ಸಾರಾಂಶ
ಮುಂಬೈ: ಇನ್ನೇನು ಘೋಷಣೆಯಾಗಿಯೇ ಬಿಟ್ಟಿತು ಎಂಬ ಹಂತ ತಲುಪಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ದಿಢೀರ್ ಅನಿಶ್ಚಿತತೆಗೆ ದೂಡಲ್ಪಟ್ಟಿದೆ. ಗುರುವಾರ ದೆಹಲಿಯಲ್ಲಿ ಬಿಜೆಪಿ ವರಿಷ್ಠರಾದ ಅಮಿತ್ ಶಾ ಹಾಗೂ ಜೆ.ಪಿ. ನಡ್ಡಾ ಸಮ್ಮುಖ ನಡೆದ ಮಾತುಕತೆ ಬಳಿಕ ಮುಂಬೈನಲ್ಲಿ ಶುಕ್ರವಾರ ಜರುಗಬೇಕಿದ್ದ ಮಹಾಯುತಿ ರಾಜ್ಯ ನಾಯಕರ ಮತ್ತೊಂದು ಸಭೆ ಹಠಾತ್ ಮುಂದೆ ಹೋಗಿದೆ. ಇದಕ್ಕೆ ಕಾರಣ- ಹಾಲಿ ಸಿಎಂ ಏಕನಾಥ ಶಿಂಧೆ ಅವರು ದಿಢೀರ್ ತಮ್ಮ ತವರೂರಿಗೆ ತೆರಳಿದ್ದು.
ಮುಂಬೈನಲ್ಲಿ ಮಹಾಯುತಿ ನಾಯಕರ ಮುಂದಿನ ಸಭೆ ಶುಕ್ರವಾರ ನಡೆಯಲಿದೆ ಎಂದು ಗುರುವಾರ ತಡರಾತ್ರಿಯಷ್ಟೇ ಶಿಂಧೆ ತಿಳಿಸಿದ್ದರು. ಆದರೆ ಅವರು ದಿಢೀರನೆ ಸತಾರಾ ಜಿಲ್ಲೆಯಲ್ಲಿರುವ ತಮ್ಮ ಸ್ವಗ್ರಾಮ ದರೆಗೆ ಹೊರಟರು. ಹೀಗಾಗಿ ಸಭೆ ಭಾನುವಾರಕ್ಕೆ ಮುಂದೂಡಿಕೆಯಾಗಿದೆ.
ಐತಿಹಾಸಿಕ ಜಯಭೇರಿ ಬಾರಿಸಿರುವ ಮಹಾಯುತಿಯಿಂದ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರೇ ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ. ಏಕನಾಥ ಶಿಂಧೆ ಹಾಗೂ ಅಜಿತ್ ಪವಾರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನದ ಆಫರ್ ನೀಡಲಾಗಿದೆ. ಆದರೆ ಎರಡೂವರೆ ವರ್ಷ ಸಿಎಂ ಆಗಿದ್ದ ತಾವು ಡಿಸಿಎಂ ಆಗಬೇಕೇ ಎಂಬ ಅರೆಮನಸ್ಸು ಶಿಂಧೆ ಅವರಿಗೆ ಇದೆ. ಹೀಗಾಗಿ ಈ ವಿಚಾರ ಗೊಂದಲಕ್ಕೆ ಕಾರಣವಾಗಿದೆ ಎನ್ನಲಾಗಿದೆ.