ಸಾರಾಂಶ
ವಾಷಿಂಗ್ಟನ್: ಚುನಾವಣಾ ಪೂರ್ವ ಘೋಷಣೆ ಮಾಡಿದಂತೆ ಕೆನಡಾ, ಮೆಕ್ಸಿಕೋ ಮತ್ತು ಚೀನಾದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಸಮರ ಆರಂಭಿಸಿದ್ದಾರೆ. ಈ ಮೂರೂ ದೇಶಗಳಿಂದ ಆಮದು ಮಾಡಲಾಗುವ ವಸ್ತುಗಳ ಮೇಲೆ ಕ್ರಮವಾಗಿ ಶೇ.25, ಶೇ.10 ಮತ್ತು ಶೇ.10ರಷ್ಟು ತೆರಿಗೆ ಜಾರಿಯನ್ನು ಟ್ರಂಪ್ ಘೋಷಿಸಿದ್ದಾರೆ.
ಇದಕ್ಕೆ ಕೆನಡಾ ಕೂಡಾ ತಿರುಗೇಟು ನೀಡುವ ಮೂಲಕ ಅಮೆರಿಕದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ.25ರಷ್ಟು ತೆರಿಗೆ ಪ್ರಕಟಿಸಿದ್ದಾರೆ ಮೂರೂ ದೇಶಗಳ ಮೇಲೆ ಅಮೆರಿಕ ಸಾರಿರುವ ಈ ತೆರಿಗೆ ಸಮರ ಜಾಗತಿಕ ಅರ್ಥ ವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.
ಟ್ರಂಪ್ ವಾರ್:
ಈ ಕುರಿತು ಶನಿವಾರ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಶೇ.10ರಷ್ಟು, ಮೆಕ್ಸಿಕೋ ಹಾಗೂ ಕೆನಡಾದ ಆಮದುಗಳ ಮೇಲೆ ಶೇ. 25ರಷ್ಟು ತೆರಿಗೆ ಹೇರಲಾಗಿದೆ. ಅಮೆರಿಕನ್ನರನ್ನು ರಕ್ಷಿಸಲು ಇದು ಅಗತ್ಯ’ ಎಂದಿದ್ದಾರೆ.
ಕೆನಡಾ ತಿರುಗೇಟು:
ಟ್ರಂಪ್‌ರ ನಡೆಗೆ ಪ್ರತಿಕ್ರಿಯಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ, ‘ಇದರಿಂದ ಎರಡೂ ದೇಶಗಳ ನಡುವೆ ಇನ್ನಷ್ಟು ಅಂತರ ಸೃಷ್ಟಿಯಾಗಲಿದೆ’ ಎನ್ನುತ್ತಾ, 13.43 ಲಕ್ಷ ಕೋಟಿ ರು. ವರೆಗಿನ ಅಮೆರಿಕದ ಆಮದಿನ ಮೇಲೆ ಶೇ.25ರಷ್ಟು ತೆರಿಗೆ ಘೋಷಿಸಿದ್ದಾರೆ. ಮೆಕ್ಸಿಕೋ ಅಧ್ಯಕ್ಷ ಕೂಡ ಇದಕ್ಕೆ ತೆರಿಗೆಯ ಮೂಲಕ ಪ್ರತೀಕಾರ ತೀರಿಸಿಕೊಳ್ಳುವ ಮಾತಾಡಿದ್ದಾರೆ. ಚೀನಾದ ಕಡೆಯಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ.
ಬೈಡೆನ್ ಪಕ್ಷ ವಿರೋಧ:
ಟ್ರಂಪ್‌ರ ಈ ನಿರ್ಧಾರವನ್ನು ವಿರೋಧಿಸಿರುವ ಮಾಜಿ ಅಧ್ಯಕ್ಷ ಜೋ ಬೈಡೆನ್ ಅವರ ಡೆಮಾಕ್ರಟ್ ಪಕ್ಷ, ‘ದೇಶದಲ್ಲಿ ಹಣದುಬ್ಬರ ಸೃಷ್ಟಿಯಾದರೆ ಅದಕ್ಕೆ ಟ್ರಂಪ್ ಕಾರಣ’ ಎಂದು ಹೇಳಿದೆ.
ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಅಮೆರಿಕ ಬೈಕ್, ಕಾರು ಸುಂಕ ಕಡಿತ
ನವದೆಹಲಿ: ಭಾರತ ಮತ್ತು ಚೀನಾದಂಥ ದೇಶಗಳು ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಭಾರೀ ತೆರಿಗೆ ಹಾಕುತ್ತವೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ಷೇಪದ ಬೆನ್ನಲ್ಲೇ, ಅಮೆರಿಕದ ಹಾರ್ಲೆ ಡೇವಿಡ್ಸ್‌ಸನ್ ಬೈಕ್ ಮತ್ತು ಕಾರುಗಳ ಮೇಲಿನ ಸುಂಕವನ್ನು ಭಾರತ ಕಡಿತ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಶೀಘ್ರವೇ ಅಮೆರಿಕಕ್ಕೆ ಭೇಟಿ ನೀಡಲಿದ್ದು, ಅದಕ್ಕೆ ಮೊದಲು ಈ ಮಹತ್ವದ ಬೆಳವಣಿಗೆ ನಡೆದಿದೆ.
ಶನಿವಾರ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿದ್ವಿಚಕ್ರ ವಾಹನಗಳ ಮೇಲಿನ ಅಮದು ಸುಂಕವನ್ನು ಕಡಿತಗೊಳಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. 1600ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯ ಹೊಂದಿರುವ ಬೈಕ್‌ಗಳ (ಸಂಪೂರ್ಣ ಸಿದ್ಧಗೊಂಡ ರೀತಿಯ) ಮೇಲಿನ ಸುಂಕವನ್ನು ಶೇ.50ರಿಂದ ಶೇ.40ಕ್ಕೆ ಇಳಿಸಲಾಗಿದೆ. ಜೊತೆಗೆ ಕಾರುಗಳು ಮತ್ತು ಇತರ ಮೋಟಾರು ವಾಹನಗಳ ಆಮದು ಮೇಲಿನ ಸೀಮಾ ಸುಂಕವನ್ನು ಸಹ ಕಡಿಮೆ ಮಾಡಲಾಗಿದೆ. ಆದರೆ ದರ ಬದಲಾವಣೆ ಬಗ್ಗೆ ಸ್ಪಷ್ಟಪಡಿಸಿಲ್ಲ. ಈ ವ್ಯಾಪ್ತಿಗೆ ಅಮೆರಿಕದ ಹಾರ್ಲೆ ಡೇವಿಡ್ಸ್‌ಸನ್ ಬೈಕ್‌ಗಳು ಕೂಡಾ ಬರುತ್ತವೆ. ಈ ಹಿಂದೆಯೂ ಈ ಬೈಕ್‌ಗಳ ಮೇಲೆ ಭಾರತ ಭಾರೀ ಸುಂಕ ಹೇರುತ್ತಿದೆ ಎಂದು ಟ್ರಂಪ್ ಕಿಡಿಕಾರಿದ್ದರು.