ಚಾಮರಾಜನಗರದಲ್ಲಿ ದಸರಾ ಚಲನಚಿತ್ರೋತ್ಸವ: ಯಶಸ್ವಿ ಪ್ರದರ್ಶನ

| Published : Oct 09 2024, 01:47 AM IST

ಸಾರಾಂಶ

ದಸರಾ ಚಲನಚಿತ್ರೋತ್ಸವ ಅಂಗವಾಗಿ ಚಾಮರಾಜನಗರದ ವಿವಿಧ ಚಿತ್ರಮಂದಿರಗಳಲ್ಲಿ ಉಚಿತವಾಗಿ ಕನ್ನಡ ಚಲನಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಅ.೭ರಿಂದ ೯ರವರೆಗೆ ಭ್ರಮರಾಂಭ, ಬಸವೇಶ್ವರ, ಗುರುರಾಘವೇಂದ್ರ, ಸಿಂಹ ಮೂವಿ ಪ್ಯಾರಡೈಸ್, ಸಿದ್ದಾರ್ಥ ಚಲನಚಿತ್ರ ಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದಸರಾ ಚಲನಚಿತ್ರೋತ್ಸವ ಅಂಗವಾಗಿ ನಗರದ ವಿವಿಧ ಚಿತ್ರಮಂದಿರಗಳಲ್ಲಿ ಉಚಿತವಾಗಿ ಕನ್ನಡ ಚಲನಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಅ.೭ರಿಂದ ೯ರವರೆಗೆ ಭ್ರಮರಾಂಭ, ಬಸವೇಶ್ವರ, ಗುರುರಾಘವೇಂದ್ರ, ಸಿಂಹ ಮೂವಿ ಪ್ಯಾರಡೈಸ್, ಸಿದ್ದಾರ್ಥ ಚಲನಚಿತ್ರ ಮಂದಿರಗಳಲ್ಲಿ ಕನ್ನಡ ಚಲನ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಸೋಮವಾರದಂದು ಬಸವೇಶ್ವರ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಚಾಮರಾಜನಗರದ ಭಾಷಾ ಸೊಗಡಿನಲ್ಲಿ ಮೂಡಿಬಂದಿರುವ ಕೋಳಿ ಎಸ್ರು ಚಲನಚಿತ್ರವನ್ನು ಚಿತ್ರದ ನಿರ್ದೇಶಕರಾದ ಚಂಪಾಶೆಟ್ಟಿ, ನಟಿ ಅಕ್ಷತಾ ಪಾಂಡವಪುರ, ನಿರ್ಮಾಪಕರಾದ ಪ್ರಕಾಶ್ ಬಿ.ಶೆಟ್ಟಿ ವೀಕ್ಷಿಸಿದರು.

ಚಲನಚಿತ್ರ ವೀಕ್ಷಣೆ ಬಳಿಕ ಚಂಪಾಶೆಟ್ಟಿ, ಅಕ್ಷತಾ ಪಾಂಡವಪುರ, ಪ್ರಕಾಶ್.ಬಿ.ಶೆಟ್ಟಿ ಚಲನಚಿತ್ರದಲ್ಲಿ ನಟಿಸಿರುವ ಚಿತ್ರಾ ವೆಂಕಟರಾಜು, ಶಿವಶಂಕರ್.ಎಸ್ ಚೆಟ್ಟು, ದಾಕ್ಷಾಯಿಣಿ ಸೇರಿದಂತೆ ಚಿತ್ರ ತಂಡವನ್ನು ಚಿತ್ರತಂಡವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ.ರಮೇಶ್ ಅವರು ಗೌರವಿಸಿದರು. ರಾಷ್ಟ್ರಪ್ರಶಸ್ತಿ ವಿಜೇತ ಸಂಕಲನಕಾರ ಸ್ವಾಮಿ ಅಮ್ಮನಪುರ, ಹಿರಿಯ ಕಲಾವಿದರಾದ ಅಬ್ರಾಹಂ ಡಿ. ಸಿಲ್ವಾ, ಕೆ. ವೆಂಕಟರಾಜು, ಸಿ.ಎಂ. ನರಸಿಂಹಮೂರ್ತಿ, ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಂಗಳವಾರದಂದು ಬೆಳಗ್ಗೆ ಗುರುರಾಘವೇಂದ್ರ ಚಿತ್ರಮಂದಿರದಲ್ಲಿ "ಚಿರತೆ ಬಂತು ಚಿರತೆ " ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಚಾಮರಾಜನಗರ ಭಾಗದ ಮತ್ತು ಗ್ರಾಮೀಣ ಕಥಾಹಂದರವನ್ನು ಒಳಗೊಂಡ ಚಿತ್ರವನ್ನು ಜನರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರದ ನಿರ್ದೇಶಕರಾದ ಕೃಷ್ಣಮೂರ್ತಿ. ಸಿ.ಆರ್(ಬೆನಕ ಕಿಟ್ಟಿ), ನಿರ್ಮಾಪಕ ಜಗದೀಶ್ ಮಲ್ನಾಡ್, ಚಿತ್ರದ ನಟರಾದ ಕಿರಣ್ ಗಿರ್ಗಿ, ಸ್ಪೂರ್ತಿ ಸುಬ್ರಹ್ಮಣ್ಯ, ಚಂದನ ಅವರನ್ನು ಚಾಮರಾಜನಗರ ಜಿಲ್ಲಾಡಳಿತದ ಪರವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಎ. ರಮೇಶ್ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಗುರುರಾಘವೇಂದ್ರ ಚಿತ್ರಮಂದಿರದಲ್ಲಿ ಸಂಜೆ ೪ ಗಂಟೆಗೆ ಪ್ರದರ್ಶನಗೊಂಡ ಡಿಎನ್‌ಎ ಚಲನಚಿತ್ರದ ನಿರ್ದೇಶಕರಾದ ಪ್ರಕಾಶ್ ರಾಜ್ ಮೇಹು ಹಾಗೂ ನಟರಾದ ಧ್ರುವ ಅವರನ್ನು ಸನ್ಮಾನಿಸಲಾಯಿತು. ಇನ್ನಿತರ ಚಿತ್ರಮಂದಿರದಲ್ಲಿ ದಸರಾ ಚಲನಚಿತ್ರೋತ್ಸವ ಅಂಗವಾಗಿ ಚಲನಚಿತ್ರಗಳು ಪ್ರದರ್ಶನಗೊಂಡಿತು.

