ಸಾರಾಂಶ
ಕೋಲ್ಕತಾ: ‘ಸಾಂಗ್ಸ್ ಆಫ್ ಫಾರ್ಗಟನ್ ಟ್ರೀಸ್’ ಹಿಂದಿ ಸಿನಿಮಾದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದ ಅನುಪರ್ಣಾ ರಾಯ್ ವೆನಿಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ಈ ಪ್ರಶಸ್ತಿ ಗೆದ್ದ ಭಾರತದ ಮೊದಲ ನಿರ್ದೇಶಕಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರತಿಷ್ಠಿತ ಒರಿಝೋಂಜಿ ವಿಭಾಗದಲ್ಲಿ ಅನುಪರ್ಣ ರಾಯ್ ಅವರು ಪ್ರಶಸ್ತಿ ಗೆದ್ದಿದ್ದಾರೆ. ಈ ವಿಭಾಗದಲ್ಲಿ ಪ್ರದರ್ಶನಗೊಂಡ ಏಕೈಕ ಭಾರತೀಯ ಚಿತ್ರ ‘ಸಾಂಗ್ಸ್..’ ಆಗತ ಇದಾಗಿತ್ತು. ಈ ಸಿನಿಮಾದಲ್ಲಿ ನಾಶ್ ಶೇಖ್ ಮತ್ತು ಸುಮಿ ಬಾಘೆಲ್ ನಟಿಸಿದ್ದಾರೆ. ಮುಂಬೈನಲ್ಲಿ ವಿಭಿನ್ನ ಸ್ಥಳದಿಂದ ಬಂದ ಇಬ್ಬರು ಮಹಿಳೆಯರ ಸುತ್ತ ನಡೆಯುವ ಕಥಾಹಂದರವಿರುವ ಚಿತ್ರವಿದು.
ಎಸಿ ಕಂಪ್ರೆಸರ್ ಸ್ಫೋಟ: ಒಂದೇ ಕುಟುಂಬದ 3 ಮಂದಿ ಬಲಿ, ಪುತ್ರ ಬಚಾವ್
ಫರೀದಾಬಾದ್ (ಹರ್ಯಾಣ): ಹವಾನಿಯಂತ್ರಕದ ಕಂಪ್ರೆಸ್ಸರ್ ಸ್ಫೋಟಗೊಂಡು, ಅದರ ಹೊಗೆಯಿಂದಾಗಿ ತಂದೆ, ತಾಯಿ ಮತ್ತು ಪುತ್ರಿ ಮತ್ತು ಸಾಕುನಾಯಿ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಹರ್ಯಾಣದ ಫರೀದಾಬಾದ್‌ನಲ್ಲಿ ಸೋಮವಾರ ಸಂಭವಿಸಿದೆ. ಅದೃಷ್ಟವಶಾತ್ ದಂಪತಿಗಳ ಪುತ್ರ ಕಿಟಕಿ ಹಾರಿ ಪಾರಾಗಿದ್ದಾನೆ.
ಭಾನುವಾರ ಮತ್ತು ಸೋಮವಾರದ ನಡುವಿನ ರಾತ್ರಿ 1.30ರ ವೇಳೆಗೆ ಘಟನೆ ಸಂಭವಿಸಿದೆ. ನಾಲ್ಕಂತಸ್ತಿನ ಕಟ್ಟಡದಲ್ಲಿ 1ನೇ ಮಹಡಿ ಖಾಲಿಯಿತ್ತು. 2ನೇ ಮಹಡಿಯಲ್ಲಿ ಸಚಿನ್ ಕುಟುಂಬ ವಾಸಿಸುತ್ತಿತ್ತು. 1ನೇ ಮಹಡಿಯ ಏಸಿ ಸ್ಫೋಟಗೊಂಡಿದೆ. ಅದರ ಕಪ್ಪು ಹೊಗೆ 2ನೇ ಮಹಡಿಗೆ ಆವರಿಸಿದ್ದು, ಉಸಿರುಗಟ್ಟಿ ಸಚಿನ್, ಅವರ ಪತ್ನಿ ರಿಂಕು, ಪುತ್ರಿ ಸುಜನ್ ಮೃತಪಟ್ಟಿದ್ದಾರೆ. ಪುತ್ರ ಕಿಟಕಿ ಹಾಕಿ ಪಾರಾಗಿದ್ದಾನೆ. ಅವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಿಹಾರ ಅಂಗನವಾಡಿ ಸಿಬ್ಬಂದಿಗೆ ಬಂಪರ್: ವೇತನ 2000 ರು. ಹೆಚ್ಚಳ
ಪಟನಾ: ಚುನಾವಣಾ ಹೊಸ್ತಿನಲ್ಲಿರುವ ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಮತ್ತೊಂದು ಬಂಪರ್ ಯೋಜನೆ ಘೋಷಿಸಿದ್ದು, ಅಂಗನವಾಡಿ ಕಾರ್ಯಕರ್ತೆಯರ ಸಹಾಯಧನವನ್ನು 2,000 ರು., ಹಾಗೂ ಸಹಾಯಕಿಯ ಸಹಾಯಧನವನ್ನು 500 ರು. ಸಹಾಯಧನ ಹೆಚ್ಚಿಸಿ ಸಿಹಿ ಸುದ್ದಿ ನೀಡಿದ್ದಾರೆ.‘ಅಂಗನವಾಡಿ ಕಾರ್ಯಕರ್ತೆಯರು ಇನ್ಮುಂದೆ 7 ಸಾವಿರ ರು. ಬದಲು 9,000 ರು. ವೇತನ ಪಡೆಯಲಿದ್ದಾರೆ. ಸಹಾಯಕಿಯರು 500 ರು. ಹೆಚ್ಚಳದೊಂದಿಗೆ 4500 ರು. ಪಡೆಯಲಿದ್ದಾರೆ’ ಎಂದು ನಿತೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಕೆಲ ದಿನಗಳ ಹಿಂದಷ್ಟೇ ಅಂಗವಿಕಲರು, ವೃದ್ಧರು, ವಿಧವೆಯರ ಪಿಂಚಣಿ ಹೆಚ್ಚಿಸಿದ್ದರು.
