ಕೇರಳದ ಪಾಲಕ್ಕಾಡ್‌ನಲ್ಲಿ ಆ.31ರಿಂದ ಸೆ.2ರ ವರೆಗೆ ಆರೆಸ್ಸೆಸ್‌ ಸಭೆ : ಬಿಜೆಪಿ, ಸಹಸಂಸ್ಥೆಗಳು ಭಾಗಿ

| Published : Aug 21 2024, 12:42 AM IST / Updated: Aug 21 2024, 08:09 AM IST

ಕೇರಳದ ಪಾಲಕ್ಕಾಡ್‌ನಲ್ಲಿ ಆ.31ರಿಂದ ಸೆ.2ರ ವರೆಗೆ ಆರೆಸ್ಸೆಸ್‌ ಸಭೆ : ಬಿಜೆಪಿ, ಸಹಸಂಸ್ಥೆಗಳು ಭಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌), ಅದರ ಅಂಗಸಂಸ್ಥೆಗಳು ಮತ್ತು ಬಿಜೆಪಿಯ ವಾರ್ಷಿಕ ಸಭೆಯಾದ ಅಖಿಲ ಭಾರತೀಯ ಸಮನ್ವಯ ಬೈಠಕ್‌ ಕೇರಳದ ಪಾಲಕ್ಕಾಡ್‌ನಲ್ಲಿ ಆ.31ರಿಂದ ಸೆ.2ರ ವರೆಗೆ ನಡೆಯಲಿದೆ.  

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌), ಅದರ ಅಂಗಸಂಸ್ಥೆಗಳು ಮತ್ತು ಬಿಜೆಪಿಯ ವಾರ್ಷಿಕ ಸಭೆಯಾದ ಅಖಿಲ ಭಾರತೀಯ ಸಮನ್ವಯ ಬೈಠಕ್‌ ಕೇರಳದ ಪಾಲಕ್ಕಾಡ್‌ನಲ್ಲಿ ಆ.31ರಿಂದ ಸೆ.2ರ ವರೆಗೆ ನಡೆಯಲಿದೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಎಲ್ಲಾ ಆರು ಜಂಟಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಉಳಿದ ಹಿರಿಯರು ಭಾಗವಹಿಸಲಿರುವ ಮೂರು ದಿನಗಳ ಈ ಸಭೆಯಲ್ಲಿ ರಾಷ್ಟ್ರೀಯ ಹಿತಾಸಕ್ತಿ ಹಾಗೂ ಪರಸ್ಪರ ಸಹಕಾರ ವೃದ್ಧಿಸುವ ಕುರಿತು ಚರ್ಚಿಸಲಾಗುವುದು ಎಂದು ಸಂಘದ ಮಾಧ್ಯಮ ಮತ್ತು ಪ್ರಚಾರ ಮುಖ್ಯಸ್ಥ ಸುನಿಲ್‌ ಅಂಬೇಕರ್ ಮಂಗಳವಾರ ಮಾಹಿತಿ ನಿಡಿದ್ದಾರೆ. ಜೊತೆಗೆ ಆರ್‌ಎಸ್‌ಎಸ್‌ ಪ್ರೇರಿತ 32 ಸಂಸ್ಥೆಗಳ ಮುಖ್ಯಸ್ಥರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದು, ರಾಷ್ಟ್ರೀಯ ಹಿತಾಸಕ್ತಿ, ಇತ್ತೀಚಿನ ಪ್ರಮುಖ ಘಟನೆಗಳು, ಸಾಮಾಜಿಕ ಬದಲಾವಣೆಯ ವಿವಿಧ ಆಯಾಮಗಳ ಕುರಿತ ಯೋಜನೆ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

