ವಿವಾದಿತ ಬಾಲ ಸನ್ಯಾಸಿ ಅಭಿನವ್‌ಗೆ ಬಿಷ್ಣೋಯಿ ಗ್ಯಾಂಗ್‌ನಿಂದ ಬೆದರಿಕೆ : ಕುಟುಂಬ ದೂರು

| Published : Oct 30 2024, 12:42 AM IST / Updated: Oct 30 2024, 06:32 AM IST

lawrence bishnoi encounter

ಸಾರಾಂಶ

ಇತ್ತೀಚೆನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಭಾರೀ ಸುದ್ದಿಯಲ್ಲಿರುವ ವಿವಾದಿತ ಬಾಲ ಸನ್ಯಾಸಿ ಅಭಿನವ್‌ ಅರೋರಾಗೂ, ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ತಂಡ ಜೀವ ಬೆದರಿಕೆ ಹಾಕಿದೆಯಂತೆ.

ನವದೆಹಲಿ: ಇತ್ತೀಚೆನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಭಾರೀ ಸುದ್ದಿಯಲ್ಲಿರುವ ವಿವಾದಿತ ಬಾಲ ಸನ್ಯಾಸಿ ಅಭಿನವ್‌ ಅರೋರಾಗೂ, ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ತಂಡ ಜೀವ ಬೆದರಿಕೆ ಹಾಕಿದೆಯಂತೆ. ಹಾಗೆಂದು ಆತನ ತಾಯಿ ಆರೋಪಿಸಿದ್ದಾರೆ. 

ನಿನ್ನೆ ರಾತ್ರಿ ನನ್ನ ಮೊಬೈಲ್‌ಗೆ ಮಿಸ್‌ ಕಾಲ್‌ ಬಂದಿತ್ತು. ಇಂದು ಬೆಳಗ್ಗೆ ನಿಮ್ಮ ಮಗನನ್ನು ಹತ್ಯೆ ಮಾಡಲಾಗುವುದು ಎಂದು ಸಂದೇಶ ಬಂದಿದೆ. ಆತನಿಗೆ ಹತ್ಯೆ ಬೆದರಿಕೆ ಹಾಕುವ ರೀತಿಯ ಯಾವುದೇ ಕೆಲಸವನ್ನೂ ಆತ ಮಾಡಿಲ್ಲ ಎಂದು ಜ್ಯೋತಿ ಅರೋರಾ ಹೇಳಿದ್ದಾರೆ. ಇತ್ತೀಚೆಗೆ ಖ್ಯಾತ ಸಂತರಾದ ರಾಮಭದ್ರಾಚಾರ್ಯ ಅವರಿದ್ದ ವೇದಿಕೆಯಲ್ಲಿ ಅಭಿನವ್‌ ನೃತ್ಯ ಮಾಡಿದ್ದ ಮತ್ತು ನಾನು ಕೃಷ್ಣನ ಜೊತೆಗೆ ಶಾಲೆಗೆ ಹೋಗುತ್ತಿದ್ದೇನೆ ಎಂದೆಲ್ಲಾ ಹೇಳಿದ್ದ. ಇದರಿಂದ ಸಿಟ್ಟಿಗೆದ್ದ ರಾಮಭದ್ರಾಚಾರ್ಯರು ಅಭಿನವ್‌ನನ್ನು ವೇದಿಕೆಯಿಂದ ಕೆಳಗೆ ಇಳಿಸಿದ್ದರು.

ಗಾಜಾದ ಮೇಲೆ ಇಸ್ರೇಲ್‌ ದಾಳಿ: 60 ಮಂದಿ ಬಲಿ

ದೇರ್ ಅಲ್- ಬಲಾಹ್‌: ಪ್ಯಾಲೇಸ್ತೇನಿಯನ್ನರು ಆಶ್ರಯ ಪಡೆದಿದ್ದ ಗಾಜಾಪಟ್ಟಿ ಪ್ರದೇಶದ ಬಹು ಮಹಡಿ ಕಟ್ಟಡದ ಮೇಲೆ ಇಸ್ರೇಲ್‌ ನಡೆಸಿದ ವಾಯು ದಾಳಿಯಲ್ಲಿ 60 ಮಂದಿ ಬಲಿಯಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಗಾಜಾ ಆರೋಗ್ಯ ಇಲಾಖೆ ಹೇಳಿದೆ. ಜೊತೆಗೆ ಕಟ್ಟಡದಲ್ಲಿದ್ದ 17 ಜನರು ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದೆ.

