ಸಾರಾಂಶ
ಶ್ರೀನಗರ/ಜಮ್ಮು: ಪವಿತ್ರ ಅಮರನಾಥ ಯಾತ್ರೆ ಶನಿವಾರ ಆರಂಭವಾಗಿದ್ದು, ಮೊದಲ ದಿನವೇ 13,736 ಜನರು ಹಿಮಲಿಂಗದ ದರ್ಶನ ಪಡೆದಿದ್ದಾರೆ. ಈ ಸಲ ಉಗ್ರರ ಉಪಟಳದ ನಡುವೆಯೂ ಭಾರಿ ಬಿಗಿ ಭದ್ರತೆ ನಡುವೆ ಯಾತ್ರೆ ಆರಂಭಗೊಂಡಿದ್ದು, ಜಮ್ಮು ಕಾಶ್ಮೀರ ಪೊಲೀಸರು, ಐಟಿಬಿಪಿ ಸಿಬ್ಬಂದಿ, ಸೇನೆ ಸೇರಿದಂತೆ ವಿವಿಧ ಭದ್ರತಾ ಪಡೆಗಳು ಸಾವಿರಾರು ಸಿಬ್ಬಂದಿ ಸರ್ಪಗಾವಲಾಗಿ ನಿಂತಿದ್ದಾರೆ. ಜೂ.29ರಿಂದ ಆರಂಭಗೊಂಡಿರುವ ಯಾತ್ರೆಗೆ 3.50ಲಕ್ಷಕ್ಕೂ ಹೆಚ್ಚಿನ ಜನರು ನೋಂದಾಯಿಸಿಕೊಂಡಿದ್ದಾರೆ. ಆ.19ರಂದು ಯಾತ್ರೆ ಮುಕ್ತಾಯಗೊಳ್ಳಲಿದೆ.
ಹರಿದ್ವಾರದಲ್ಲಿ ಪ್ರವಾಹ, ಉಕ್ಕೇರಿದ ಗಂಗೆ: 8 ಕಾರು ನದಿ ಪಾಲು
ಹರಿದ್ವಾರ: ದಿಲ್ಲಿ ಬಳಿಕ ಈಗ ಉತ್ತರಾಖಂಡದ ಪವಿತ್ರ ನಗರಿ ಹರಿದ್ವಾರದಲ್ಲಿ ವರುಣ ಅಬ್ಬರಿಸಿದ್ದು, ಶನಿವಾರ ಗಂಗಾ ನದಿ ಉಕ್ಕೇರಿದೆ. ಈವರೆಗೆ ಬಿರುಬೇಸಿಗೆಯ ಕಾರಣ ಸೊರಗಿದ್ದ ಗಂಗಾನದಿ ಶನಿವಾರ ಏಕಾಏಕಿ ರೌದ್ರರೂಪ ತಾಳಿದೆ. ಇದರ ಪರಿಣಾಮ ನದಿ ಪಕ್ಕ ನಿಲ್ಲಸಿದ್ದ 8 ಕಾರುಗಳು ನದಿಯಲ್ಲಿ ಸಿಲುಕಿ ಪ್ರವಾಹ ಪಾಲಾಗಿವೆ. ಈ ನಡುವೆ, ಇಲ್ಲಿನ ಹರ್ ಕಿ ಪೌಢಿ ಸೇರಿದಂತೆ ಯಾವುದೇ ನದಿ ತಟದಲ್ಲಿ ಭಕ್ತರು ಸುರಕ್ಷತೆ ದೃಷ್ಟಿಯಿಂದ ಪವಿತ್ರ ಸ್ನಾನ ಮಾಡಬಾರದು ಎಂದು ಜಿಲ್ಲಾಡಳಿತ ಕೋರಿದೆ.