ಸಿಎಎ ಹಿಂಪಡೆಯಲ್ಲ, ರಾಜ್ಯಗಳಿಗೆ ಇದನ್ನು ತಡೆಯಲು ಸಾಧ್ಯವಿಲ್ಲ: ಅಮಿತ್‌ ಶಾ

| Published : Mar 15 2024, 01:18 AM IST / Updated: Mar 15 2024, 11:26 AM IST

ಸಾರಾಂಶ

ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡುವ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ರದ್ದತಿ ಸಾಧ್ಯವೇ ಇಲ್ಲ.

ನವದೆಹಲಿ: ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡುವ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ರದ್ದತಿ ಸಾಧ್ಯವೇ ಇಲ್ಲ. 

ರಾಜ್ಯಗಳಿಗೆ ಇದನ್ನು ಜಾರಿ ಮಾಡಲ್ಲ ಎನ್ನಲು ಆಗದು, ಏಕೆಂದರೆ ಇದು ಕೇಂದ್ರೀಯ ಪಟ್ಟಿಯ ವಿಷಯ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಅಲ್ಲದೆ, ಮುಂದಿನ ದಿನಗಳಲ್ಲಿ ದಾಖಲೆ ಇಲ್ಲದವರಿಗೂ ಅವಕಾಶಕ್ಕೆ ಚಿಂತನೆ ನಡೆಸಲಾಗುವುದು. ಅಖಂಡ ಭಾರತ ಪರಿಕಲ್ಪನೆ ಅಡಿಯಲ್ಲಿ ಮುಸ್ಲಿಮೇತರರಿಗೆ ಪೌರತ್ವ ನೀಡಲು ನಿರ್ಧಾರ ಮಾಡಲಾಗಿದೆ. 

ಇದರಿಂದ ಭಾರತೀಯರಿಗೆ ತೊಂದರೆ ಆಗುತ್ತೆ, ಅವರ ಉದ್ಯೋಗ ಕಸಿಯಲಾಗುತ್ತದೆ ಎಂಬ ವಿಪಕ್ಷ ಆರೋಪ ನಿರಾಧಾರ ಎಂದಿದ್ದಾರೆ. ಈ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆಗೆ ಈ ಬಗ್ಗೆ ಅಮಿತ್‌ ಶಾ ಸುದೀರ್ಘ ಸಂದರ್ಶನ ನೀಡಿದ್ದಾರೆ. 

ದಾಖಲೆ ಇಲ್ಲದವರಿಗೂ ಅವಕಾಶ: ಪೌರತ್ವ ತಿದ್ದುಪಡಿ ಕಾಯ್ದೆಗೆ ಅರ್ಜಿ ಸಲ್ಲಿಸುವವರ ಪೈಕಿ ಶೇ.85 ಮಂದಿಯ ಬಳಿ ಅಗತ್ಯವಾದ ದಾಖಲೆಗಳಿವೆ ಎಂಬ ಮಾಹಿತಿಯಿದೆ. 

ಪ್ರಸ್ತುತ ಸಿಎಎ ಅಡಿ ಅರ್ಜಿ ಸಲ್ಲಿಸುವವರು ಹೊರದೇಶದಿಂದ ಬಂದುದಕ್ಕೆ ಮತ್ತು ಭಾರತದಲ್ಲಿ ನಿಗದಿತ ದಿನಾಂಕದಿಂದ ವಾಸಿಸುತ್ತಿರುವ ಕುರಿತು ಸಾಬೀತು ಮಾಡುವ ದಾಖಲೆಗಳನ್ನು ಸಲ್ಲಿಸಬೇಕಿದೆ. 

ಮುಂದಿನ ದಿನಗಳಲ್ಲಿ ಯಾವುದೇ ದಾಖಲೆಯಿಲ್ಲದೇ ಇರುವ ವ್ಯಕ್ತಿಗಳನ್ನು ಸಿಎಎ ಅಡಿ ತರುವ ಕುರಿತು ಸೂಕ್ತ ಕಾನೂನು ರೂಪಿಸುತ್ತೇವೆ ಎಂದು ಅಮಿತ್‌ ಶಾ ತಿಳಿಸಿದರು.

ಸಿಎಎ ಹಿಂಪಡೆಯಲ್ಲ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಇದರ ಬದಲಾಗಿ ಕಾನೂನಿನ ಕುರಿತು ದೇಶಾದ್ಯಂತ ಅರಿವು ಮೂಡಿಸಿ ಅರ್ಹರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತೇವೆ ಎಂದು ತಿಳಿಸಿದರು.