ಹಿಜ್ಬುಲ್ಲಾ ಹೊಸ ಮುಖ್ಯಸ್ಥನಾಗಿ ಉಗ್ರ ನಯೀಂ ಕಾಸಿಂ ಆಯ್ಕೆ

ಬೈರೂತ್‌: ಲೆಬನಾನ್‌, ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಉಗ್ರ ಸಂಘಟನೆಯ ನೂತನ ಮುಖ್ಯಸ್ಥರನ್ನಾಗಿ ನಯೀಂ ಕಾಸಿಂನನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗಷ್ಟೇ ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್‌ ನಸ್ರಲ್ಲಾ ಹತ್ಯೆಯಾಗಿದ್ದ. ಈ ಹಿನ್ನೆಲೆಯಲ್ಲಿ ಆತನ ಸ್ಥಾನಕ್ಕೆ ಕಳೆದ ಮೂರು ದಶಕಗಳಿಂದ ಹಿಜ್ಬುಲ್ಲಾದ ಉಪನಾಯಕನಾಗಿ ಗುರುತಿಸಿಕೊಂಡಿದ್ದ, ನಸ್ರಲ್ಲಾನ ನೀತಿಗಳನ್ನು ಜಾರಿ ಮಾಡುತ್ತಿದ್ದ ನಯೀಂನನ್ನು ಹೊಸ ಮುಖ್ಯಸ್ಥನನ್ನಾಗಿ ನೇಮಿಸಲಾಗಿದೆ. ಹಿಜ್ಬುಲ್ಲಾದ ವಕ್ತಾರನಾಗಿಯೂ ಗುರುತಿಸಿಕೊಂಡಿದ್ದ ನಯೀಂ, ನಸ್ರಲ್ಲಾ ಸಾವಿನ ಬಳಿಕ ಹಿಜ್ಬುಲ್ಲಾದ ಮಿಲಿಟರಿ ನಾಯಕತ್ವ ವಹಿಸಿಕೊಂಡಿದ್ದ.

ಬಾಹ್ಯಾಕಾಶ ಕೇಂದ್ರದಿಂದ ದೀಪಾವಳಿ ಶುಭ ಕೋರಿದ ಗಗನಯಾತ್ರಿ ಸುನಿತಾ!

ವಾಷಿಂಗ್ಟನ್‌: ಗಗನನೌಕೆಯಲ್ಲಿ ಕಂಡುಬಂದ ತಾಂತ್ರಿಕದೋಷದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಂಡಿರುವ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಅವರು, ಅಲ್ಲಿಂದಲೇ ದೀಪಾವಳಿ ಶುಭ ಕೋರಿದ್ದಾರೆ. ಅಮೆರಿಕದ ಶ್ವೇತಭವನದಲ್ಲಿ ಆಚರಿಸಿದ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸುನಿತಾ ಬಾಹ್ಯಾಕಾಶದಿಂದ ಕಳುಹಿಸಿದ ವಿಡಿಯೋ ಸಂದೇಶ ಪ್ರದರ್ಶಿಸಲಾಯಿತು. ಈ ವಿಡಿಯೋದಲ್ಲಿ ಸುನಿತಾ, ತಮ್ಮ ಕುಟುಂಬದಲ್ಲಿ ಸನಾತನದ ಸಾಂಸ್ಕೃತಿಕತೆ ಹುಟ್ಟು ಹಾಕುವಲ್ಲಿ ತನ್ನ ತಂದೆಯ ಶ್ರಮ ಸ್ಮರಿಸಿದರು. ಬಳಿಕ ‘ಶ್ವೇತಭವನದಲ್ಲಿ ಹಾಗೂ ಪ್ರಪಂಚದಾದ್ಯಂತ ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಹಿಂದೂ ಧರ್ಮದ ಹಬ್ಬದಲ್ಲಿ ಪಾಲ್ಗೊಂಡಿರುವ ಅಧ್ಯಕ್ಷರಾದ ಜೋ ಬೈಡನ್‌ ಹಾಗೂ ಉಪಾಧ್ಯಕ್ಷರಾದ ಕಮಲಾ ಹ್ಯಾರಿಸ್‌ ಅವರಿಗೆ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.

