ಸಾರಾಂಶ
ಸುಪ್ರೀಂಕೋರ್ಟನಲ್ಲಿ ರಣವೀರ್ ಪರವಾಗಿ, ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ನ್ಯಾಯಮೂರ್ತಿ ಚಂದ್ರಚೂಡ್ ಅವರ ಪುತ್ರ ಅಭಿನವ್‌ವಾದ ಮಂಡಿಸಲಿದ್ದಾರೆ. ಅಭಿನವ್ ಸುಪ್ರೀಂಕೋರ್ಟ್‌ನ ಖ್ಯಾತ ವಕೀಲರ ಪೈಕಿ ಒಬ್ಬರು.
ನವದೆಹಲಿ: ರಿಯಾಲಿಟಿ ಶೋ ಒಂದರಲ್ಲಿ ಅಶ್ಲೀಲ ಹೇಳಿಕೆ ನೀಡಿದ ಸಂಬಂಧ ತನಿಖೆ ಎದುರಿಸುತ್ತಿರುವ ಯುಟ್ಯೂಬರ್ ರಣವೀರ್ ಅಲಹಾಬಾದಿಯಾ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟನಲ್ಲಿ ರಣವೀರ್ ಪರವಾಗಿ, ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ನ್ಯಾಯಮೂರ್ತಿ ಚಂದ್ರಚೂಡ್ ಅವರ ಪುತ್ರ ಅಭಿನವ್ ವಾದ ಮಂಡಿಸಲಿದ್ದಾರೆ. ಅಭಿನವ್ ಸುಪ್ರೀಂಕೋರ್ಟ್‌ನ ಖ್ಯಾತ ವಕೀಲರ ಪೈಕಿ ಒಬ್ಬರು.
ಗುಪ್ತಾಂಗಕ್ಕೆ ಡಂಬೆಲ್ಸ್ ಕಟ್ಟಿ ರ್‍ಯಾಗಿಂಗ್: ಪ್ರಾಂಶುಪಾಲ, ಬೋಧಕ ಇಬ್ಬರೂ ಸಸ್ಪೆಂಡ್
ಕೊಟ್ಟಾಯಂ: ನರ್ಸಿಂಗ್ ಕಾಲೇಜಿನ 5 ಹಿರಿಯ ವಿದ್ಯಾರ್ಥಿಗಳು, ಕಿರಿಯ ವಿದ್ಯಾರ್ಥಿಗಳ ಜನನಾಂಗಕ್ಕೆ ಡಂಬೆಲ್ಸ್ ಕಟ್ಟಿ ಚಿತ್ರಹಿಂಸೆ ನೀಡಿ ರ್‍ಯಾಗಿಂಗ್ ನಡೆಸಿದ ಪ್ರಕರಣ ಸಂಬಂಧ ಕಾಲೇಜಿನ ಪ್ರಾಂಶುಪಾಲ ಮತ್ತು ಸಹಾಯಕ ಪ್ರಾಧ್ಯಾಪಕರನ್ನು ಅಮಾನತು ಮಾಡಲಾಗಿದೆ. ರ‍್ಯಾಗಿಂಗ್ ನಿಯಂತ್ರಿಸಲು ವಿಫಲರಾದ ಆರೋಪದ ಮೇಲೆ ಕಾಲೇಜಿನ ಪ್ರಾಂಶುಪಾಲರಾದ ಸುಲೇಖಾ, ಸಹಾಯಕ ಪ್ರಾಧ್ಯಾಪಕ ಅಜೀಶ್ ಪಿ. ಮಣಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಸೂಚನೆಯಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರು ನಡೆಸಿದ ವಿಚಾರಣೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಸಿಬಿಎಸ್‌ಇ 10,12ನೇ ಕ್ಲಾಸ್ ಪರೀಕ್ಷೆ: ಮೊದಲ ದಿನ 24 ಲಕ್ಷ ವಿದ್ಯಾರ್ಥಿಗಳು ಭಾಗಿ
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10 ಮತ್ತು 12ನೇ ತರಗತಿ ಪರೀಕ್ಷೆಗಳು ಶನಿವಾರ ಪ್ರಾರಂಭವಾಗಿವೆ. ‘ಶನಿವಾರ 10ನೇ ತರಗತಿ ಇಂಗ್ಲಿಷ್ ಮತ್ತು 12ನೇ ತರಗತಿ ಉದ್ಯಮಶೀಲತಾ ಪರೀಕ್ಷೆಗಳು ನಡೆದವು. 10ನೇ ತರಗತಿ ಪರೀಕ್ಷೆಯು 7,780 ಕೇಂದ್ರಗಳಲ್ಲಿ ನಡೆದಿದ್ದು, 23.86 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. 12ನೇ ತರಗತಿ ಪರೀಕ್ಷೆಯನ್ನು 995 ಕೇಂದ್ರಗಳಲ್ಲಿ ನಡೆಸಲಾಗಿದ್ದು, ಸುಮಾರು 23,000 ವಿದ್ಯಾರ್ಥಿಗಳು ಹಾಜರಿದ್ದರು.
