ಸಾರಾಂಶ
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ (ಬಿಜೆಪಿ, ಶಿಂಧೆಯ ಶಿವಸೇನೆ, ಅಜಿತ್‌ರ ಎನ್‌ಸಿಪಿ) ಅಭೂತಪೂರ್ವ ಗೆಲುವು ಸಾಧಿಸುತ್ತಿದ್ದಂತೆ ಇದೀಗ ಸಿಎಂ ಗದ್ದುಗೆಗೆ ಏರುವವರು ಯಾರು ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ.
ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ (ಬಿಜೆಪಿ, ಶಿಂಧೆಯ ಶಿವಸೇನೆ, ಅಜಿತ್‌ರ ಎನ್‌ಸಿಪಿ) ಅಭೂತಪೂರ್ವ ಗೆಲುವು ಸಾಧಿಸುತ್ತಿದ್ದಂತೆ ಇದೀಗ ಸಿಎಂ ಗದ್ದುಗೆಗೆ ಏರುವವರು ಯಾರು ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. ತಮ್ಮ ನಾಯಕರನ್ನೇ ಆ ಹುದ್ದೆಯಲ್ಲಿ ಕಾಣಲು ಮೈತ್ರಿಕೂಟದ ಮೂರೂ ಪಕ್ಷಗಳು ಬಯಸಿವೆ.
ಆದರೆ, ಚುನಾವಣೆಯಲ್ಲಿ ಪ್ರಬಲ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯ ನಾಯಕ, ಡಿಸಿಎಂ ದೇವೇಂದ್ರ ಫಡ್ನವೀಸ್ ಸಿಎಂ ಆಗುವ ಸಾಧ್ಯತೆ ದಟ್ಟವಾಗಿವೆ. ಇದಕ್ಕೆ ಪೂರಕವಾದ ಹೇಳಿಕೆಗಳು ಕೆಲ ಬಿಜೆಪಿ ನಾಯಕರಿಂದ ಬರತೊಡಗಿವೆ.
ಅತ್ತ ಶಿಂಧೆ ಇನ್ನೂ ಒಂದು ಅವಧಿಗೆ ಸಿಎಂ ಸ್ಥಾನದಲ್ಲಿ ಮುಂದುವರೆಯಲು ಅರ್ಹರು ಎಂದು ಶಿವಸೇನೆ ಪ್ರತಿಪಾದಿಸಿದೆ. ಎನ್‌ಸಿಪಿ ಒಂದು ಹೆಜ್ಜೆ ಮುಂದೆ ಹೋಗಿ ಫಲಿತಾಂಶದ ಮುನ್ನಾ ದಿನವೇ ಅಜಿತ್ ಪವಾರ್ ಅವರನ್ನು ಸಿಎಂ ಎಂದು ಬಿಂಬಿಸುವ ಪೋಸ್ಟರ್‌ಗಳನ್ನು ರಾಜ್ಯಾದ್ಯಂತ ಅಳವಡಿಸಿತ್ತು.
ಈ ಕುರಿತು ಮಾತನಾಡಿರುವ ಸಿಎಂ ಶಿಂಧೆ, ‘ಮಹಾಯುತಿ ಕೂಟವು ಐತಿಹಾಸಿಕ ಗೆಲುವು ಸಾಧಿಸಿದ್ದು, ಮುಂದಿನ ಸಿಎಂ ಯಾರಾಗುತ್ತಾರೆ ಎಂಬ ಬಗ್ಗೆ ಒಟ್ಟಾಗಿ ಚರ್ಚಿಸಿ ನಿರ್ಧರಿಸುತ್ತೇವೆ’ ಎಂದರು. ದೇವೇಂದ್ರ ಫಡ್ನವೀಸ್ ಕೂಡ, ‘ಮಹಾಯುತಿ ಶಾಸಕರ ಸಭೆಯಲ್ಲಿ ಮುಂದಿನ ಸಿಎಂ ಬಗ್ಗೆ ನಿರ್ಧಾರ ಆಗಲಿದೆ’ ಎಂದು ಸ್ಪಷ್ಟಪಡಿಸಿದರು.
ಶಿವಸೇನೆಯನ್ನು ಒಡೆದು ಏಕನಾಥ್ ಶಿಂಧೆ 2022ರಲ್ಲಿ ಸರ್ಕಾರ ಬೀಳಿಸಿ ಬಿಜೆಪಿ ಜೊತೆ ಕೈಜೋಡಿಸಿ ತಾವೇ ಮುಖ್ಯಮಂತ್ರಿಯಾಗಿದ್ದರು. ಆಗ ಹಿಂದೆ ಸಿಎಂ ಆಗಿದ್ದ ಫಡ್ನವೀಸ್‌ರನ್ನು ಡಿಸಿಎಂ ಹುದ್ದೆಗೆ ಹಿಂಬಡ್ತಿ ಮಾಡಲಾಗಿತ್ತು.
ಫಡ್ನವೀಸ್ ನಾಯಕತ್ವದಲ್ಲಿ 2ನೇ ಬಾರಿ ಜಯ
ಮುಂಬೈ: ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಶಿಂಧೆಯವರ ಶಿವಸೇನೆಯ ಹಾಗೂ ಅಜಿತ್ ಪವಾರ್ ಅವರ ಎನ್‌ಸಿಪಿ ಒಟ್ಟಾಗಿ ಮಹಾಯುತಿ ಮೈತ್ರಿಕೂಟದ ಹೆಸರಲ್ಲಿ ವಿಧಾನಸಭೆ ಚುನಾವಣೆಗೆ ಧುಮುಕಿದ್ದು, ಡಿಸಿಎಂ ದೇವೇಂದ್ರ ಫಡ್ನವೀಸ್ ಅವರ ನಾಯಕತ್ವದಲ್ಲಿ ಜಯ ಸಾಧಿಸಿದ್ದಾರೆ. ಈ ಮೂಲಕ ಅವರ ಮುಂದಾಳತ್ವದಲ್ಲಿ ಬಿಜೆಪಿ ಗೆದ್ದ 2ನೇ ಚುನಾವಣೆ ಇದಾಗಿದೆ.ಈ ಮೊದಲು 2019ರಲ್ಲಿ ನಡೆದ ವಿಧಾನಸಭೆ ಚುನಾವಣೆಯನ್ನೂ ಬಿಜೆಪಿ ಫಡ್ನವೀಸ್‌ರ ನೇತೃತ್ವದಲ್ಲೇ ಎದುರಿಸಿತ್ತು ಹಾಗೂ ಜಯಭೇರಿ ಬಾರಿಸಿತ್ತು. ಆದರೆ 2019ರಲ್ಲಿ ಅವರು ಸಿಎಂ ಆಗಲು ಸಾಧ್ಯವಾಗಿರಲಿಲ್ಲ.