ಸಾರಾಂಶ
ಇತ್ತೀಚೆಗಷ್ಟೇ ತನ್ನ ಬ್ಯಾಂಕ್ ಖಾತೆಗಳನ್ನು ತಡೆಹಿಡಿದಿದ್ದ ಆದಾಯ ತೆರಿಗೆ ಇಲಾಖೆ ಇದೀಗ, ವಿವಿಧ ಬ್ಯಾಂಕುಗಳಲ್ಲಿನ ತನ್ನ ಖಾತೆಗಳಿಂದ 65 ಕೋಟಿ ರು.ಗಳನ್ನು ಹಿಂತೆಗೆದುಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನವದೆಹಲಿ: ಇತ್ತೀಚೆಗಷ್ಟೇ ತನ್ನ ಬ್ಯಾಂಕ್ ಖಾತೆಗಳನ್ನು ತಡೆಹಿಡಿದಿದ್ದ ಆದಾಯ ತೆರಿಗೆ ಇಲಾಖೆ ಇದೀಗ, ವಿವಿಧ ಬ್ಯಾಂಕುಗಳಲ್ಲಿನ ತನ್ನ ಖಾತೆಗಳಿಂದ 65 ಕೋಟಿ ರು.ಗಳನ್ನು ಹಿಂತೆಗೆದುಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅಲ್ಲದೆ ತೆರಿಗೆ ಇಲಾಖೆ ಕ್ರಮ ಪ್ರಜಾಪ್ರಭುತ್ವ ವಿರೋಧಿ. ವಿಷಯ ಕೋರ್ಟ್‌ನಲ್ಲಿದ್ದರೂ ಐಟಿ ಇಲಾಖೆ ಈ ಕ್ರಮ ಜರುಗಿಸಿದ್ದು ನಿಯಮ ಬಾಹಿರ ಎಂದು ಪಕ್ಷ ಕಿಡಿಕಾರಿದೆ.
ಈ ಕುರಿತು ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಪಕ್ಷದ ಖಜಾಂಚಿ ಅಜಯ್ ಮಾಕನ್, ‘ತೆರಿಗೆ ರಿಟರ್ನ್ಸ್ ಸಲ್ಲಿಕೆ ವಿಳಂಬದ ಕಾರಣ ನೀಡಿ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ 210 ಕೋಟಿ ರು. ತೆರಿಗೆ ಡಿಮಾಂಡ್ ನೋಟಿಸ್ ಜಾರಿ ಮಾಡಿತ್ತು.
ಅಲ್ಲದೆ ಇದಕ್ಕೆ ಪೂರಕವಾಗಿ ಉಳಿತಾಯ ಖಾತೆ ಜಪ್ತಿ ಮಾಡಿತ್ತು. ಇದರ ವಿರುದ್ಧ ಐಟಿ ನ್ಯಾಯಾಧಿಕರಣಕ್ಕೆ ನಾವು ಮನವಿ ಸಲ್ಲಿಸಿದಾಗ ಐಟಿ ಇಲಾಖೆ ಕ್ರಮಕ್ಕೆ ನ್ಯಾಯಾಧಿಕರಣ ತಡೆ ನೀಡಿದೆ.
ಅಲ್ಲದೆ, 135 ಕೋಟಿ ರು. ಕನಿಷ್ಠ ಬ್ಯಾಲೆನ್ಸ್ ಮೇಂಟೇನ್ ಮಾಡುವಂತೆ ಸೂಚಿಸಿದೆ. ಹೀಗಿದ್ದಾಗ್ಯೂ ಐಟಿ ಇಲಾಖೆ ನಮ್ಮ ಖಾತೆಗಳಿಂದ 65 ಕೋಟಿ ರು.ಗಳನ್ನು ವಿತ್‌ಡ್ರಾ ಮಾಡಿಕೊಂಡಿದೆ.
ಇದು ಅಕ್ರಮ ಎಂದು ಆರೋಪಿಸಿದರು.ತನಿಖಾ ಸಂಸ್ಥೆಗಳ ಕ್ರಮವನ್ನು ಮರುಪರಿಶೀಲನೆ ಮಾಡದೇ ಇದ್ದರೆ ಪ್ರಜಾಪ್ರಭುತ್ವವು ಕೊನೆಗೊಳ್ಳುತ್ತದೆ ಎಂದು ಕಿಡಿಕಾರಿದ ಅವರು ಕಾಂಗ್ರೆಸ್‌ಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದರು.