ಸಾರಾಂಶ
ಹೈದರಾಬಾದ್: ಅಕ್ರಮ ಹಣ ಗಳಿಸಿರುವ ಆನ್ಲೈನ್ ಬೆಟ್ಟಿಂಗ್ ಆ್ಯಪ್‌ಗಳ ಪರ ಪ್ರಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್ ಜಾರಿ ನಿರ್ದೇಶನಾಲಯದ (ಇ.ಡಿ.) ವಿಚಾರಣೆಗೆ ಬುಧವಾರ ಹಾಜರಾಗಿ ವಿಚಾರಣೆ ಎದುರಿಸಿದರು.
ವಿಚಾರಣೆ ಬಳಿಕ ಮಾತನಾಡಿದ ಅವರು, ‘ಇದು ಬೆಟ್ಟಿಂಗ್ ಆ್ಯಪ್‌ಗಳ ಹಣ ವರ್ಗಾವಣೆ ಪ್ರಕರಣ. 2016ರಲ್ಲಿ ನಾನಿದರಲ್ಲಿ ತೊಡಗಿಕೊಂಡಿದ್ದೆ (ಪ್ರಚಾರದಲ್ಲಿ). ನೈತಿಕತೆಯ ಆಧಾರದ ಮೇಲೆ, ನಾನು ಅದನ್ನು ಮುಂದುವರಿಸಲಿಲ್ಲ. ನಾನು ಅದರಿಂದ ಹಣ ಗಳಿಸಲು ಬಯಸದ ಕಾರಣ ನನಗೆ ಯಾವುದೇ ಹಣ ಬಂದಿಲ್ಲ ಎಂದು ನಾನು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ.
ಅವರು ಎಲ್ಲಾ ವಿವರಗಳನ್ನು ತೆಗೆದುಕೊಂಡು ವಿಚಾರಣೆಯನ್ನು ಪೂರ್ಣಗೊಳಿಸಿದ್ದಾರೆ. ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ನಾಗರಿಕನಾಗಿ ನಾನು ಸಹಕರಿಸಬೇಕು ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಬೇಕು. ಇದರಲ್ಲಿ ಯಾವುದೇ ಮಾಟಗಾರಿಕೆಯೋ, ರಾಜಕೀಯ ಪ್ರೇರಣೆಯೋ ಇಲ್ಲ’ ಎಂದರು.ಪ್ರಕಾಶ್ ರಾಜ್ ಜೊತೆಗೆ ನಟ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ನಟಿ ಪ್ರಣೀತಾ ಸುಭಾಷ್, ಲಕ್ಷ್ಮೀ ಮಂಚು ಸೇರಿ 29 ಚಿತ್ರತಾರೆಯರು, ಸಾಮಾಜಿಕ ಜಾಲತಾಣ ಪ್ರಭಾವಿಗಳು ವಿಚಾರಣೆಗೆ ಹಾಜರಾಗುವಂತೆ ಜು.10ರಂದು ಇ.ಡಿ ಸಮನ್ಸ್ ಜಾರಿಗೊಳಿಸಿತ್ತು.
ಆ.6ರಂದು ದೇವರಕೊಂಡ, ಆ.3ರಂದು ಲಕ್ಷ್ಮೀ ಮಂಚು, ಆ,11ಕ್ಕೆ ದಗ್ಗುಬಾಟಿ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಇ.ಡಿ ತಿಳಿಸಿದೆ.