ಪಾಕ್‌ ದಾಳಿಗೆ ಬಲಿಯಾದ ಆಂಧ್ರ ಅಗ್ನಿವೀರ ಮುರಳಿಗೆ ₹50 ಲಕ್ಷ ಪರಿಹಾರ ಪ್ರಕಟ

| N/A | Published : May 12 2025, 12:17 AM IST / Updated: May 12 2025, 04:37 AM IST

ಪಾಕ್‌ ದಾಳಿಗೆ ಬಲಿಯಾದ ಆಂಧ್ರ ಅಗ್ನಿವೀರ ಮುರಳಿಗೆ ₹50 ಲಕ್ಷ ಪರಿಹಾರ ಪ್ರಕಟ
Share this Article
  • FB
  • TW
  • Linkdin
  • Email

ಸಾರಾಂಶ

ಜಮ್ಮು ಕಾಶ್ಮೀರದ ಪೂಂಛ್‌ನಲ್ಲಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಹುತಾತ್ಮರಾದ ಆಂಧ್ರಪ್ರದೇಶದ ಯೋಧ (ಅಗ್ನಿವೀರ) ಮುದಾವತ್‌ ಮರುಳಿ ನಾಯಕ್‌ಗೆ ಆಂಧ್ರ ಸರ್ಕಾರ 50 ಲಕ್ಷ ರು. ಪರಿಹಾರ ಘೋಷಿಸಿದೆ.

ಕಲ್ಲಿತಾಂಡ: ಜಮ್ಮು ಕಾಶ್ಮೀರದ ಪೂಂಛ್‌ನಲ್ಲಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಹುತಾತ್ಮರಾದ ಆಂಧ್ರಪ್ರದೇಶದ ಯೋಧ (ಅಗ್ನಿವೀರ) ಮುದಾವತ್‌ ಮರುಳಿ ನಾಯಕ್‌ಗೆ ಆಂಧ್ರ ಸರ್ಕಾರ 50 ಲಕ್ಷ ರು. ಪರಿಹಾರ ಘೋಷಿಸಿದೆ. ಮುರುಳಿ ಪಾರ್ಥಿವ ಶರೀರ ಶನಿವಾರ ಆಂಧ್ರದ ಸತ್ಯಸಾಯಿ ಜಿಲ್ಲೆಯಲ್ಲಿರುವ ಅವರ ನಿವಾಸ ತಲುಪಿದ್ದು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್‌ ಯೋಧನ ಅಂತಿಮ ದರ್ಶನ ಪಡೆದು, ವೈಯಕ್ತಿಕವಾಗಿ 25 ಲಕ್ಷ ರು. ಪರಿಹಾರ ಘೋಷಿಸಿದರು. 

ಇದೇ ವೇಳೆ ಮಾತನಾಡಿದ ಅವರು ‘ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 50 ಲಕ್ಷ ರು., ಐದು ಎಕರೆ ಕೃಷಿ ಭೂಮಿ, 300 ಚದರ ಮೀಟರ್‌ ನಿವೇಶನ ಭೂಮಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ಸಂಪುಟದಲ್ಲಿ ಚರ್ಚಿಸಿದ ಬಳಿಕ ಅವರ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು’ ಎಂದಿದ್ದಾರೆ.

ಈಗಲೇ ಮನೆಗೆ ವಾಪಸ್‌ ಬೇಡ: ಗಡಿ ಜನರಿಗೆ ಕಾಶ್ಮೀರ ಪೊಲೀಸ್‌ ಸಲಹೆ

ಶ್ರೀನಗರ: ಪಾಕಿಸ್ತಾನದ ಶೆಲ್ ದಾಳಿಯಿಂದಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲ್ಪಟ್ಟ ಗಡಿ ಗ್ರಾಮಗಳ ನಿವಾಸಿಗಳು ತಮ್ಮ ಮನೆಗಳಿಗೆ ಈಗಲೇ ಹಿಂತಿರುಗದಂತೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಸೂಚಿಸಿದ್ದಾರೆ. ಪಾಕಿಸ್ತಾನದ ಶೆಲ್ ದಾಳಿಗೆ ಗುರಿಯಾಗುವ ಅಪಾಯ ಹೆಚ್ಚಿರುವುದರಿಂದ ಬಾರಾಮುಲ್ಲಾ, ಬಂಡಿಪೋರಾ ಮತ್ತು ಕುಪ್ವಾರಾ ಜಿಲ್ಲೆಗಳ ನಿಯಂತ್ರಣ ರೇಖೆಯ ಸಮೀಪವಿರುವ ಹಳ್ಳಿಗಳ 1.25 ಲಕ್ಷಕ್ಕೂ ಹೆಚ್ಚು ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಇನ್ನೂ ಈ ಪ್ರದೇಶಗಳು ಅಪಾಯ ಮುಕ್ತವಾಗಿಲ್ಲದ ಕಾರಣ, ‘ಈಗಲೇ ನಿಮ್ಮ ಗ್ರಾಮಗಳಿಗೆ ಹಿಂತಿರುಗಬೇಡಿ. ಈ ಪ್ರದೇಶಗಳಲ್ಲಿ ಬಾಂಬ್ ಮತ್ತಿತರ ಯುದ್ಧಸಾಮಗ್ರಿಗಳು ಉಳಿದಿರುವ ಕಾರಣ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ’ ಎಂದು ಸಲಹೆ ನೀಡಿದ್ದಾರೆ.

ಭಾರತ-ಪಾಕ್ ಕದನ ವಿರಾಮಕ್ಕೆ ಪೋಪ್ ಸ್ವಾಗತ

ವ್ಯಾಟಿಕನ್ ಸಿಟಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಒಪ್ಪಂದವನ್ನು ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಗುರು ಪೋಪ್ ಲಿಯೋ 14 ಸ್ವಾಗತಿಸಿದ್ದಾರೆ. ಭಾರತ-ಪಾಕ್ ಉದ್ವಿಗ್ನತೆ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ದ್ವಿಪಕ್ಷೀಯ ಮಾತುಕತೆಗಳು ಶಾಶ್ವತವಾಗಿ ಶಾಂತಿ ನೆಲೆಸಲು ಕಾರಣವಾಗುತ್ತವೆ’ ಎಂದಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಪಾಕ್ ಉಗ್ರವಾದದ ಸಾಕ್ಷ್ಯ ನೀಡಲು ಭಾರತ ಸಜ್ಜು

ನವದೆಹಲಿ: ಮುಂದಿನ ವಾರ ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧ ಸಮಿತಿಯ ಮುಂದೆ ಪಾಕಿಸ್ತಾನದ ಭಯೋತ್ಪಾದಕ ನಂಟಿನ ಕುರಿತು ಸಾಕ್ಷ್ಯಗಳನ್ನು ತೆರೆದಿಡಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈಗಾಗಲೇ ಪಾಕಿಸ್ತಾನದ ಉಗ್ರ ಚಟುವಟಿಕೆಗಳ ಕುರಿತು ಅನೇಕ ಬಾರಿ ಭಾರತ ನಿರ್ಬಂಧ ಸಮಿತಿಗೆ ಮಾಹಿತಿ ನೀಡಿದೆ. ಆದರೆ ಕೆಲವು ಪ್ರಸ್ತಾಪಗಳು ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಿ ವೀಟೋ ಅಧಿಕಾರ ಹೊಂದಿರುವ ಚೀನಾದಿಂದ ಪ್ರತಿರೋಧ ಎದುರಿಸಿವೆ.ಈ ಸಮಿತಿಯು 1999ರಲ್ಲಿ ಆರಂಭವಾಗಿದ್ದು, ಉಗ್ರ ಕೃತ್ಯಗಳ ತಡೆಗಾಗಿ ಕೆಲಸ ಮಾಡುತ್ತದೆ.