೯ರಂದು ಎಲ್ಲಾ ಚಿತ್ರಮಂದಿರಗಳಲ್ಲಿ ಉಚಿತ ಅವಕಾಶ

ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಿರುವ ಚಲನ ಚಿತ್ರೋತ್ಸವದಲ್ಲಿ ಅಕ್ಟೋಬರ್ ೯ರಂದು ನಗರದ ಐದು ಚಿತ್ರಮಂದಿರಗಳಲ್ಲಿ ಸಾರ್ವಜನಿಕರು ಉಚಿತವಾಗಿ ಚಲನಚಿತ್ರಗಳನ್ನು ವೀಕ್ಷಿಸಬಹುದಾಗಿದೆ. ಅಕ್ಟೋಬರ್ ೯ರಂದು ಭ್ರಮರಾಂಭ ಚಿತ್ರಮಂದಿರದಲ್ಲಿ ಬೆಳಗ್ಗೆ ೧೦ ಗಂಟೆಗೆ ಯುವರತ್ನ, ಸಂಜೆ ೪ ಗಂಟೆಗೆ ಸಹರ, ಸಿಂಹ ಚಿತ್ರಮಂದಿರದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಅನ್ನ, ಸಂಜೆ ೪ ಗಂಟೆಗೆ ಡಾ. ರಾಜ್‌ಕುಮಾರ್ ಅಭಿನಯದ ಗಂಧದಗುಡಿ, ಬಸವೇಶ್ವರ ಚಿತ್ರಮಂದಿರದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಲಾಫಿಂಗ್ ಬುದ್ದ, ಸಂಜೆ ೪ ಗಂಟೆಗೆ ಕಾಂತಾರ, ಸಿದ್ದಾರ್ಥ ಚಿತ್ರಮಂದಿರದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಧೂಪದ ಮಕ್ಕಳು, ಸಂಜೆ ೪ ಗಂಟೆಗೆ ಭಾರತದ ಪ್ರಜೆಗಳಾದ ನಾವು ಹಾಗೂ ಗುರುರಾಘವೇಂದ್ರ ಚಿತ್ರಮಂದಿರದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಒಂದು ಸರಳ ಪ್ರೇಮ ಕಥೆ, ಸಂಜೆ ೪ ಗಂಟೆಗೆ ಡಿ.ಎನ್.ಎ ಚಲನಚಿತ್ರ ಪ್ರದರ್ಶನವಾಗಲಿದೆ. ಈ ಎಲ್ಲ ಚಲನಚಿತ್ರಗಳನ್ನು ಉಚಿತವಾಗಿ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿದೆ. ಜಿಲ್ಲೆಯ ಜನತೆ ಚಲನಚಿತ್ರ ವೀಕ್ಷಣೆ ಮಾಡುವಂತೆ ಕೋರಲಾಗಿದೆ.