ಸಾರಾಂಶ
ಮತದಾರರ ಮನ ಗೆಲ್ಲುವಲ್ಲಿ ಮೋದಿ ವರ್ಚಸ್ಸು ಯಶಸ್ವಿ, ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಮಹಿಳಾ ಪರ ಯೋಜನೆಗಳುಆದಾಯ ತೆರಿಗೆ ರದ್ದು, ವೇತನ ಆಯೋಗ ರಚನೆಯೂ ಲಾಭ
ದೆಹಲಿ : ಮತದಾರರ ಮನ ಗೆಲ್ಲುವಲ್ಲಿ ಮೋದಿ ವರ್ಚಸ್ಸು ಯಶಸ್ವಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಮಹಿಳಾ ಪರ ಯೋಜನೆಗಳು ಆದಾಯ ತೆರಿಗೆ ರದ್ದು, ವೇತನ ಆಯೋಗ ರಚನೆಯೂ ಲಾಭ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬರೋಬ್ಬರಿ 27 ವರ್ಷಗಳ ಬಳಿಕ ಕಮಲ ಮ್ಯಾಜಿಕ್ ಮಾಡಿದ್ದು, ಎರಡು ಸಲ ಅಧಿಕಾರದ ಗದ್ದುಗೆ ಹಿಡಿದಿದ್ದ ಆಪ್‌ಗೆ ಸೋಲಿನ ರುಚಿ ಕಾಣಿಸಿದೆ. ಆಮ್ ಆದ್ಮಿ, ಕಾಂಗ್ರೆಸ್ ಬಿರುಸಿನ ಪ್ರಚಾರದ ನಡುವೆ ಯೂ ಬಿಜೆಪಿಗೆ ಗೆಲುವು ತಂದು ಕೊಟ್ಟಿದ್ದು ಮೋದಿ, ಮಹಿಳೆಯರು ಮತ್ತು ಮಧ್ಯಮ ವರ್ಗ ಎನ್ನುವ ಬ್ರಹ್ಮಾಸ್ತ್ರ.ಮನಮೆಚ್ಚಿದ ಮೋದಿ
ದೆಹಲಿಯಲ್ಲಿ ಪ್ರಧಾನಿ ಮೋದಿ ವರ್ಚಸ್ಸು ಬಿಜೆಪಿಗೆ ಭರ್ಜರಿಯಾಗಿಯೇ ಹೈ ಹಿಡಿದಿದೆ. ತಮ್ಮ ಪ್ರಚಾರದುದ್ದಕ್ಕೂ ಕಾಂಗ್ರೆಸ್‌ಗಿಂತ ಹೆಚ್ಚಾಗಿಯೇ ಆಪ್ ಟಾರ್ಗೆಟ್ ಮಾಡಿದ್ದ ಪ್ರಧಾನಿ , ‘ದೆಹಲಿಗೆ ಆಪ್ ಆಪತ್ತು’ ಎನ್ನುತ್ತಾ ಆಪ್‌ನ ಭ್ರಷ್ಟಾಚಾರಗಳನ್ನು ಜನರ ಮನಮುಟ್ಟಿಸುವಲ್ಲಿ ಯಶಸ್ವಿಯಾದರು. ಕೇಂದ್ರ ಹಲವು ಯೋಜನೆ ಜಾರಿಗೆ ಆಪ್ ನಿರಾಕರಿಸಿದೆ ಎಂಬುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಡಬಲ್ ಎಂಜಿನ್ ಸರ್ಕಾರದ ಲಾಭ ಸಿಗಲಿದೆ ಎಂದು ಜನರ ಗಮನಕ್ಕೆ ತಂದರು. ಮೋದಿ ಗ್ಯಾರಂಟಿ ಜನರಿಗೆ ತಲುಪಲಿದೆ ಎಂದು ಭರವಸೆ ನೀಡಿದರು. ಇದೆಲ್ಲಾ ಜನರ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಲಾಗಿದೆ.
ಮಧ್ಯಮ ವರ್ಗ
ಈ ಬಾರಿ ಬಡವರ ಜೊತೆಗೆ ಮಧ್ಯಮ ವರ್ಗದವರನ್ನು ಗುರಿಯಾಗಿಸಿ ಬಿಜೆಪಿ ಪ್ರಣಾಳಿಕೆಯಲ್ಲಿ ಹಲವು ಭರವಸೆ ನೀಡಿತು. ಜೊತೆಗೆ ಚುನಾವಣೆಗೂ ಮುನ್ನ ನಡೆದ ಕೇಂದ್ರ ಬಜೆಟ್ ಕೂಡಾ ದೆಹಲಿ ಚುನಾವಣೆಯಲ್ಲಿ ಪರಿಣಾಮ ಬೀರಿದೆ ಎನ್ನಲಾಗಿದೆ. ಬಜೆಟ್‌ನಲ್ಲಿ 12 ಲಕ್ಷ ರು.ವರೆಗಿನ ಆದಾಯಕ್ಕೆ ಯಾವುದೇ ಆದಾರ ತೆರಿಗೆ ಇಲ್ಲ ಎಂದು ಘೋಷಿಸಿದ್ದು ದೊಡ್ಡಮಟ್ಟದಲ್ಲಿ ಮಧ್ಯಮ ವರ್ಗದ ಜನರ ಗಮನ ಸೆಳೆಯಲು ಯಶಸ್ವಿಯಾಗಿದೆ. ಇನ್ನು ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗ ರಚನೆ ಘೋಷಣೆಯೂ ಸರ್ಕಾರಿ ನೌಕರರ ಮತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರಣಾಳಿಕೆಯಲ್ಲಿ ಆಯುಷ್ಮಾನ್ ಯೋಜನೆಗೆ ರಾಜ್ಯ ಸರ್ಕಾರದ ಹೆಚ್ಚುವರಿ 5 ಲಕ್ಷ ರು. , ಹಿರಿಯರಿಗೆ ಪಿಂಚಣಿ 2500 ರು,ಗೆ ಏರಿಕೆ ಘೋಷಣೆಗಳೂ ಕೂಡ ನೆರವಾಯಿತು.
ಕೈಹಿಡಿದ ಮಹಿಳೆಯರು
ದೆಹಲಿಯಲ್ಲಿ ಮಹಿಳಾ ಮತದಾರರು ಕೂಡ ಬಿಜೆಪಿ ಕೈ ಹಿಡಿದಿದ್ದಾರೆ. ಪಕ್ಷದ ಪ್ರಣಾಳಿಕೆ ಸಂಕಲ್ಪ ಪತ್ರದಲ್ಲಿ ಮಹಿಳೆಯರಿಗಾಗಿ ಭರಪೂರ ಯೋಜನೆಗಳನ್ನು ಘೋಷಿಸಿತ್ತು. ಮಾಸಿಕ 2,500 ರು. ಆರ್ಥಿಕ ನೆರವು, ಸ್ವಸಹಾಯ ಗುಂಪುಗಳಲ್ಲಿ 1 ಲಕ್ಷ ರು. ಬಡ್ಡಿ ರಹಿತ ಸಾಲ, ಸರ್ಕಾರಿ ಉದ್ಯೋಗಳಲ್ಲಿ ಶೇ,33ರಷ್ಟು ಮೀಸಲಾತಿ, ಅರ್ಹರಿಗೆ 500 ರು.ಗೆ ಸಿಲಿಂಡರ್ , ಹೀಗೆ ಬಿಜೆಪಿಯ ಸಾಲು ಸಾಲು ಭರವಸೆಗಳು ದೆಹಲಿ ಗದ್ದುಗೆ ಭದ್ರ ಮಾಡಿತು.