ಗಣಪತಿ ಮಂಡಳದ ಮೋದಕ ಭರ್ಜರಿ ₹1.85 ಲಕ್ಷಕ್ಕೆ ಹರಾಜು!
ಥಾಣೆ: ಇಲ್ಲಿನ ಅಂಬೆರ್ನಾಥ ಎಂಬಲ್ಲಿ ಪ್ರತಿ ವರ್ಷ ನಡೆವ ಶ್ರೀ ಖತುಶ್ಯಾಂ ಗಣಪತಿ ಮಂಡಲದ ಮೋದಕವು ಈ ವರ್ಷ ಭರ್ಜರಿ 1.85 ಲಕ್ಷ ರು.ಗೆ ಹರಾಜಾಗಿದೆ. ಅದರಲ್ಲಿಯೂ ಮಹಿಳೆಯೊಬ್ಬರು ಮೋದಕ ಖರೀದಿಸಿದ್ದಾರೆ.ಸುಮಾರು 2.25-3.25 ಕೇಜಿ ತೂಕವಿರುವ ಮೋದಕವು ಗಣಪತಿಯ ಹಸ್ತದ ಮೇಲೆ ಇಡಲಾಗುತ್ತದೆ. ಈ ಮೋದಕವು ದಿವ್ಯ ಆಶೀರ್ವಾದವನ್ನು ಒಳಗೊಂಡಿರುತ್ತದೆ ಎಂದು ಸ್ಥಳೀಯರು ನಂಬುತ್ತಾರೆ. ಹೀಗಾಗಿ ಕಳೆದ 11 ವರ್ಷದಿಂದ 10 ದಿನಗಳ ಗಣೇಶೋತ್ಸವದ ಕೊನೆ ದಿನದಂದು ಮೋದಕವನ್ನು ಗಣಪತಿಯ ಕೈಮೇಲಿಟ್ಟು ಬಳಿಕ ಹರಾಜು ಹಾಕಲಾಗುತ್ತದೆ. ಈ ಬಾರಿ ಅನಾಮಿಕಾ ತ್ರಿಪಾಠಿ ಎಂಬುವರು ಹರಾಜು ಗೆದ್ದಿದ್ದಾರೆ. ಕಳೆದ ವರ್ಷ ಅಂಬೆರ್ನಾಥ ಶಾಸಕಿ 2.22 ಲಕ್ಷ ರು.ಗೆ ಖರೀದಿಸಿದ್ದರು.
ಮೊದಲ ಬಾರಿಯ ಹರಾಜಿನಲ್ಲಿ ಮೋದಕ 7000 ರು.ಗೆ ಹರಾಜಾಗಿತ್ತು.
ಜಿಎಸ್ಟಿ ಸ್ತರ ಕಡಿತ: ಟಿವಿಎಸ್, ಕಿಯಾ, ಎಂಜಿ ಇನ್ನು ಅಗ್ಗ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ಟಿ) ಸ್ತರ ಪರಿಷ್ಕರಣೆಯಿಂದಾಗಿ ಮತ್ತಷ್ಟು ಕಾರು ಮತ್ತು ದ್ವಿಚಕ್ರ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಬೆಲೆ ಇಳಿಸುವುದಾಗಿ ಹೇಳಿವೆ.ಕಿಯಾ ಕಂಪನಿಯು ಸೆ.22ರಿಂದ ಕಾರೆನ್ಸ್ ಕಾರ್ ಮೇಲೆ 48,513 ರು.ನಿಂದ ಕಾರ್ನಿವಲ್ ಕಾರಿನ ಮೇಲೆ 4.48 ಲಕ್ಷ ರು. ಇಳಿಸುವುದಾಗಿ ಹೇಳಿದೆ.
ಜಿಎಸ್‌ಡಬ್ಲ್ಯು ಎಂಜಿ ಕಂಪನಿಯು ಸೆ.7ರಿಂದಲೇ 54 ಸಾವಿರದಿಂದ 3.04 ಲಕ್ಷ ರು.ವರೆಗೆ ಬೆಲೆ ಇಳಿಸಿರುವುದಾಗಿ ಹೇಳಿದೆ.ಇನ್ನು ದ್ವಿಚಕ್ರ ವಾಹನ ತಯಾರಕ ಟಿವಿಎಸ್ ಸಹ ಸೆ.22ರಿಂದ ಪೆಟ್ರೋಲ್ ವಾಹನಗಳ ಬೆಲೆಯನ್ನು ಇಳಿಸುವುದಾಗಿ ಹೇಳಿದೆ.
ಕಳೆದ ವಾರ ಕೇಂದ್ರ ಸರ್ಕಾರವು ವಾಹನಗಳ ಮೇಲಿನ ಜಿಎಸ್ಟಿಯನ್ನು ಶೇ.28ರಿಂದ ಶೇ.18ಕ್ಕೆ ಇಳಿಸಿತ್ತು.