ಸಿಎಎ ಜಾರಿ ಮಾಡದಿರಲು ರಾಜ್ಯಗಳಿಗೆ ಸಾಧ್ಯವಿಲ್ಲ: ಸಿಎಎ ಜಾರಿ ಮಾಡುವುದಿಲ್ಲ ಎಂಬುದಾಗಿ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. 

ಆದರೆ ಪೌರತ್ವದ ವಿಷಯ ಕೇಂದ್ರ ಪಟ್ಟಿಯಲ್ಲಿದ್ದು, ರಾಜ್ಯಗಳಿಗೆ ಇದರ ಅಧಿಕಾರ ವ್ಯಾಪ್ತಿ ಇಲ್ಲ. ಈ ಹಿನ್ನೆಲೆಯಲ್ಲಿ ಅವರ ಹೇಳಿಕೆ ಕೇವಲ ತಮ್ಮ ಮತಬ್ಯಾಂಕ್‌ ಗಟ್ಟಿಮಾಡಿಕೊಳ್ಳಲು ಮಾಡುತ್ತಿರುವ ಹುನ್ನಾರ ಎಂದು ಆರೋಪಿಸಿದರು.

ಉದ್ಯೋಗ ಕಸಿಯಲ್ಲ: ಸಿಎಎ ಜಾರಿಯಿಂದ 3.5 ಕೋಟಿಗೂ ಅಧಿಕ ನಿರಾಶ್ರಿತರು ಭಾರತಕ್ಕೆ ನುಗ್ಗುವ ಅಪಾಯವಿದೆ. ಅವರು ನಮ್ಮ ಉದ್ಯೋಗ ಕಸಿಯುತ್ತಾರೆ ಎಂದು ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. 

ಆದರೆ ನಾವು 15 ವರ್ಷದಿಂದ ಇಲ್ಲೇ ವಾಸಿಸುತ್ತಿರುವವರಿಗೆ ಪೌರತ್ವ ಕೊಡುತ್ತೇವೆ ಎಂದು ಹೇಳಿದ್ದೇವೆಯೇ ಹೊರತು ಹೊಸಬರಿಗಲ್ಲ. ಹೀಗಾಗಿ ಅವರೂ ಸಹ ನಮ್ಮವರೇ ಆಗಿದ್ದು, ನಿರಾಶ್ರಿತರಿಗೆ ಅವರ ಹಕ್ಕು ಕೊಡುತ್ತಿದ್ದೇವೆ ಎಂದು ತಿಳಿಸಿದರು.

ಅಖಂಡ ಭಾರತ ಪರಿಕಲ್ಪನೆ: ಸಿಎಎ ಅಡಿಯಲ್ಲಿ ಮುಸ್ಲಿಮರನ್ನು ಒಳಗೊಳ್ಳದಿರಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿ, ‘ಸ್ವಾತಂತ್ರ್ಯಕ್ಕೂ ಮೊದಲು ಮತ್ತು ನಂತರ ನಮ್ಮ ಅಖಂಡ ಭಾರತವನ್ನು ಹಲವು ಬಾರಿ ಒಡೆಯಲಾಗಿದೆ. 

ಅಂದಿನ ಭಾರತದ ಪ್ರದೇಶಗಳು ಇಂದು ಮುಸ್ಲಿಂ ಬಾಹುಳ್ಯ ರಾಷ್ಟ್ರಗಳಾಗಿವೆ. ದೇಶ ವಿಭಜನೆಯಾದಾಗ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕ್ರಮವಾಗಿ ಶೇ.23 ಮತ್ತು ಶೇ.22ರಷ್ಟು ಹಿಂದೂಗಳಿದ್ದರು. 

ಅವರ ಮೇಲಿನ ಧಾರ್ಮಿಕ ದೌರ್ಜನ್ಯದಿಂದ ಈಗ ಅವು ಕ್ರಮವಾಗಿ ಶೇ.3.7 ಮತ್ತು ಶೇ.10ಕ್ಕಿಳಿದಿದೆ. ಅಲ್ಲದೆ ಅಫ್ಘಾನಿಸ್ತಾನದಲ್ಲಿ 2 ಲಕ್ಷ ಇದ್ದ ಸಿಖ್ಖರ ಸಂಖ್ಯೆ ಇಂದು 500ಕ್ಕಿಳಿದಿದೆ. 

ಇವರಿಗೆ ನೆಲೆ ನೀಡಿ ಅಖಂಡ ಭಾರತ ಸೃಷ್ಟಿಸುವ ಉದ್ದೇಶದಿಂದ ಇವರೆಲ್ಲರನ್ನೂ ಒಳಗೊಳ್ಳಲಾಗಿದೆ. ಆದರೆ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರಗಳಿರುವ ಕಾರಣ ಅವರನ್ನು ಒಳಗೊಂಡಿಲ್ಲ’ ಎಂದು ತಿಳಿಸಿದರು.