==

ಹಸೀನಾ ಗಡಿಪಾರು ಮಾಡಿ ವಿಚಾರಣೆಗೆ ಅವಕಾಶ ಕೊಡಿ: ಭಾರತಕ್ಕೆ ಬಿಎನ್‌ಪಿ ಮನವಿ

ಢಾಕಾ: ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ ಹಸೀನಾರನ್ನು ವಿಚಾರಣೆ ಎದುರಿಸಲು ಭಾರತದಿಂದ ಬಾಂಗ್ಲಾದೇಶಕ್ಕೆ ಗಡೀಪಾರು ಮಾಡುವಂತೆ ಬಾಂಗ್ಲಾದೇಶ ನ್ಯಾಷನಲ್ ಪಕ್ಷ ( ಬಿಎನ್‌ಪಿ) ಕಾರ್ಯದರ್ಶಿ ಮಿರ್ಜಾ ಫಕ್ರುಲ್‌ ಇಸ್ಲಾಂ ಆಲಂಗೀರ್ ಹೇಳಿದ್ದಾರೆ. ಉದ್ಯೋಗ ಮೀಸಲಾತಿ ಕಿಚ್ಚು ಜೋರಾಗಿ ಆ.5 ರಂದು ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಭಾರತದಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿ ಅವರನ್ನು ಬಾಂಗ್ಲಾಕ್ಕೆ ಮರಳಿ ಕಳುಹಿಸುವಂತೆ ಬಿಎನ್‌ಪಿ ಮನವಿ ಮಾಡಿದೆ. ‘ಬಾಂಗ್ಲಾ ಸರ್ಕಾರಕ್ಕೆ ಅವರನ್ನು( ಹಸೀನಾ) ಕಾನೂನಾತ್ಮಕವಾಗಿ ಹಸ್ತಾಂತರ ಮಾಡಬೇಕೆಂದು ಕೇಳಿ ಕೊಳ್ಳುತ್ತೇನೆ. ದೇಶದ ಜನರು ಅವರು ವಿಚಾರಣೆ ಎದುರಿಸಬೇಕು ಎಂದು ತೀರ್ಮಾನ ಮಾಡಿದ್ದಾರೆ. ಆಕೆ ಆ ವಿಚಾರಣೆಯನ್ನು ಎದುರಿಸಲಿ’ ಎಂದಿದ್ದಾರೆ. ಅಲ್ಲದೇ ಶೇಖ್‌ ಹಸೀನಾರಿಗೆ ಆಶ್ರಯ ನೀಡಿರುವ ಭಾರತ, ಪ್ರಜಾಪ್ರಭುತ್ವದಲ್ಲಿ ಬದ್ಧತೆ ತೋರಿಸುತ್ತಿಲ್ಲ ಎಂದು ಆಲಂಗೀರ್ ಹೇಳಿದ್ದಾರೆ.

==

ಜಾತಿ ವ್ಯವಸ್ಥೆ ಅಸಂವಿಧಾನಿಕ ಘೋಷಣೆಗೆ ಸುಪ್ರೀಂ ನಕಾರ

ನವದೆಹಲಿ: ಜಾತಿ ವ್ಯವಸ್ಥೆ ಅಸಾಂವಿಧಾನಿಕ ಎಂದು ಘೋಷಿಸಲು ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠ ಮಂಗಳವಾರ ವಜಾಗೊಳಿಸಿದೆ. ‘ಸಂವಿಧಾನದ ಮೂಲ ಪ್ರತಿಯಲ್ಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂಬ ಉಲ್ಲೇಖವಿದೆ’ ಎಂದು ನ್ಯಾ। ಜೆ.ಬಿ. ಪರ್ದಿವಾಲ್‌ ಮತ್ತು ಮನೋಜ್‌ ಮಿಶ್ರಾ ಅವರನ್ನು ಒಳಗೊಂಡ ಪೀಠ ಹೇಳಿದೆ. ಜಾತಿ ವ್ಯವಸ್ಥೆಯು ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ವಾಜಿರ್‌ ಸಿಂಗ್‌ ಪೂನಿಯಾ ಸಲ್ಲಿಸಿದ್ದ ಸರ್ಜಿ ವಿಚಾರಣೆಯ ವೇಳೆ ಕೋರ್ಟ್‌ ಹೀಗೆ ಹೇಳಿದೆ.

