ಸಾರಾಂಶ
ಭಾರತೀಯ ಜನತಾ ಪಕ್ಷಕ್ಕೆ ದೇಶವ್ಯಾಪಿ ವಿಸ್ತಾರ ಸಿಕ್ಕಿದ್ದು, ಬಿಜೆಪಿಗೆ ಹಿಂದುತ್ವದ ಟಚ್ ನೀಡಿದ್ದು ಅಡ್ವಾಣಿ. ಪಕ್ಷಕ್ಕೆ ಇಂಥದ್ದೊಂದು ಹಿಂದುತ್ವದ ಲೇಪ ನೀಡಲು ಅಡ್ವಾಣಿ ಅವರು ಅಯೋಧ್ಯೆ ರಾಮಜನ್ಮಭೂಮಿ ಆಂದೋಲನವನ್ನು ಬಳಸಿಕೊಂಡರು.
3 ದಶಕಗಳ ಹಿಂದೆ ಹೀಗೆ ಅಡ್ವಾಣಿ ಆರಂಭಿಸಿದ್ದ ಆಂದೋಲನ ಕಳೆದ ಜ.22ರಂದು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ಉದ್ಘಾಟನೆಯೊಂದಿಗೆ ತಾರ್ಕಿಕ ಅಂತ್ಯಕಂಡಿತ್ತು.
ಹೀಗೆ ಮಂದಿರ ಉದ್ಘಾಟನೆ ತರುವಾಯ ಅಡ್ವಾಣಿ ಅವರನ್ನು ದೇಶದ ಅತ್ಯುನ್ನತ ನಾಗರಿಕ ಗೌರವ ಹುಡುಕಿಕೊಂಡು ಬಂದಿದ್ದು ಕಾಕತಾಳೀಯ.
ಮಂದಿರ ಆಂದೋಲನ: 1989ರಲ್ಲಿ ಆಡ್ವಾಣಿ ನೇತೃತ್ವದಲ್ಲಿ ಬಿಜೆಪಿ ರಾಮಜನ್ಮಭೂಮಿ ಆಂದೋಲನ ಆರಂಭಿಸಿತ್ತು. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಇರುವ ಜಾಗದಲ್ಲಿ ರಾಮ ಮಂದಿರ ನಿರ್ಮಿಸಬೇಕು ಎಂಬುದು ಪಕ್ಷದ ಒತ್ತಾಯವಾಗಿತ್ತು.
ಇದಕ್ಕಾಗಿ ಆಡ್ವಾಣಿ 1990 ಸೆ.25ರಂದು ಸೋಮನಾಥಪುರದಿಂದ ಅಯೋಧ್ಯೆಗೆ ರಾಮರಥ ಯಾತ್ರೆ ನಡೆಸಿದ್ದರು. ಬಳಿಕ ನ್ಯಾಯಾಲಯದಲ್ಲೂ ಪ್ರಕರಣದ ವಿಚಾರಣೆಗೆ ತೀವ್ರತೆ ಬಂದು, ಅಂತಿಮವಾಗಿ ಹಿಂದೂಗಳ ಪರ ನ್ಯಾಯಾಲಯ ತೀರ್ಪು ನೀಡಿತ್ತು.
ಅದರಂತೆ ನಿರ್ಮಾಣಗೊಂಡ ಮಂದಿರ ಇತ್ತಿಚೆಗೆ ಉದ್ಘಾಟನೆಗೊಂಡಿತ್ತು. ವಯೋಸಹಜ ಕಾರಣಗಳಿಂದಾಗಿ ಉದ್ಘಾಟನಾ ಕಾರ್ಯಕ್ರಮದಿಂದ ಅಡ್ವಾಣಿ ದೂರ ಉಳಿದಿದ್ದರು.
ಅದರ ಬೆನ್ನಲ್ಲೇ ಇದೀಗ ಅವರ ಸುದೀರ್ಘ ರಾಜಕೀಯ ಜೀವನ ಮತ್ತು ದೇಶಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ಭಾರತ ರತ್ನ ಪ್ರಶಸ್ತಿ ಒಲಿದುಬಂದಿದೆ.