ಮೇ15ಕ್ಕೆ ಉಕ್ರೇನ್‌ ಜತೆ ನೇರ ಮಾತುಕತೆಗೆ ಸಿದ್ಧ: ಅಧ್ಯಕ್ಷ ಪುಟಿನ್‌ ಘೋಷಣೆ

ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಆರಂಭವಾಗಿ ಎರಡು ವರ್ಷಗಳೇ ಕಳೆದಿದ್ದು, ಈ ನಡುವೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ಜೊತೆ ಮೇ 15ಕ್ಕೆ ಯಾವುದೇ ಷರತ್ತುಗಳಿರದೇ ನೇರ ಮಾತುಕತೆಗೆ ಸಿದ್ಧ ಎಂದಿದ್ದಾರೆ. ಭಾನುವಾರ ಕ್ರೆಮ್ಲಿನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪುಟಿನ್, 2022ರಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆದ ಶಾಂತಿ ಮಾತುಕತೆಗಳನ್ನು ಪುನರಾರಂಭಿಸುವ ಪ್ರಸ್ತಾಪವನ್ನು ಮುಂದಿಟ್ಟರು. ಅಲ್ಲದೇ ಮೇ 15 ರಂದು ಇಸ್ತಾನ್‌ಬುಲ್‌ನಲ್ಲಿ ನೇರ ಮಾತುಕತೆಗೆ ಒಪ್ಪಿದ್ದಾರೆ, ಉಕ್ರೇನ್‌ನಲ್ಲಿ ಶನಿವಾರ ನೀಡಲಾದ ಬೇಷರತ್ತಾದ 30 ದಿನಗಳ ಕದನ ವಿರಾಮವನ್ನು ಪುಟಿನ್ ಒಪ್ಪಿಕೊಳ್ಳದಿದ್ದರೆ ಅವರ ಮೇಲೆ ಒತ್ತಡ ಹೇರುವುದಾಗಿ ನಾಲ್ಕು ಪ್ರಮುಖ ಯುರೋಪಿಯನ್‌ ರಾಷ್ಟ್ರಗಳು ಹೇಳಿದ ಬೆನ್ನಲ್ಲೇ ಪುಟಿನ್ ಈ ನಿರ್ಧಾರಕ್ಕೆ ಬಂದಿದ್ದಾರೆ.

ಶಿರಡಿ ದೇಗುಲದಲ್ಲಿ ಇನ್ನು ಹೂಗುಚ್ಛ, ಹೂವಿನಹಾರ, ಶಾಲ್‌ ಸ್ವೀಕಾರ ಮಾಡಲ್ಲ

ಮುಂಬೈ: ದೇಶದಲ್ಲಿ ಭದ್ರತಾ ಆತಂಕ ಹೆಚ್ಚುತ್ತಿರುವ ನಡುವೆ, ಮಹಾರಾಷ್ಟ್ರದ ಶಿರಡಿಯಲ್ಲಿರುವ ಪ್ರಸಿದ್ಧ ಸಾಯಿಬಾಬಾ ದೇವಾಲಯದ ಸಂಕೀರ್ಣದೊಳಗೆ ಹಾರ, ಹೂಗುಚ್ಛ ಮತ್ತು ಶಾಲುಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಕಳೆದ ವಾರವಷ್ಟೆ ದೇಗುಲಕ್ಕೆ ಬೆದರಿಕೆ ಇಮೇಲ್ ಬಂದ ಬೆನ್ನಲ್ಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.‘ಮೇ 2ರಂದು ದೇವಸ್ಥಾನಕ್ಕೆ ಬೆದರಿಕೆ ಇಮೇಲ್ ಬಂದಿತ್ತು. ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಮತ್ತು ದೇಶಾದ್ಯಂತ ಭದ್ರತಾ ಮುನ್ನೆಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು, ದೇವಸ್ಥಾನದ ಒಳಗೆ ಹೂಗುಚ್ಛ, ಹಾರ, ಪ್ರಸಾದ ಮತ್ತು ಶಾಲುಗಳನ್ನು ತರುವುದನ್ನು ನಿಷೇಧಿಸಲಾಗಿದೆ’ ಎಂದು ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಸದಸ್ಯ ಗೋರಕ್ಷ್ ಗಡಿಲ್ಕರ್ ತಿಳಿಸಿದ್ದಾರೆ.