ಜಾಗತಿಕ ಮಟ್ಟದಲ್ಲಿ ಉಗ್ರಪೋಷಕ ಪಾಕಿಸ್ತಾನದ ಬಣ್ಣ ಬಯಲು ಮಾಡಲು ಕೇಂದ್ರ ಸರ್ಕಾರ ರಚಿಸಿರುವ ವಿವಿಧ ಸರ್ವಪಕ್ಷ ನಿಯೋಗಗಳು ಸ್ಪೇನ್, ಬ್ರಿಟನ್, ಬ್ರೆಜಿಲ್ ಹಾಗೂ ಮಲೇಷ್ಯಾ ದೇಶಗಳನ್ನು ತಲುಪಿದ್ದು, ಭಯೋತ್ಪಾದನೆ ವಿರುದ್ಧ ಭಾರತದ ನಿಲುವನ್ನು ಪುನರುಚ್ಚರಿಸಿವೆ.

ಲಂಡನ್: ಜಾಗತಿಕ ಮಟ್ಟದಲ್ಲಿ ಉಗ್ರಪೋಷಕ ಪಾಕಿಸ್ತಾನದ ಬಣ್ಣ ಬಯಲು ಮಾಡಲು ಕೇಂದ್ರ ಸರ್ಕಾರ ರಚಿಸಿರುವ ವಿವಿಧ ಸರ್ವಪಕ್ಷ ನಿಯೋಗಗಳು ಸ್ಪೇನ್, ಬ್ರಿಟನ್, ಬ್ರೆಜಿಲ್ ಹಾಗೂ ಮಲೇಷ್ಯಾ ದೇಶಗಳನ್ನು ತಲುಪಿದ್ದು, ಭಯೋತ್ಪಾದನೆ ವಿರುದ್ಧ ಭಾರತದ ನಿಲುವನ್ನು ಪುನರುಚ್ಚರಿಸಿವೆ.

ಸರ್ವಪಕ್ಷ ನಿಯೋಗದ ಭಾಗವಾಗಿ ಮಲೇಷಿಯಾಕ್ಕೆ ತಲುಪಿರುವ ಟಿಎಂಸಿ ಸಂಸದ ಅಭಿಷೇಜ್ ಬ್ಯಾನರ್ಜಿ ‘ಏ.22ರಂದು ಕೇವಲ ಧರ್ಮ ಮತ್ತು ಲಿಂಗದ ಆಧಾರದ ಮೇಲೆ 26 ಅಮಾಯಕರು ಕೊಲ್ಲಲ್ಪಟ್ಟರು. 

ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವ ಬಗ್ಗೆ ಚರ್ಚಿಸಲು ಮಾತ್ರ ಭಾರತ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕೆಂದು ನಾವು ಬಯಸುತ್ತೇವೆ’ ಎಂದರು. ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿ ನೇತೃತ್ವದ ನಿಯೋಗ ಸ್ಪೇನ್‌ನಲ್ಲಿ ಅಲ್ಲಿನ ಸರ್ಕಾರಕ್ಕೆ ಮಾಹಿತಿ ನೀಡಿತು. ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ನೇತೃತ್ವದ ನಿಯೋಗವು ಲಂಡನ್‌ನಲ್ಲಿ ಪಾಕಿಸ್ತಾನದ ಉಗ್ರಮುಖವನ್ನು ಬಯಲು ಮಾಡಿತು. ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ನಿಯೋಗ ಬ್ರೆಜಿಲ್‌ನಲ್ಲಿ ಅಲ್ಲಿನ ಸರ್ಕಾರದ ಪ್ರತಿನಿಧಿಗಳ ಜತೆ ಸಭೆ ನಡೆಸಿತು.

ಜೈಲಲ್ಲೇ ತಂದೆ ಆದ ಪಾಕ್‌ ಉಗ್ರ: ಪಾಕ್‌ಗೆ ಓವೈಸಿ ತಿವಿತ

ಅಲ್ಜೀರ್ಸ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಉಗ್ರಮುಖವನ್ನು ಬಯಲು ಮಾಡಲು ವಿದೇಶಗಳಿಗೆ ತೆರಳಿರುವ ಸರ್ವಪಕ್ಷ ನಿಯೋಗಗಳ ಭಾಗವಾಗಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಅಲ್ಜೀರಿಯಾದಲ್ಲಿ ಪಾಕ್‌ನ ಬಣ್ಣ ಬಯಲು ಮಾಡಿದ್ದಾರೆ.

ಅಲ್ಜೀರಿಯಾದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, ‘ಉಗ್ರ ಝಕಿ ಉರ್ ರೆಹಮಾನ್ ಲಖ್ವಿ ಪಪಾಕ್‌ ಜೈಲಿನಲ್ಲಿದ್ದಾನೆ. ಅಂಥ ಉಗ್ರರನ್ನು ಜೈಲಿನಿಂದ ಹೊರಬರಲು ವಿಶ್ವದ ಯಾವುದೇ ದೇಶ ಅನುಮತಿಸುವುದಿಲ್ಲ. ಆದರೆ ಪಾಕಿಸ್ತಾನದ ಜೈಲಿನಲ್ಲಿ ಕುಳಿತಿರುವಾಗಲೇ ಆತ ಒಬ್ಬ ಮಗನಿಗೆ ತಂದೆಯಾದ’ ಎಂದು ಪಾಕ್‌ನ ಬಣ್ಣವನ್ನು ಕಳಚಿದರು.‘ಉಗ್ರರಿಗೆ ಹಣಕಾಸು ನೆರವು ನೀಡುವ ದೇಶಗಳ ಮೇಲೆ ನಿಗಾ ಇಡುವ ಜಾಗತಿಕ ಕಾವಲು ಸಂಸ್ಥೆಯಾದ ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಬೂದು ಪಟ್ಟಿಗೆ ಪಾಕಿಸ್ತಾನವನ್ನು ಮತ್ತೆ ಸೇರಿಸಿದರೆ, ಭಾರತದಲ್ಲಿ ಉಗ್ರದಾಳಿಗಳು ಕಡಿಮೆಯಾಗುತ್ತವೆ. ಇದು ಕೇವಲ ದಕ್ಷಿಣ ಏಷ್ಯಾದ ಪ್ರಶ್ನೆಯಲ್ಲ. ಉಗ್ರಪೋಷಕ ಪಾಕಿಸ್ತಾನವನ್ನು ನಿಯಂತ್ರಿಸುವುದು ವಿಶ್ವಶಾಂತಿಯ ಹಿತದೃಷ್ಟಿಯಿಂದ ಅಗತ್ಯ’ ಎಂದರು.

ಆಪರೇಷನ್‌ ಸಿಂದೂರ ಬಗ್ಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಿರಿ: ಕಾಂಗ್ರೆಸ್‌ 

ನವದೆಹಲಿ: ಪಾಕ್‌ ಜತೆಗಿನ ಸಂಘರ್ಷದಲ್ಲಿ ಭಾರತದ ಕೆಲ ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಮೂರೂ ಸೇನಾಪಡೆಗಳ ಮುಖ್ಯಸ್ಥ ಜ.ಅನಿಲ್‌ ಚೌಹಾಣ್‌ ಒಪ್ಪಿಕೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಕಾಂಗ್ರೆಸ್‌ ಪಕ್ಷ, ಈ ಕುರಿತು ಚರ್ಚೆಗೆ ಸಂಸತ್ತಿನ ವಿಶೇಷ ಸಭೆ ಕರೆಯುವಂತೆ ಆಗ್ರಹಿಸಿದೆ.ಆಪರೇಷನ್ ಸಿಂದೂರ ಬಳಿಕ ಭಾರತದ ಮಿಲಿಟರಿ ಸಿದ್ಧತೆ ಮತ್ತು ತಂತ್ರಗಾರಿಕೆ ಕುರಿತು ಕೇಂದ್ರ ಸರ್ಕಾರವು ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆದುಕೊಳ್ಳಬೇಕು. ಸೇನೆ ಮತ್ತು ವಿದೇಶಿ ನೀತಿ ತಂತ್ರಗಾರಿಕೆಯ ಕುರಿತು ಚರ್ಚೆಗೆ ವಿಶೇಷ ಸಂಸತ್‌ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿದೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ಜನರಲ್‌ ಚೌಹಾಣ್‌ ಅವರು ಸಿಂಗಾಪುರದಲ್ಲಿ ಏನನ್ನು ಹೇಳಿದ್ದಾರೋ ಅದನ್ನು ಪ್ರಧಾನಮಂತ್ರಿ ಅಥವಾ ರಕ್ಷಣಾಮಂತ್ರಿಗಳು ಸರ್ವಪಕ್ಷಗಳ ಸಭೆಯಲ್ಲೇ ಮೊದಲು ತಿಳಿಸಬಹುದಿತ್ತು. ಜ.ಚೌಹಾಣ್‌ ಅವರ ಹೇಳಿಕೆಯು ವಿಶೇಷ ಅಧಿವೇಶನ ಕರೆಯುವ ಅನಿವಾರ್ಯತೆಯನ್ನು ಸಾಬೀತು ಮಾಡುತ್ತಿದೆ ಎಂದರು.ಸಿಂಗಾಪುರದಲ್ಲಿ ಸೇನಾ ಮುಖ್ಯಸ್ಥರು ಹೇಳಿಕೆ ನೀಡಿರುವುದು ಕಳವಳಕಾರಿ. ಈ ವಿಚಾರವನ್ನು ಪ್ರಧಾನಿಗಳು ಮೊದಲೇ ಯಾಕೆ ಪ್ರತಿಪಕ್ಷಗಳ ಗಮನಕ್ಕೆ ತಂದಿಲ್ಲ ಎಂದು ಪ್ರಶ್ನಿಸಿ ಜೈರಾಂ ರಮೇಶ್‌, ಕಾರ್ಗಿಲ್‌ ಯುದ್ಧದ ರೀತಿ ಆಪರೇಷನ್‌ ಸಿಂದೂರ ವಿಚಾರವಾಗಿಯೂ ವಿಶೇಷ ಪರಿಶೀಲನಾ ಸಮಿತಿ ರಚಿಸುವಂತೆ ಪುನರುಚ್ಚರಿಸಿದ್ದಾರೆ.

ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಪವನ್‌ ಖೇರಾ ಕೂಡ ಇಂಥ ವಿಚಾರಗಳನ್ನು ಸಂಸತ್ತಿನ ವಿಶೇಷ ಸಭೆ ಕರೆದು ಚರ್ಚಿಸಬೇಕು. ಈ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.