ಅಜಿತ್‌ ಪವಾರ್‌ ಕೆಂಡಾಮಂಡಲ

| Published : Jun 06 2024, 02:01 AM IST

ಸಾರಾಂಶ

ಅಜಿತ್‌ ಪವಾರ್‌ ಕೆಂಡಾಮಂಡಲರಾಗಿದ್ದು, ಸೋದರಿ ಸುಳೆ ವಿರುದ್ಧ ಪತ್ನಿ ಸೋಲಿಗೆ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಜೊತೆಗೆ ಮೈತ್ರಿ ಫಲ ಕೊಡದ್ದಕ್ಕೆಕಿಡಿ ಕಾರಿ ಎನ್‌ಡಿಎ ಸಭೆಗೆ ಗೈರು ಆಗಿದ್ದಾರೆ.

ಮುಂಬೈ: ಬಾರಾಮತಿ ಕ್ಷೇತ್ರದಲ್ಲಿ ಸೋದರಿ ಸುಪ್ರಿಯಾ ಸುಳೆ ವಿರುದ್ಧ ತಮ್ಮ ಪತ್ನಿ ಸುನೇತ್ರಾ ಪವಾರ್ ಸೋಲನ್ನಪ್ಪಿರುವುದು ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರನ್ನು ಕೆಂಡಾಮಂಡಲವಾಗಿಸಿದೆ ಎನ್ನಲಾಗಿದೆ. ಮೈತ್ರಿಕೂಟದ ಪಕ್ಷಗಳಾದ ಬಿಜೆಪಿ ಮತ್ತು ಎನ್‌ಸಿಪಿ ಸೂಕ್ತವಾಗಿ ಕೆಲಸ ಮಾಡದೇ ಇರುವುದೇ ಪತ್ನಿ ಸೋಲಿಗೆ ಕಾರಣ ಎಂದು ಅಜಿತ್‌ ಸಿಟ್ಟಿಗೆದ್ದಿದ್ದಾರೆ. ಹೀಗಾಗಿ ಬುಧವಾರ ದೆಹಲಿಯಲ್ಲಿ ನಡೆದ ಎನ್‌ಡಿಎ ಮೈತ್ರಿಕೂಟದ ಸಭೆಗೂ ಅಜಿತ್‌ ಗೈರಾಗಿದ್ದಾರೆ.ಶರದ್‌ ಪವಾರ್‌ ಪುತ್ರಿ ಮೂರು ಬಾರಿ ಗೆದ್ದಿದ್ದ ಬಾರಾಮತಿಯಿಂದ ಈ ಬಾರಿ ತಮ್ಮ ಪತ್ನಿ ಸುನೇತ್ರಾರನ್ನು ಅಜಿತ್ ಕಣಕ್ಕೆ ಇಳಿಸಿದ್ದರು. ಆದರೆ ಸುಪ್ರಿಯಾ 1.5 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿ ಸೋದರ ಅಜಿತ್‌ಗೆ ಟಕ್ಕರ್‌ ನೀಡಿದ್ದಾರೆ. ಇದು ಅಜಿತ್‌ ಅವರನ್ನು ಕಂಗೆಡಿಸಿದೆ ಎನ್ನಲಾಗಿದೆ.ಈ ನಡುವೆ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಮತ್ತು ಅಜಿತ್‌ ಪವಾರ್‌ ನಡುವೆಯೂ ಮುಸುಕಿನ ಗುದ್ದಾಟ ನಡೆಯುತ್ತಿದ್ದು ಇದು ಕೂಡಾ ಸೋಲಿಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಬಿಜೆಪಿ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್‌ ನಡುವಿನ ವೈಮನಸ್ಯವನ್ನು ಬುಧವಾರ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದು, ‘ಇದನ್ನು ಪರಿಹರಿಸಲು ಮಾತುಕತೆ ನಡೆಸುತ್ತೇವೆ’ ಎಂದಿದ್ದಾರೆ.ಒಂದು ವೇಳೆ ಶಿಂಧೆ ಜೊತೆಗಿನ ಬಿಕ್ಕಟ್ಟು ಸರಿಯಾಗದೇ ಹೋದಲ್ಲಿ ಅಜಿತ್‌ ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಬೇಕಾದರೂ ಕೈಗೊಳ್ಳಬಹುದು ಎಂದು ಪಕ್ಷದ ಮೂಲಗಳು ಹೇಳಿವೆ.