ಸಾರಾಂಶ
ತಿರುವನಂತಪುರಂ: ಕಳೆದ 19 ದಿನಗಳಿಂದ ಕೇರಳ ರಾಜಧಾನಿಯ ವಿಮಾನ ನಿಲ್ದಾಣದಲ್ಲಿ ಅನಾಥವಾಗಿ ನಿಂತಿರುವ ಬ್ರಿಟನ್ ನೌಕಾಪಡೆಯ ಎಫ್-35ಬಿ ಸೇನಾ ವಿಮಾನವು ಹಲವು ಪ್ರಯತ್ನಗಳ ಬಳಿಕವೂ ರಿಪೇರಿ ಆಗದ ಕಾರಣ ಅದನ್ನು ಸಿ-17 ಗ್ಲೋಬ್‌ಮಾಸ್ಟರ್ ಸಾರಿಗೆ ವಿಮಾನದಲ್ಲಿ ಏರ್‌ಲಿಫ್ಟ್ ಮಾಡಿ ತವರಿಗೆ ಒಯ್ಯುವ ಸಾಧ್ಯತೆಗಳು ದಟ್ಟವಾಗಿವೆ.
ಆದರೆ ಅದನ್ನು ಸುಮ್ಮನೇ ಏರ್‌ಲಿಫ್ಟ್ ಮಾಡುವುದಿಲ್ಲ. ಬದಲಾಗಿ ಎಲ್ಲ ಭಾಗಗಳನ್ನು ಬೇರ್ಪಡಿಸಿ ಗ್ಲೋಬ್‌ಮಾಸ್ಟರ್‌ನಲ್ಲಿ ಸಾಗಿಸುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.
ಇಂಧನ ಖಾಲಿಯಾಗಿರುವ ನೆಪ ನೀಡಿ ಜೂ.14ರಂದು ಕೇರಳದಲ್ಲಿ ನಿಂತ ಈ ವಿಮಾನದಲ್ಲಿ, ಬಳಿಕ ತಾಂತ್ರಿಕ ದೋಷ ಉಂಟಾಗಿರುವುದು ಬಹಿರಂಗವಾಗಿತ್ತು. ಅದನ್ನು ಸರಿಪಡಿಸಲು ಶತಪ್ರಯತ್ನ ಮಾಡಿದರೂ ಸಾಧ್ಯವಾಗಿರಲಿಲ್ಲ.
ಅತ್ತ ಎಫ್-35ಬಿ ಸೇನಾ ವಿಮಾನವಾಗಿರುವ ಕಾರಣ, ಭದ್ರತಾ ದೃಷ್ಟಿಯಿಂದ, ಭಾರತೀಯರಿಂದ ರಿಪೇರಿ ಮಾಡಿಸಿಕೊಳ್ಳಲು ಬ್ರಿಟನ್ ಒಪ್ಪಿಗೆ ನೀಡುತ್ತಿಲ್ಲ. ಈ ಮೊದಲು ಅದನ್ನು ಹ್ಯಾಂಗರ್‌ಗೆ ಒಯ್ಯುವುದಕ್ಕೂ ಇದೇ ಕಾರಣ ನೀಡಿ ನಿರಾಕರಿಸಲಾಗಿತ್ತು. ಹೀಗಾಗಿ ಬ್ರಿಟನ್‌ನಿಂದ ದುರಸ್ತಿಗಾಗಿ ಎಂಜಿನಿಯರ್‌ಗಳನ್ನು ಕಳಿಸಲು ಬ್ರಿಟನ್ ನಿರ್ಧರಿಸಿತ್ತು, ಇದೀಗ ಯಾವುದೇ ಯತ್ನಗಳು ಫಲಿಸದ ಕಾರಣ, ಬೇರೆ ಆಯ್ಕೆ ಇಲ್ಲದೆ ಅದನ್ನು ಬ್ರಿಟನ್‌ನ ಸೇನಾ ಸಾರಿಗೆ ವಿಮಾನ ಬಳಸಿ ಏರ್‌ಲಿಫ್ಟ್ ಮಾಡಲಾಗುವುದು ಎನ್ನಲಾಗಿದೆ. ಇಷ್ಟು ದಿನ ತಮ್ಮ ವಿಮಾನಕ್ಕೆ ಆಶ್ರಯ ನೀಡಿದ್ದಕ್ಕಾಗಿ ಪಾರ್ಕಿಂಗ್ ಮತ್ತು ಹ್ಯಾಂಗರ್‌ನ ಬಾಡಿಗೆಯನ್ನೂ ಪಾವತಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಭಾಗಗಳ ಬೇರ್ಪಡಿಸಿ ಏರ್‌ಲಿಫ್ಟ್:
ಎಫ್-35ಬಿ ಅನ್ನು ಏರ್‌ಲಿಫ್ಟ್ ಮಾಡುವುದೇ ಕೊನೆಯ ಆಯ್ಕೆಯಾದಲ್ಲಿ, ಮೊದಲು ಅದರ ಭಾಗಗಳನ್ನು ಬೇರ್ಪಡಿಸಿ, ಇನ್ನೊಂದು ವಿಮಾನಕ್ಕೆ ಹಾಕಲಾಗುವುದು. ವಿಮಾನವನ್ನು ಇಡಿಯಾಗಿ ಇನ್ನೊಂದರೊಳಗೆ ಇಡಲು ಅದರ ಗಾತ್ರದ ಕಾರಣ ಸಾಧ್ಯವಾಗದೇ ಇರಬಹುದು. ಅಥವಾ, ಹಾರಾಟದ ವೇಳೆ ಸ್ಥಿರತೆಗೆ ತೊಂದರೆಯಾಗಬಹುದು. ಹಾಗಾಗಿ ಎಲ್ಲಾ ಭಾಗಗಳನ್ನು ಬೇರೆ ಬೇರೆ ಮಾಡಿ, ಸುರಕ್ಷಿತವಾಗಿ ಸಾಗಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
;Resize=(128,128))
;Resize=(128,128))
;Resize=(128,128))