==

ದಿಲ್ಲಿಯ 100ಕ್ಕೂ ಹೆಚ್ಚು ಆಸ್ಪತ್ರೆ, ಮಾಲ್‌ಗಳಿಗೆ ಹುಸಿ ಬಾಂಬ್‌ ಬೆದರಿಕೆ

ನವದೆಹಲಿ: ಭಾರತದಲ್ಲಿ ಬಾಂಬ್‌ ಬೆದರಿಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಂಗಳವಾರ ಒಂದೇ ದಿನ ರಾಜಧಾನಿ ದೆಹಲಿಯ ನೂರಕ್ಕೂ ಹೆಚ್ಚು ಆಸ್ಪತ್ರೆಗಳು ಹಾಗೂ ಮಾಲ್‌ಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಸಂದೇಶಗಳು ಬಂದಿವೆ.ಏಮ್ಸ್, ಸರ್‌ ಗಂಗಾ ರಾಮ್‌, ಅಪೊಲೋ ಮತ್ತು ಫೋರ್ಟಿಸ್ ಆಸ್ಪತ್ರೆ ಸೇರಿದಂತೆ 50 ಕ್ಕೂ ಹೆಚ್ಚು ಆರೋಗ್ಯ ಸಂಸ್ಥೆಗಳು ಹಾಗೂ ದಕ್ಷಿಣ ದೆಹಲಿಯ ಚಾಣಕ್ಯ ಮಾಲ್, ಸಾಕೇತ್ ಸೆಲೆಕ್ಟ್ ಸಿಟಿ ವಾಕ್ ಮಾಲ್ ಸೇರಿದಂತೆ 50ಕ್ಕೂ ಹೆಚ್ಚು ಮಾಲ್‌ಗಳಗೆ ಬಾಂಬ್‌ ಬೆದರಿಕೆಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ, ಬಾಂಬ್‌ ನಿಷ್ಕ್ರಿಯ ದಳ ಹಾಗೂ ಪೊಲೀಸರು ಬಾಂಬ್‌ಗಳಿಗಾಗಿ ತೀವ್ರ ಶೋಧ ನಡೆಸಿದ್ದು, ಅದು ಹುಸಿ ಕರೆಯೆಂದು ಖಚಿತಪಟ್ಟಿದೆ. ಇತ್ತೀಚೆಗೆ ರಾಜಸ್ಥಾನ, ದೆಹಲಿ, ನೋಯ್ಡಾದ ಹಲವು ಆಸ್ಪತ್ರೆಗಳಿಗೆ ಮತ್ತು ನವೀ ಮುಂಬೈನ ಮಾಲ್‌ಗೆ ಹುಸಿ ಬಾಂಬ್‌ ಬೆದರಿಕೆ ಬಂದಿತ್ತು.

==

ಚಿತ್ರೋದ್ಯಮ ಕಳಂಕಿತರಿಗೆ ಸರ್ಕಾರ ರಕ್ಷಣೆ: ಕೇರಳದ ವಿಪಕ್ಷಗಳ ಕಿಡಿಕಿಡಿ

ತಿರುವನಂತಪುರಂ: ಮಲಯಾಳಂ ಚಿತ್ರರಂಗದಲ್ಲಿ ನಟಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ನ್ಯಾ। ಹೇಮಾ ಆಯೋಗ ನೀಡಿರುವ ವರದಿ ಕೇರಳದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದ್ದು, ‘ಸರ್ಕಾರ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ’ ಎಂದು ವಿಪಕ್ಷಗಳ ಆರೋಪಿಸಿವೆ.ವಿಪಕ್ಷ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದು. ಸರ್ಕಾರ ವರದಿ ಸ್ವೀಕರಿಸಿದ್ದರೂ ಕೂಡ ಆರೋಪಿಗಳನ್ನು ರಕ್ಷಣೆ ಮಾಡಲು ಮುಂದಾಗಿದೆ ಎಂದಿರುವ ಕಾಂಗ್ರೆಸ್‌ ಮತ್ತು ಯುಡಿಎಫ್‌ ,‘ರಾಜ್ಯ ಸರ್ಕಾರ ಆರೋಪಿಗಳನ್ನು ರಕ್ಷಿಸಲು ವರದಿಯನ್ನು ಗೌಪ್ಯವಾಗಿ ಇಟ್ಟಿದೆಯೇ? ಪಿಣರಾಯಿ ಸರ್ಕಾರ ಸಂತ್ರಸ್ತರ ಪರವಾಗಿ ನಿಲ್ಲುವುದರ ಬದಲು, ಬೇಟೆಗಾರರ ಪರವಾಗಿ ನಿಲ್ಲುತ್ತಿದೆ’ ಎಂದು ಆರೋಪಿಸಿದೆ.

‘ ರಾಜ್ಯ ಸರ್ಕಾರಕ್ಕೆ ಆರೋಪಿಗಳು ಯಾರೆಂದು ತಿಳಿದಿದ್ದರೂ ಕೂಡ ಅವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾಗಿದೆ’ ಎಂದು ಬಿಜೆಪಿ ಆರೋಪ ಮಾಡಿದೆ. ಆದರೆ ಪಿಣರಾಯಿ ಸರ್ಕಾರ ವಿಪಕ್ಷಗಳ ಆರೋಪವನ್ನು ತಳ್ಳಿ ಹಾಕಿದೆ. ಸಮಿತಿ ನೀಡಿದ ವರದಿಗಳನ್ನು ಆಧರಿಸಿ ಕ್ರಮ ಕೈಗೊಳ್ಳಲು ಮತ್ತು ಕಾನೂನುಗಳನ್ನು ತರಲು ಸಿದ್ಧ. ಸರ್ಕಾರ ಯಾವಾಗಲೂ ಸಂತ್ರಸ್ತರ ಪರವಾಗಿ ಮತ್ತು ಮಹಿಳಾ ಸಮುದಾಯದ ಪರವಾಗಿ ಇದೆ’ ಎಂದಿದೆ.