ವೈದ್ಯೆಯ ರೇಪ್‌ ಹಾಗೂ ಕೊಲೆ ಸಂಭವಿಸಿದ ಕೋಲ್ಕತಾದ ಆರ್‌ಜಿ ಕರ್‌ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಪುಂಡರ ದಾಂಧಲೆ, ಧ್ವಂಸ

| Published : Aug 16 2024, 12:55 AM IST / Updated: Aug 16 2024, 05:15 AM IST

ವೈದ್ಯೆಯ ರೇಪ್‌ ಹಾಗೂ ಕೊಲೆ ಸಂಭವಿಸಿದ ಕೋಲ್ಕತಾದ ಆರ್‌ಜಿ ಕರ್‌ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಪುಂಡರ ದಾಂಧಲೆ, ಧ್ವಂಸ
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯೆಯ ರೇಪ್‌ ಹಾಗೂ ಕೊಲೆ ಸಂಭವಿಸಿದ ಕೋಲ್ಕತಾದ ಆರ್‌ಜಿ ಕರ್‌ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ, ಕೃತ್ಯ ಖಂಡಿಸಿ ವೈದ್ಯರು ಬುಧವಾರ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ವೇಳೆ, ಸುಮಾರು 40 ಗೂಂಡಾಗಳು ಏಕಾಏಕಿ ನುಗ್ಗಿ ಗೂಂಡಾಗಿರಿ ನಡೆಸಿದ್ದಾರೆ 

ಕೋಲ್ಕತಾ: ವೈದ್ಯೆಯ ರೇಪ್‌ ಹಾಗೂ ಕೊಲೆ ಸಂಭವಿಸಿದ ಕೋಲ್ಕತಾದ ಆರ್‌ಜಿ ಕರ್‌ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ, ಕೃತ್ಯ ಖಂಡಿಸಿ ವೈದ್ಯರು ಬುಧವಾರ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ವೇಳೆ, ಸುಮಾರು 40 ಗೂಂಡಾಗಳು ಏಕಾಏಕಿ ನುಗ್ಗಿ ಗೂಂಡಾಗಿರಿ ನಡೆಸಿದ್ದಾರೆ ಹಾಗೂ ಆಸ್ಪತ್ರೆಯ ಹಲವು ಭಾಗಗಳನ್ನು ಧ್ವಂಸ ಮಾಡಿದ್ದಾರೆ. ಈ ಕೃತ್ಯ ನಡೆಸಿದ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಇದರ ಬೆನ್ನಲ್ಲೇ ಅತ್ಯಾಚಾರ ಹಾಗೂ ಕೊಲೆ ನಡೆದ ಕಾಲೇಜಿನ ಸೆಮಿನಾರ್‌ ಹಾಲ್‌ ಮೇಲೆ ದಾಳಿ ಮಾಡಿ ಸಾಕ್ಷ್ಯ ನಾಶಕ್ಕೆ ಇವರು ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಆದರೆ ಇದನ್ನು ತಳ್ಳಿಹಾಕಿರುವ ಕೋಲ್ಕತಾ ಪೊಲೀಸರು, ‘ಕಾಲೇಜಿಗೆ ನುಗ್ಗಿದ ಕೆಲವರು 4ನೇ ಮಹಡಿಯನ್ನು ಸಂಪೂರ್ಣ ಧ್ವಂಸ ಗೊಳಿಸಿದ್ದಾರೆ. ಆದರೆ ಘಟನೆ ನಡೆದ ಸೆಮಿನಾರ್‌ ಕೊಠಡಿಯನ್ನು ಧ್ವಂಸಗೊಳಿಸಿಲ್ಲ ಹಾಗೂ ಸಾಕ್ಷ್ಯವನ್ನು ನಾಶ ಪಡಿಸಿಲ್ಲ. ಯಾರೂ ಸುಳ್ಳು ಸುದ್ದಿಯನ್ನು ಹರಡಬೇಡಿ. ಈ ರೀತಿ ಸುಳ್ಳುಸುದ್ದಿ ಹರಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ‘ ಎಂದು ಹೇಳಿದ್ದಾರೆ.

