ಸಾರಾಂಶ
ನವದೆಹಲಿ: ಕೆಲವು ವ್ಯಕ್ತಿಗಳು ತಮ್ಮ ಹೆಸರು, ಫೋಟೋ ಮತ್ತು ಎಐ ಬಳಸಿಕೊಂಡು ಅಶ್ಲೀಲ ವಿಚಾರಗಳನ್ನು ಅನಧಿಕೃತವಾಗಿ ಪ್ರಚಾರ ಮಾಡುತ್ತಿದ್ದು, ಅದಕ್ಕೆ ತಡೆ ನೀಡುವಂತೆ ಕೋರಿ ನಟಿ ಐಶ್ವರ್ಯ ರೈ ಬಚ್ಚನ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಐಶ್ವರ್ಯಾ ಪರ ಹಾಜರಾದ ವಕೀಲ ಸಂದೀಪ್ ಸೇಥಿ ಅವರು, ‘ನಟಿ ತನ್ನ ಪ್ರಚಾರ ಮತ್ತು ವ್ಯಕ್ತಿತ್ವದ ಹಕ್ಕನ್ನು ಜಾರಿಗೊಳಿಸಲು ಕೋರುತ್ತಿದ್ದಾರೆ. ಅವರ ಚಿತ್ರಗಳನ್ನು ಬಳಸುವ ಹಕ್ಕು ಯಾರಿಗೂ ಇಲ್ಲ. ಐಶ್ವರ್ಯಾ ಅವರು ಹೆಸರು ಮತ್ತು ಹೋಲಿಕೆಯನ್ನು ಯಾರದ್ದೋ ಲೈಂಗಿಕ ಆಸೆಗಳನ್ನು ಪೂರೈಸಲು ಬಳಸಲಾಗುತ್ತಿದೆ. ಇದು ತುಂಬಾ ದುರದೃಷ್ಟಕರ’ ಎಂದು ವಾದ ಮಂಡಿಸಿದರು. ವಾದ ಆಲಿಸಿದ ನ್ಯಾಯಮೂರ್ತಿ ತೇಜಸ್ ಕರಿಯಾ ಪ್ರತಿವಾದಿಗಳನ್ನು ಎಚ್ಚರಿಸಲು ಮಧ್ಯಂತರ ಆದೇಶವನ್ನು ನೀಡುವ ಬಗ್ಗೆ ಮೌಖಿಕ ಇಂಗಿತ ವ್ಯಕ್ತಪಡಿಸಿದರು.
ತಂದೆ ಆಸ್ತಿಯಲ್ಲಿ ಪಾಲು ಕೇಳಿ ನಟಿ ಕರಿಷ್ಮಾ ಮಕ್ಕಳು ಕೋರ್ಟ್‌ಗೆ
ನವದೆಹಲಿ: ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಇಬ್ಬರು ಮಕ್ಕಳು ಇತ್ತೀಚೆಗಷ್ಟೇ ನಿಧನರಾದ ತಮ್ಮ ತಂದೆ ಸಂಜಯ ಕಪೂರ್ ಅವರ ಆಸ್ತಿಯಲ್ಲಿ ಪಾಲು ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸೆ.10ರಂದು ನ್ಯಾಯಾಲಯದಲ್ಲಿ ಈ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.ಕರಿಷ್ಮಾ ಮಾಜಿ ಪತಿ ಸಂಜಯ್ ಕಪೂರ್ ಕಳೆದ ಜೂನ್‌ನಲ್ಲಿ ಲಂಡನ್‌ನಲ್ಲಿ ನಿಧನರಾಗಿದ್ದರು. ಅವರು ಒಟ್ಟು 31000 ಕೋಟಿ ರು. ಆಸ್ತಿ ಹೊಂದಿದ್ದಾರೆ.
ಈಗ ಸಂಜಯ್ ಅವರ ವಿಲ್‌ಗೆ ಸಂಬಂಧಿಸಿದಂತೆ ಕರಿಷ್ಮಾ ಮಕ್ಕಳು ನ್ಯಾಯಾಲಯದ ಮೊರೆ ಹೋಗಿದ್ದು, ‘ಕಪೂರ್ ಆಗಲಿ, ಅವರ ಮಲತಾಯಿ ಪ್ರಿಯಾ ಕಪೂರ್ ಅಥವಾ ಇತರ ಯಾವುದೇ ವ್ಯಕ್ತಿಗಳು ವಿಲ್ ಬಗ್ಗೆ ಉಲ್ಲೇಖಿಸಿಲ್ಲ. ಪ್ರಿಯಾ ಅವರ ನಡವಳಿಕೆ ನೋಡಿದರೆ ವಿಲ್ ಅವರೇ ರಚಿಸಿದ್ದಾರೆ ಎನ್ನುವ ಸಂಶಯ ಮೂಡುತ್ತದೆ’ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಮಾರಾಟ ಆಗದ ವಸ್ತುಗಳ ಎಂಆರ್‌ಪಿ ಪರಿಷ್ಕರಿಸಿ: ಜೋಶಿ
ನವದೆಹಲಿ : ಸೆ.22ರಿಂದ ಜಿಎಸ್ಟಿ ಪರಿಷ್ಕರಣೆ ಆಗುತ್ತಿರುವ ಹಿನ್ನೆಲೆಯಲ್ಲಿ, ಮಾರಾಟವಾಗದ ದಾಸ್ತಾನುಗಳ ಮೇಲಿನ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಪರಿಷ್ಕರಿಸುವಂತೆ ತಯಾರಕರಿಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸೂಚಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಹೊಸ ಜಿಎಸ್ಟಿ ದರಗಳ ಪ್ರಕಾರ ತಯಾರಕರು, ಪ್ಯಾಕರ್‌ಗಳು ಮತ್ತು ಆಮದುದಾರರು 2025ರ ಡಿ.31ರವರೆಗೆ ಅಥವಾ ಸ್ಟಾಕ್ ಇರುವ ತನಕ ಮಾರಾಟವಾಗದ ದಾಸ್ತಾನುಗಳ ಮೇಲಿನ ಎಂಆರ್‌ಪಿಯನ್ನು ಪರಿಷ್ಕರಿಸಬಹುದು. ಹೊಸ ದರವನ್ನು ಸ್ಟಿಕರ್/ ಸ್ಟ್ಯಾಂಪ್/ಆನ್‌ಲೈನ್ ಮುದ್ರಣದೊಂದಿಗೆ ತೋರಿಸಬೇಕು, ಹಳೆಯ ದರವೂ ಕಾಣುವಂತಿರಬೇಕು. ಬೆಲೆಯಲ್ಲಿ ಯಾವುದೇ ಹೆಚ್ಚಳ ಅಥವಾ ಇಳಿಕೆ ತೆರಿಗೆ ಬದಲಾವಣೆಗೆ ಅನುಗುಣವಾಗಿರಬೇಕು’ ಎಂದಿದ್ದಾರೆ.
