ಸಾರಾಂಶ
ಮುತ್ತಿನ ನಗರಿಯ ಹಳೆ ಹೈದ್ರಾಬಾದ್ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ವಿತರಣೆ ಮತ್ತು ವಿದ್ಯುತ್ ಬಿಲ್ ವಸೂಲಿ ಹೊಣೆಯನ್ನು ಗೌತಮ್ ಅದಾನಿ ಒಡೆತನದ ಅದಾನಿ ಸಮೂಹಕ್ಕೆ ನೀಡಲು ತೆಲಂಗಾಣದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.
ಹೈದರಾಬಾದ್: ಮುತ್ತಿನ ನಗರಿಯ ಹಳೆ ಹೈದ್ರಾಬಾದ್ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ವಿತರಣೆ ಮತ್ತು ವಿದ್ಯುತ್ ಬಿಲ್ ವಸೂಲಿ ಹೊಣೆಯನ್ನು ಗೌತಮ್ ಅದಾನಿ ಒಡೆತನದ ಅದಾನಿ ಸಮೂಹಕ್ಕೆ ನೀಡಲು ತೆಲಂಗಾಣದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.
‘ಅದಾನಿ ಮತ್ತು ಅಂಬಾನಿ ಮಿತ್ರರು. ಅವರಿಗೆ ಲಾಭ ಮಾಡಿಕೊಡುವಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಯೋಜನೆ ರೂಪಿಸುತ್ತಿದ್ದಾರೆ’ ಎಂದು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಅವರ ಸತತ ಆರೋಪ, ಟೀಕೆಯ ನಡುವೆಯೇ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.ಹಳೆ ಹೈದ್ರಾಬಾದ್ ಭಾಗದಲ್ಲಿ ವಿದ್ಯುತ್ ಬಿಲ್ ಸರಿಯಾಗಿ ಪಾವತಿಯಾಗುತ್ತಿಲ್ಲ, ವಸೂಲಿಗೆ ಹೋದ ಸಿಬ್ಬಂದಿ ಮೇಲೆ ಹಲ್ಲೆಯಂಥ ಘಟನೆ ನಡೆಯುತ್ತಿದೆ. ಹೀಗಾಗಿ ಬಿಲ್ ವಸೂಲಿ ಹೊಣೆಯನ್ನು ಅದಾನಿ ಕಂಪನಿಗೆ ನೀಡಲಾಗಿದೆ. ಈ ಕುರಿತು ಉಭಯ ಬಣಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರನ್ವಯ ಬಾಕಿ ವಿದ್ಯುತ್ ಬಿಲ್‌ನಲ್ಲಿ ಶೇ.75ರಷ್ಟು ಸರ್ಕಾರಕ್ಕೆ ಸೇರಿದರೆ ಶೇ.25ರಷ್ಟು ಅದಾನಿ ಸಮೂಹಕ್ಕೆ ಹೋಗಲಿದೆ. ಇದು ಪ್ರಾಯೋಗಿಕ ಯೋಜನೆಯಾಗಿದ್ದು ಮುಂದೆ ಇಡೀ ನಗರದ ಹೊಣೆಯನ್ನು ಅದಾನಿ ಸಮೂಹಕ್ಕೆ ನೀಡಲಾಗುವುದು ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಪ್ರಕಟಿಸಿದ್ದಾರೆ.
ಈ ನಡುವೆ ಸರ್ಕಾರದ ಕ್ರಮವನ್ನು ಬಿಆರ್‌ಎಸ್ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಇದು ಹಗಲು ದರೋಡೆ. ಸಂಗ್ರಹವಾದ ಮೊತ್ತದಲ್ಲಿ ಶೇ.25% ಅದಾನಿ ಬೊಕ್ಕಸಕ್ಕೆ ಹೋಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.