ಆಗಿದ್ದೇನು?:

ವೈದ್ಯೆ ಹತ್ಯೆ ಪ್ರತಿಭಟನೆ ಬುಧವಾರ ತಡರಾತ್ರಿ ಆರ್‌ಜಿ ಕರ್‌ ಕಾಲೇಜಲ್ಲೇ ವೈದ್ಯರು ಮೋಂಬತ್ತಿ ಪ್ರತಿಭಟನೆ ನಡೆಸುತ್ತಿದ್ದರು. ಆಗ ಕಾಲೇಜಿನೊಳಗೆ ನುಗ್ಗಿದ ಅಪರಿಚಿತರ ಗುಂಪೊಂದು ಆಸ್ಪತ್ರೆಯ 4ನೇ ಅಂತಸ್ತಿಗೆ ನುಗ್ಗಿ ದಾದಿಯರ ಕೋಣೆ ಸೇರಿದಂತೆ ಹಲವು ವಿಭಾಗಗಳ ವಸ್ತುಗಳನ್ನು ಧ್ವಂಸ ಮಾಡಿದೆ.

ಪೊಲೀಸರ ಪ್ರಕಾರ ಸುಮಾರು 40 ಮಂದಿ ತಮ್ಮ ಗುರುತನ್ನು ಮರೆಮಾಚಿ ಆಸ್ಪತ್ರೆಯೊಳಗೆ ನುಗ್ಗಿದ್ದಾರೆ. ಅಲ್ಲದೇ ಪ್ರತಿಭಟಿಸುತ್ತಿದ್ದ ವೈದ್ಯರ ಮೇಲೆಯೂ ಹಲ್ಲೆ ನಡೆಸಿದ್ದು, ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದ ವಾಹನಗಳನ್ನು ಪುಡಿಗಟ್ಟಿದ ಪ್ರಸಂಗವೂ ನಡೆದಿದೆ. ಉದ್ರಿಕ್ತ ಗುಂಪು ಚದುರಿಸಲು ಪೊಲೀಸರು ಆಶ್ರುವಾಯು ಪ್ರಯೋಗಿಸಬೇಕಾಗಿ ಬಂತು. ಈ ಗಲಾಟೆಯಲ್ಲಿ ಪೊಲೀಸರು ಕೂಡ ಗಾಯಗೊಂಡ ಘಟನೆಯೂ ನಡೆಯಿತು.

‘ಗೂಂಡಾಳುಗಳು ಕ್ಯಾಂಪಸ್‌ ಒಳಗೆ ನುಗ್ಗಿ, ಉದ್ರೇಕದಿಂದ ವೈದ್ಯರ ಮೇಲೆ ಹಲ್ಲೆ ನಡೆಸಿದರು. ಇದು ನೈತಿಕತೆಯನ್ನು ಕುಗ್ಗಿಸುವ ಪ್ರಯತ್ನ’ ಎಂದು ಪ್ರತಿಭಟನಾನಿರತ ವೈದ್ಯರು ಆರೋಪಿಸಿದ್ದಾರೆ.ಹಿಂಸಾಚಾರಕ್ಕೆ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ವಿರೋಧವನ್ನು ವ್ಯಕ್ತ ಪಡಿಸಿದದ್ದು, ರಾಜ್ಯ ಸಂಘಟನೆಗಳ ಜೊತೆಗೆ ಸಭೆ ಕರೆದು, ಮುಂದಿನ ತೀರ್ಮಾನಗಳ ಬಗ್ಗೆ ಚರ್ಚಿಸಲಾಗುವುದು ಎಂದಿದೆ.