ಜಿಎಸ್ಟಿ ಕಡಿತ ಎಫೆಕ್ಟ್: ಜಾಗ್ವಾರ್ ಕಾರು ಮೌಲ್ಯ ₹30 ಲಕ್ಷವರೆಗೆ ಕಡಿತ
ನವದೆಹಲಿ: ಜಿಎಸ್ಟಿ ದರ ಇಳಿಕೆ ಕಾರಣ ತಕ್ಷಣವೇ ಅನ್ವಯವಾಗುವಂತೆ 4.5 ಲಕ್ಷ ರು.ನಿಂದ 30.4 ಲಕ್ಷ ರು.ವರೆಗೆ ತನ್ನ ವಿವಿಧ ಕಾರುಗಳ ದರ ಕಡಿತಗೊಳಿಸಲಾಗುವುದು ಎಂದು ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್‌ಆರ್) ಕಂಪನಿ ಮಂಗಳವಾರ ಹೇಳಿದೆ.ರೇಂಜ್ ರೋವರ್, ಡಿಫೆಂಡರ್ ಮತ್ತು ಡಿಸ್ಕವರಿ ಕಾರುಗಳ ಬೆಲೆ ಕಡಿತವನ್ನು ಗ್ರಾಹಕರು ನೋಡಬಹುದು ಎಂದು ಕಂಪನಿ ಹೇಳಿದೆ.
ಇದೇ ವೇಳೆ, ಇದೇ ತಿಂಗಳು ತಾನೂ ಕಾರುಗಳ ಮೌಲ್ಯ ಇಳಿಸುವುದಾಗಿ ವೊಲ್ವೊ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.ಇತ್ತೀಚೆಗೆ ವಿವಿಧ ಕಾರು ಉತ್ಪಾದಕರು ಜಿಎಸ್ಟಿ ಕಡಿತ ಕಾರಣ ಭಾರಿ ಬೆಲೆ ಇಳಿಕೆ ಘೋಷಿಸಿದ್ದರು.
ಸಮಂಜಸ ಸಮಯದಲ್ಲಿ ಮಸೂದೆಗೆ ಸಹಿ ಅಗತ್ಯ: ಸುಪ್ರೀಂ
ನವದೆಹಲಿ: ಶಾಸಕಾಂಗವು ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವ ಅಧಿಕಾರವನ್ನು ನಿಯಂತ್ರಿಸುವ ಸಂವಿಧಾನದ 200ನೇ ವಿಧಿಯಲ್ಲಿ ‘ಸಾಧ್ಯವಾದಷ್ಟು ಬೇಗ ಅಂಗೀಕರಿಸಬೇಕು’ ಎಂಬ ಪದ ಇಲ್ಲದಿದ್ದರೂ, ರಾಜ್ಯಪಾಲರು ‘ಸಮಂಜಸವಾದ ಸಮಯದಲ್ಲಿ’ ರಾಜ್ಯಪಾಲರು ಮಸೂದೆಗೆ ಅಂಗೀಕಾರ ನೀಡಬೇಕು ಎಂದು ಅಪೇಕ್ಷಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರು ಅಂಗೀಕಾರವಾದ ಮಸೂದೆಗಳಿಗೆ 3 ತಿಂಗಳಲ್ಲಿ ಸಹಿ ಹಾಕಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಆದೇಶಿಸಿತ್ತು. ಹೀಗಾಗಿ ರಾಷ್ಟ್ರಪತಿಗಳು ತಮಗೇ ಸುಪ್ರೀಂ ಕೋರ್ಟು ಆದೇಶಿಸಿದ ವಿಷಯದ ಬಗ್ಗೆ ಕೋರ್ಟಿನಿಂದ ಕೆಲವು ಸ್ಪಷ್ಟನೆಗಳನ್ನು ಬಯಸಿದ್ದರು. ಈ ವಿಚಾರಣೆ ವೇಳೆ ಕೋರ್ಟು ಈ ಅಭಿಪ್ರಾಯ ವ್ಯಕ್ತಪಡಿಸಿದೆ.