ನಟ ಸಲ್ಮಾನ್‌, ಜೀಶನ್‌ ಸಿದ್ದಿಕಿಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿ ಬಂಧನ

ಮುಂಬೈ: ನಟ ಸಲ್ಮಾನ್‌ ಖಾನ್‌ ಮತ್ತು ಎನ್‌ಸಿಪಿ ನಾಯಕ ಜೀಶನ್‌ ಸಿದ್ದಿಕಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪದಡಿ ಮುಂಬೈ ಪೊಲೀಸರು ಉತ್ತರಪ್ರದೇಶದ ನೋಯ್ಡಾದಲ್ಲಿ ವ್ಯಕ್ತಿಯೊಬ್ಬನನ್ನು ಮಂಗಳವಾರ ಬಂಧಿಸಿದ್ದಾರೆ. ಆರೋಪಿ ಕಳೆದ ಶುಕ್ರವಾರ ಶಾಸಕ ಜೀಶನ್‌ ಸಿದ್ದಿಕಿ ಮೊಬೈಲ್‌ಗೆ ಕೊಲೆ ಬೆದರಿಕೆ ಸಂದೇಶ ಕಳುಹಿಸಿದ್ದ. ಆ ಬಳಿಕ ಸಿದ್ದಿಕಿ ಹಾಗೂ ಸಲ್ಮಾನ್‌ ಖಾನ್‌ ಅವರನ್ನು ಕೊಲೆ ಮಾಡುವುದಾಗಿ ಸಿದ್ದಿಕಿ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ಸಿದ್ದಿಕಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ತಾಂತ್ರಿಕ ಸಾಕ್ಷ್ಯಗಳ ನೆರವಿನಿಂದ ಆರೋಪಿಯನ್ನು ನೋಯ್ಡಾದಲ್ಲಿ ಬಂಧಿಸಿದ್ದಾರೆ. ಬಳಿಕ ಹೆಚ್ಚಿನ ತನಿಖೆಗೆ ಮುಂಬೈಗೆ ಕರೆತಂದಿದ್ದಾರೆ.

ಪೆಟ್ರೋಲ್, ಡೀಸೆಲ್‌ ವಿತರಣೆ ಕಮಿಷನ್‌ ಏರಿಕೆ: ದರ ಬದಲಿಲ್ಲ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು, ಪೆಟ್ರೋಲ್‌ ಬಂಕ್‌ ಮಾಲೀಕರಿಗೆ ಪೆಟ್ರೋಲ್‌, ಡೀಸೆಲ್ ಮಾರಾಟಕ್ಕೆ ನೀಡುತ್ತಿದ್ದ ಕಮಿಷನ್‌ ದರ ಹೆಚ್ಚಳ ಮಾಡಿದೆ. ಆದರೆ ಇದರ ಹೊರತಾಗಿಯೂ, ಗ್ರಾಹಕರಿಗೆ ವಿತರಿಸುವ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಹಿಂದಿನಂತೆಯೇ ಮುಂದುವರೆಯಲಿದೆ. ಅದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ತೈಲ ಕಂಪನಿಗಳ ನಿರ್ಧಾರದ ಅನ್ವಯ ಪ್ರತಿ ಲೀಟರ್‌ ಪೆಟ್ರೋಲ್‌ ಮೇಲಿನ ಕಮಿಷನ್‌ ಅನ್ನು 65 ಪೈಸೆಯಷ್ಟು ಮತ್ತು ಡೀಸೆಲ್‌ ಮೇಲಿನ ಕಮಿಷನ್‌ ಅನ್ನು 44 ಪೈಸೆ ಹೆಚ್ಚಿಸಲಾಗಿದೆ. ಅ.30ರಿಂದಲೇ ಇದು ಜಾರಿಗೆ ಬರಲಿದೆ.