರೋಧಿ ಅಲೆ

ಲಿಕ್ಕರ್‌ ಹಗರಣ, ಶೀಶ್‌ ಮಹಲ್‌ ಪ್ರಕರಣಗಳಿಂದ ಕೇಜ್ರಿವಾಲ್‌ರಂಥ ಪ್ರಮುಖರ ವರ್ಚಸ್ಸಿಗೆ ಕಳಂಕ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರ ಪರೋಕ್ಷ ಬೆಂಬಲ ಪಡೆದಿದ್ದ ಆಪ್‌ ಈ ಬಾರಿ ಏಕಾಂಗಿ.

ಆಪ್‌ ಸರ್ಕಾರ ಹಲವು ಉಚಿತಗಳೇನೋ ಕೊಟ್ಟಿದ್ದು ನಿಜ. ಆದರೆ ದೆಹಲಿ ಅಭಿವೃದ್ಧಿ ಮಾಡುವಲ್ಲಿ ವಿಫಲ.

ಈ ಬಾರಿ ತಂತ್ರಗಾರಿಕೆ ಬದಲಿಸಿದ ಬಿಜೆಪಿ. ಹಿಂದುತ್ವಕ್ಕಿಂತ ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡಿದ್ದರಿಂದ ಯಶಸ್ಸು.

ಆಂತರಿಕ ಕಚ್ಚಾಟಗಳಿಂದ ಹಲವು ನಾಯಕರು ಪಕ್ಷ ತ್ಯಜಿಸಿದ್ದರಿಂದ ಆಪ್‌ ಸಂಘಟನೆಗೆ ಹಿನ್ನಡೆ.

ವಾಯು ಮಾಲಿನ್ಯ, ಯಮುನಾ ನದಿ ಮಾಲಿನ್ಯ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವೈಫಲ್ಯ

ಅಭಿವೃದ್ಧಿಗಿಂತ ಕೇಂದ್ರ ಸರ್ಕಾರದ ಜತೆಗೆ ಪದೇ ಪದೆ ತಿಕ್ಕಾಟಕ್ಕಿಳಿದದ್ದು

ಹರ್ಯಾಣ ಸರ್ಕಾರ ಯಮುನಾ ನದಿಗೆ ವಿಷಹಾಕಿದೆ ಎಂಬ ಆಪ್‌ ಮುಖಂಡರ ಅನಗತ್ಯ ಹೇಳಿಕೆಗಳು