ರಾಜಕೀಯ ಕಚ್ಚಾಟ:ಈ ಗಲಭೆ ಕೂಡ ರಾಜಕೀಯ ಕಚ್ಚಾಟಕ್ಕೆ ಕಾರಣವಾಗಿದ್ದು , ಟಿಎಂಸಿ ಗೂಂಡಾಗಳು ಸಾಕ್ಷ್ಯ ನಾಶಕ್ಕೆ ಈ ಹಿಂಸಾಚಾರವನ್ನು ನಡೆಸುತ್ತಿದ್ದಾರೆ. ಅಲ್ಲದೇ ಪೊಲೀಸರು ಆರೋಪಿಯನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ. ಬಂಗಾಳ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.

ಆದರೆ ಈ ಆರೋಪ ತಳ್ಳಿಹಾಕಿರುವ ಸಿಎಂ ಮಮತಾ ಬ್ಯಾನರ್ಜಿ, ‘ವಿಪಕ್ಷಗಳಾದ ಬಿಜೆಪಿ ಹಾಗೂ ಟಿಎಂಸಿ ಕಡೆಯವರು ದಾಂಧಲೆ ಸೃಷ್ಟಿಸಿದ್ದಾರೆ. ಈ ಮೂಲಕ ಪರಿಸ್ಥಿತಿ ಹದಗೆಡಿಸಲು ಸಂಚು ರೂಪಿಸಿದ್ದಾರೆ’ ಎಂದಿದ್ದಾರೆ.

ರಾಜ್ಯಪಾಲರಿಂದ ಖಂಡನೆ:

ಪ್ರತಿಭಟನಾ ನಿರತ ವೈದ್ಯರು ಗೂಂಡಾಗಳಿಂದ ನಡೆದ ಹಲ್ಲೆ ಕುರಿತು ರಾಜ್ಯಪಾಲ ಸಿ.ವಿ. ಆನಂದ ಬೋಸ್‌ ಅವರನ್ನು ಭೇಟಿಯಾಗಿ ಘಟನೆ ಬಗ್ಗೆ ವಿವರಿಸಿದರು. ಆಗ ಕೃತ್ಯ ಖಂಡಿಸಿದ ಬೋಸ್‌, ‘ವೈದ್ಯೆಯರು ತಮಗೆ ಅಸುರಕ್ಷಿತ ಭಾವನೆ ಕಾಡುತ್ತಿದೆ ಎಂದು ಹೇಳಿದ್ದಾರೆ. ಇಂಥ ಗೂಂಡಾಗಿರಿಯನ್ನು ನಿಲ್ಲಿಸಲು ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇನೆ’ ಎಂದು ಭರವಸೆ ನಿಡಿದರು.

ರಾಜ್ಯಪಾಲರಿಂದ ‘ಅಭಯ ಮನೆ’ ಸ್ಥಾಪನೆ:ಈ ನಡುವೆ ರಾಜ್ಯಪಾಲರು ರಾಜಭವನದಲ್ಲಿ ‘ಅಭಯ ಹೌಸ್‌’ ಎಂಬ ಕೊಠಡಿ ಸ್ಥಾಪಿಸಿದ್ದಾರೆ. ಭೀತಿಯಲ್ಲಿರುವ ವೈದ್ಯೆಯರು ಬಂಗಾಳ ತಮಗೆ ಸುರಕ್ಷಿತ ಎನ್ನುವ ಭಾವನೆ ಬರುವ ತನಕ ಅಲ್ಲಿಯೇ ವಾಸಿಸಲು ಅವಕಾಶ ನೀಡಿದ್ದಾರೆ. ಅಲ್ಲದೇ ಗುರುವಾರ ಬೆಳಿಗ್ಗೆಯೇ ರಾಜ್ಯಪಾಲರ ಕಚೇರಿ, ‘ಅಭಯ ಪೋರ್ಟಲ್’ ಆರಂಭಿಸಿದ್ದು, ವೈದ್ಯೆಯರು, ಮಹಿಳೆಯರು ಈ ತಾಣ ಸಂಪರ್ಕಿಸಿ ಸಹಾಯ ಪಡೆಯಬಹುದಾಗಿದೆ.

