ಸಾರಾಂಶ
ಈ ಕುರಿತು ಅಫಿಡವಿಟ್ ಸಲ್ಲಿಸಲು ಆದೇಶ ನೀಡಿ ನ್ಯಾಯಾಲಯ ವಿಚಾರಣೆಯನ್ನು ಮಾ.19ಕ್ಕೆ ಮುಂದೂಡಿದೆ.
ನವದೆಹಲಿ: ಶರದ್ ಪವಾರ್ ಅವರ ಪಕ್ಷದಿಂದ ಹೊರಬಂದು ಪ್ರತ್ಯೇಕ ಎನ್‌ಸಿಪಿ ಬಣ ಸ್ಥಾಪಿಸಿದ ಬಳಿಕ ಅವರ ಹೆಸರು, ಫೋಟೋ ಮತ್ತು ದೃಶ್ಯವನ್ನು ಎಲ್ಲಿಯೂ ಬಳಕೆ ಮಾಡಿಕೊಳ್ಳದಂತೆ ಅಜಿತ್ ಪವಾರ್ ಬಣಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಅಜಿತ್ ಪವಾರ್ ಬಣದ ಕಾರ್ಯಕರ್ತರು ಗ್ರಾಮೀಣ ಪ್ರದೇಶಗಳಲ್ಲಿ ಶರದ್ ಪವಾರ್ ಅವರ ಹೆಸರು ಮತ್ತು ಚಿತ್ರ ಇರುವ ಪೋಸ್ಟರ್‌ಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಶರದ್ ಪವಾರ್ ಖ್ಯಾತ ವಕೀಲ ಅಭಿಷೇಕ್ ಸಿಂಘ್ವಿ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ‘ನೀವು(ಅಜಿತ್ ಪವಾರ್) ಪಕ್ಷ ತೊರೆದ ನಂತರ ನಿಮ್ಮ ಸ್ವಂತ ಗುರುತನ್ನು ಮಾತ್ರ ಬಳಕೆ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಶನಿವಾರದೊಳಗೆ ತಮ್ಮ ಪಕ್ಷದಿಂದ ಮುಂದೆಂದೂ ಶರದ್ ಪವಾರ್ ಅವರ ಹೆಸರು ಮತ್ತು ಚಿತ್ರವನ್ನು ಬಳಕೆ ಮಾಡುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಬೇಕು ಮತ್ತು ನಡೆದ ಪ್ರಮಾದದ ಕುರಿತು ವಿವರಣೆ ನೀಡಬೇಕು’ ಎಂದು ಸೂಚಿಸಿ ಮಾ.19ಕ್ಕೆ ವಿಚಾರಣೆಯನ್ನು ಮುಂದೂಡಿತು.