ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ವಿಚಾರದಲ್ಲಿ ಟೀಕೆ : ಪಾಕ್‌ ಪ್ರಜೆಗಳಿಗೆ ಅಮೆರಿಕ ಪ್ರವೇಶಕ್ಕೆ ನಿರ್ಬಂಧ?

| N/A | Published : Mar 07 2025, 12:45 AM IST / Updated: Mar 07 2025, 07:22 AM IST

ಸಾರಾಂಶ

ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ವಿಚಾರದಲ್ಲಿ ವಿಶ್ವಮಟ್ಟದಲ್ಲಿ ಟೀಕೆಗೆ ಗುರಿಯಾಗಿರುವ ಪಾಕಿಸ್ತಾನ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮುಖಭಂಗ ಅನುಭವಿಸುವ ನಿರೀಕ್ಷೆ ಇದೆ.

ವಾಷಿಂಗ್ಟನ್‌: ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ವಿಚಾರದಲ್ಲಿ ವಿಶ್ವಮಟ್ಟದಲ್ಲಿ ಟೀಕೆಗೆ ಗುರಿಯಾಗಿರುವ ಪಾಕಿಸ್ತಾನ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮುಖಭಂಗ ಅನುಭವಿಸುವ ನಿರೀಕ್ಷೆ ಇದೆ. ಮುಂದಿನ ವಾರ ಅಮೆರಿಕವು ಅಫ್ಘಾನಿಸ್ತಾನ ಸೇರಿ ಕೆಲ ದೇಶಗಳ ಪ್ರಜೆಗಳಿಗೆ ತನ್ನ ದೇಶಕ್ಕೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಿದ್ದು, ಆ ಪಟ್ಟಿಯಲ್ಲಿ ಪಾಕಿಸ್ತಾನದ ಹೆಸರೂ ಇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಅಮೆರಿಕ ಪ್ರವೇಶಿಸುವ ವ್ಯಕ್ತಿಗಳ ತಪಾಸಣೆ ತೀವ್ರಗೊಳಿಸುವಂತೆ ಹಾಗೂ ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡುವ ವ್ಯಕ್ತಿಗಳನ್ನು ಗುರುತಿಸುವಂತೆ ಜ.20ರಂದು ಟ್ರಂಪ್‌ ಸರ್ಕಾರ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಇಂಥ ನಿರ್ಬಂಧ ಹೊರಬೀಳುವ ನಿರೀಕ್ಷೆ ಇದೆ. ಕೆಲ ದೇಶಗಳ ಪ್ರಜೆಗಳ ಪೂರ್ವಾಪರ ಮಾಹಿತಿ ಸಂಗ್ರಹ ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ಆ ದೇಶದಿಂದ ಆಗಮಿಸುವವರ ಮೇಲೆ ಪೂರ್ಣ ಅಥವಾ ಭಾಗಶಃ ನಿರ್ಬಂಧ ಹೇರುವ ಸಾಧ್ಯತೆ ಇದೆ. ಇಂಥ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ ಹೆಸರೂ ಇದ್ದರೂ ಅಚ್ಚರಿ ಇಲ್ಲ ಎಂದು ಕೆಲ ಮೂಲಗಳು ತಿಳಿಸಿವೆ.

2021ರಲ್ಲಿ ಸಂಭವಿಸಿದ ಕಾಬೂಲ್‌ನ ಅಬ್ಬೇಗೇಟ್‌ ಬಾಂಬ್‌ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಉಗ್ರ ಮೊಹಮ್ಮದ್‌ ಶರೀಫುಲ್ಲಾನನ್ನು ಅಮೆರಿಕಕ್ಕೆ ಇತ್ತೀಚೆಗಷ್ಟೇ ಪಾಕಿಸ್ತಾನ ಹಸ್ತಾಂತರಿಸಿತ್ತು. ಈ ಸ್ಫೋಟದಲ್ಲಿ ಅಮೆರಿಕದ 13 ಯೋಧರು ಮತ್ತು 170 ಅಫ್ಘಾನಿಸ್ತಾನಿಯರು ಮೃತಪಟ್ಟಿದ್ದರು. ಆ ದಾಳಿಕೋರನನ್ನು ಬಂಧಿಸಲು ನೆರವು ನೀಡಿದ ಪಾಕಿಸ್ತಾನ ಸರ್ಕಾರಕ್ಕೆ ಬಹಿರಂಗವಾಗಿಯೇ ಟ್ರಂಪ್‌ ಧನ್ಯವಾದ ಹೇಳಿದ್ದರು. ಇದರ ಬೆನ್ನಲ್ಲೇ ಪಾಕಿಸ್ತಾನದ ಮೇಲೆ ಇಂಥದ್ದೊಂದು ನಿರ್ಬಂಧದ ತೂಗುಗತ್ತಿ ನೇತಾಡುತ್ತಿದೆ.