ವೈದ್ಯೆ ರೇಪ್ ಖಂಡಿಸಿ 4ನೇ ದಿನವೂ ವೈದ್ಯರ ಪ್ರತಿಭಟನೆ

ನವದೆಹಲಿ: ಕೋಲ್ಕತಾದ ಆರ್‌ಜಿ ಕರ್‌ ಮೆಡಿಕಲ್ ಕಾಲೇಜಿನ ವೈದ್ಯೆ ರೇಪ್ ಹಾಗೂ ಹತ್ಯೆ ಖಂಡಿಸಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆ 4 ದಿನವೂ ಮುಂದುವರೆದಿದೆ. ಪ್ರತಿಭಟನೆಗೆ ನಿಲ್ಲಿಸಿದ್ದ ಸ್ಥಾನಿಕ ವೈದ್ಯರ ಸಂಘಟನೆ (ಫೋರ್ಡಾ), ಆರ್‌ಜಿ ಕಾಲೇಜಿನ ಮೇಲೆ ಗೂಂಡಾಗಳು ದಾಳಿ ಮಾಡಿದ ಕಾರಣ ತನ್ನ ನಿರ್ಧಾರ ಹಿಂಪಡೆದಿದ್ದು, ಮುಷ್ಕರ ನಡೆಸುತ್ತಿದ್ದ ಇತರ 2 ಸಂಘಟನೆಗಳ ಜತೆ ಮತ್ತೆ ಕೈಜೋಡಿಸಿದೆ.

ಕೋಲ್ಕತಾ, ದಿಲ್ಲಿ ಸೇರಿದಂತೆ ದೇಶದ ಹಲವು ನಗರಗಳ ಹಲವು ಆಸ್ಪತ್ರೆಗಳ ವೈದ್ಯರು ತಮ್ಮ ಕರ್ತವ್ಯ ಬಹಿಷ್ಕರಿಸಿ, ಪ್ರತಿಭಟನೆಗೆ ಹಾಜರಾದರು. ಇದರಿಂದ ಸರಿಯಾದ ಚಿಕಿತ್ಸೆ ಸಿಗದೇ ರೋಗಿಗಳು ಪರದಾಡುವಂತಾಯಿತು. ದೆಹಲಿಯ ಪ್ರತಿಷ್ಠಿತ ಆಸ್ಪತ್ರೆ ಏಮ್ಸ್‌ನ ವೈದ್ಯರು ಕೂಡ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ವೈದ್ಯರ ಪ್ರತಿಭಟನೆ ನ್ಯಾಯ ಸಮ್ಮತವಾಗಿದ್ದು, ವೈದ್ಯರಿಗೆ ನ್ಯಾಯ ಸಿಗಬೇಕು ಎಂದಿದ್ದಾರೆ.ವೈದ್ಯರ ರಕ್ಷಣೆಗೆ ಸಿದ್ಧವೆಂದು ಕೇಂದ್ರ ಆರೋಗ್ಯ ಇಲಾಖೆ ಭರವಸೆ ನೀಡಿದ್ದರಿಂದ ಫೋರ್ವಾ, ಮುಷ್ಕರವನ್ನು ಕೈ ಬಿಟ್ಟಿತ್ತು. ಆದರೆ ಕೇಂದ್ರ ಲಿಖಿತ ರೂಪದಲ್ಲಿ ಭರವಸೆ ನೀಡಿಲ್ಲ ಮತ್ತು ಕೋಲ್ಕತಾ ಆಸ್ಪತ್ರೆ ಮೇಲಿನ ದಾಳಿ ಅಕ್ಷಮ್ಯೆ ಎಂದು ಕರೆದು ಮತ್ತೆ ಪ್ರತಿಭಟನೆ ಆರಂಭಿಸಿದೆ.