10ನೇ ತರಗತಿ ಪರೀಕ್ಷೆಗಳು ಮಾ.18ರಂದು ಹಾಗೂ 12ನೇ ತರಗತಿ ಪರೀಕ್ಷೆಗಳು ಏ.04ರಂದು ಮುಕ್ತಾಯವಾಗಲಿವೆ.
ಕಾರಿಗೆ ಬಸ್ ಡಿಕ್ಕಿಯಾಗಿ ಕುಂಭಮೇಳಕ್ಕೆ ತೆರಳುತ್ತಿದ್ದ 10 ಭಕ್ತರ ದಾರುಣ ಸಾವು
ಪ್ರಯಾಗ್‌ರಾಜ್: ಮಹಾಕುಂಭ ಮೇಳದಲ್ಲಿ ಭಾಗಿಯಾಗಲು ತೆರಳುತ್ತಿದ್ದ ಬೊಲೆರೋ ಕಾರು ಇಲ್ಲಿಯ ಮೇಜಾ ಪೊಲೀಸ್ ಠಾಣಾ ವ್ಯಾಪ್ತಿಯ ಹೆದ್ದಾರಿಯೊಂದರಲ್ಲಿ ಬಸ್ಸೊಂದಕ್ಕೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ದುರಂತದಲ್ಲಿ ಕಾರಿನಲ್ಲಿದ್ದ 10 ಮಂದಿ ಅಸುನೀಗಿದ್ದಾರೆ. ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಸಂತ್ರಸ್ತರು ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಲು ಬೊಲೆರೋದಲ್ಲಿ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದ 10 ಮಂದಿಯೂ ಅಸುನೀಗಿದ್ದು ಬಸ್‌ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿ ವಿವೇಕ್ ಚಂದ್ರ ಯಾದವ್ ಹೇಳಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರಿಗೆ ಸಂತಾಪ ಸೂಚಿಸಿದ್ದಾರೆ.
ಇಸ್ರೇಲ್ ಹಮಾಸ್ ಕದನ ವಿರಾಮ: 6 ಒತ್ತೆಯಾಳು, 396 ಬಂಧಿತರು ರಿಲೀಸ್
ಖಾನ್ ಯೂನಿಸ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನವಿರಾಮದ ಭಾಗವಾಗಿ ಶನಿವಾರ ಹಮಾಸ್ ಉಗ್ರರು 3 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ 396 ಪ್ಯಾಲೆಸ್ತೀನಿ ಬಂಧಿತರನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಇದು ಕದನವಿರಾಮ ಆರಂಭವಾದ ಬಳಿಕ 6ನೇ ವಿನಿಮಯವಾಗಿದೆ. ಇಸ್ರೇಲ್‌ನಿಂದ ಬಿಡುಗಡೆಯಾದ 396 ಜನರ ಪೈಕಿ 36 ಬಂಧಿತರು ಗಲ್ಲು ಶಿಕ್ಷೆಗೆ ಗುರಿಯಾಗಿದ್ದರು. ಜ.19ರಂದು ಕದನವಿರಾಮ ಜಾರಿಯಾದ ಬಳಿಕ ಇಸ್ರೇಲ್ 730 ಬಂಧಿತರನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಹಮಾಸ್ ಪಡೆಗಳು 21 ಒತ್ತೆಯಾಳುಗನ್ನು ಬಿಡುಗಡೆ ಮಾಡಿದೆ.==
2023ರ ಅ.7ರಂದು ಹಮಾಸ್ ಪಡೆಗಳು ಇಸ್ರೇಲ್ ಮೇಲೆ ಏಕಾಏಕಿ ದಾಳಿ ಮಾಡಿ 251 ಜನರನ್ನು ವಶಕ್ಕೆ ಪಡೆದಿತ್ತು. ಈ ಪೈಕಿ ಅರ್ಧದಷ್ಟು ಜನರು ಮೃತಪಟ್ಟಿರುವ ಸಾಧ್ಯತೆ ಇದ್ದು, ಇನ್ನು 73 ಒತ್ತೆಯಾಳುಗಳು ಗಾಜಾದಲ್ಲಿ ಇದ್ದಾರೆ ಎನ್ನಲಾಗಿದೆ.