ಸಾರಾಂಶ
ಕೊಲಂಬೊದಿಂದ ಮುಂಬೈಗೆ ತೆರಳುತ್ತಿದ್ದ ಸರಕು ಸಾಗಾಟದ ಬೃಹತ್ ಹಡಗು ಕೇರಳದ ಕೋಝಿಕ್ಕೋಡ್ ಬೇಪೋರ್ ತೀರದಿಂದ 78 ನಾಟಿಕಲ್ ಮೈಲು ದೂರದ ಸಮುದ್ರ ನಡುವೆ ಸೋಮವಾರ ಭಾರೀ ಅಗ್ನಿ ಅನಾಹುತಕ್ಕೆ ತುತ್ತಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಕೊಲಂಬೊದಿಂದ ಮುಂಬೈಗೆ ತೆರಳುತ್ತಿದ್ದ ಸರಕು ಸಾಗಾಟದ ಬೃಹತ್ ಹಡಗು ಕೇರಳದ ಕೋಝಿಕ್ಕೋಡ್ ಬೇಪೋರ್ ತೀರದಿಂದ 78 ನಾಟಿಕಲ್ ಮೈಲು ದೂರದ ಸಮುದ್ರ ನಡುವೆ ಸೋಮವಾರ ಭಾರೀ ಅಗ್ನಿ ಅನಾಹುತಕ್ಕೆ ತುತ್ತಾಗಿದೆ. ಅದರಲ್ಲಿ ಸಿಲುಕಿ ಗಾಯಗೊಂಡಿರುವ ವಿದೇಶಿ ಸಿಬ್ಬಂದಿಗಳನ್ನು ಮಂಗಳೂರಿಗೆ ಕರೆತರಲಾಗಿದೆ.ಸಿಂಗಾಪುರದ ಕಂಟೇನರ್ ಹಡಗು- ಎಂವಿ ವಾನ್ ಹೈ 503 ಅಗ್ನಿ ದುರಂತಕ್ಕೆ ಈಡಾಗಿದೆ. ಅದರಲ್ಲಿ ಒಟ್ಟು 22 ವಿವಿಧ ದೇಶಗಳ ಸಿಬ್ಬಂದಿಗಳಿದ್ದರು.
ಅವರಲ್ಲಿ 18 ಮಂದಿಯನ್ನು ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕಾಪಡೆ ಪತ್ತೆ ಹಚ್ಚಿದೆ. ನಾಲ್ವರು ನಾಪತ್ತೆಯಾಗಿದ್ದಾರೆ. ಪತ್ತೆಯಾದವರಲ್ಲಿ ಐವರು ಸಿಬ್ಬಂದಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.ಗಾಯಾಳುಗಳಿಗೆ ಮಂಗಳೂರಿನಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ಸಂಬಂಧಪಟ್ಟ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.
ಪತ್ತೆಯಾದ 18 ಸಿಬ್ಬಂದಿ ಪೈಕಿ 8 ಮಂದಿ ಚೀನಾದವರಾಗಿದ್ದರೆ, ನಾಲ್ವರು ತೈವಾನ್ ಪ್ರಜೆಗಳು, ನಾಲ್ವರು ಮ್ಯಾನ್ಮಾರ್, ಇಬ್ಬರು ಇಂಡೋನೇಷ್ಯಾ ಪ್ರಜೆಗಳು. ನಾಪತ್ತೆಯಾದವರಲ್ಲಿ ಇಬ್ಬರು ತೈವಾನ್ ಹಾಗೂ ತಲಾ ಒಬ್ಬರು ಮ್ಯಾನ್ಮಾರ್ ಮತ್ತು ಇಂಡೋನೇಷ್ಯಾ ರಾಷ್ಟ್ರದ ಪ್ರಜೆಗಳಾಗಿದ್ದಾರೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆಯ ಐಎನ್‌ಎಸ್ ಸೂರತ್ ಹಾಗೂ ಕೋಸ್ಟ್‌ಗಾರ್ಡ್‌ನ ಮೂರು ನೌಕೆಗಳು ಪಾಲ್ಗೊಂಡಿದ್ದವು.