ಶ್ರೀಲಂಕಾದ 9ನೇ ನೂತನ ಅಧ್ಯಕ್ಷರಾಗಿ ಎಡಪಂಥೀಯ ನಾಯಕ ಅನುರ ಕುಮಾರ ದಿಸ್ಸನಾಯಕೆ ಪ್ರಮಾಣ ವಚನ

| Published : Sep 24 2024, 01:45 AM IST / Updated: Sep 24 2024, 07:07 AM IST

ಸಾರಾಂಶ

ಶ್ರೀಲಂಕಾದ 9ನೇ ಅಧ್ಯಕ್ಷರಾಗಿ ಎಡಪಂಥೀಯ ನಾಯಕ ಅನುರ ಕುಮಾರ ದಿಸ್ಸನಾಯಕೆ ಅವರು ಪ್ರಮಾಣವಚನ ಸ್ವೀಕರಿಸಿದರು. ಭ್ರಷ್ಟಾಚಾರ ನಿರ್ಮೂಲನೆ ಮತ್ತು ಆರ್ಥಿಕತೆ ಬಲವರ್ಧನೆಗೆ ಅವರು ಬದ್ಧರಾಗಿದ್ದಾರೆ.

ಕೊಲಂಬೋ: ಶ್ರೀಲಂಕಾದ 9ನೇ ಅಧ್ಯಕ್ಷರಾಗಿ ಆಯ್ಕೆ ಆದ ಎಡಪಂಥೀಯ ನಾಯಕ ಹಾಗೂ ಜನತಾ ವಿಮುಕ್ತಿ ಪೆರುಮುನ ಪಕ್ಷ ಮುಖಂಡ ಅನುರ ಕುಮಾರ ದಿಸ್ಸನಾಯಕೆ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

ಅಧ್ಯಕ್ಷೀಯ ಸಚಿವಾಲಯದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ನ್ಯಾ। ಜಯಂತ ಜಯಸೂರ್ಯ ಅವರು ದಿಸ್ಸನಾಯಕೆ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ನಂತರ ಮಾತನಾಡಿದ ಅನುರ, ‘ದೇಶದಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲಿಸಿ, ಆರ್ಥಿಕತೆಯನ್ನು ಬಲಪಡಿಸುತ್ತೇನೆ’ ಎಂದು ಭರವಸೆ ನೀಡಿದರು. ಅನುರ ಆಯ್ಕೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅಭಿನಂದನೆ ಸಲ್ಲಿಸಿದ್ದಾರೆ.

ಅಧ್ಯಕ್ಷರ ಆಯ್ಕೆಗೆ ಕಳೆದ ಶನಿವಾರ ಚುನಾವಣೆ ನಡೆದಿತ್ತು. ಈ ವೇಳೆ ಶೇ.42.31ರಷ್ಟು ಮತ ಪಡೆದ ಅನುರಾ, ಸಮಗಿ ಜನ ಬಲವೇಗಯಾ ಪಕ್ಷದ ಸಜಿತಾ ಪ್ರೇಮದಾಸ ಅವರನ್ನು ಸೋಲಿಸಿದ್ದರು.

2022ರಲ್ಲಿ ದೇಶ ಆರ್ಥಿಕವಾಗಿ ಪತನಗೊಂಡಿತ್ತು. ಅದಾದ ನಂತರ ಇದೇ ಮೊದಲ ಬಾರಿಗೆ ಚುನಾವಣೆ ನಡೆಸಲಾಗಿತ್ತು.

ಪೊಲೀಸ್‌ ಗನ್‌ ಕಸಿದ ಬದ್ಲಾಪುರ ರೇಪ್‌ ಆರೋಪಿ ಹತ್ಯೆ

ಮುಂಬೈ: ಮಹಾರಾಷ್ಟ್ರದ ಬದ್ಲಾಪುರದಲ್ಲಿ ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿ ಅಕ್ಷಯ ಶಿಂಧೆ ಪೊಲೀಸ್ ಬಂದೂಕು ಕಸಿದುಕೊಂಡು, ಪೊಲೀಸರ ಮೇಲೆ ದಾಳಿ ಮಾಡಿದ್ದಾನೆ. ಆದರೆ ಇನ್ನೊಬ್ಬ ಪೊಲೀಸ್‌ ಅಧಿಕಾರಿ ಪ್ರತಿದಾಳಿ ನಡೆಸಿದಾಗ ಆ ಗುಂಡಿಗೆ ಈತ ಬಲಿಯಾಗಿದ್ದಾನೆ.

ಸೋಮವಾರ ಸಂಜೆ ಆತನನ್ನು ತಲೋಜಾ ಜೈಲಿನಿಂದ ತನಿಖೆಗೆ ಬದ್ಲಾಪುರ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಆಗ ಪೊಲೀಸರ ಬಳಿ ಇದ್ದ ಗನ್‌ ಕಸಿದು ಅವರ ಮೇಲೆ ದಾಳಿ ಮಾಡಿದ್ದಾನೆ. ಈ ವೇಳೆ ಇನ್ನೊಬ್ಬ ಪೊಲೀಸ್‌ ಅಧಿಕಾರಿ ಈತನ ಮೇಲೆ ಪ್ರತಿದಾಳಿ ಮಾಡಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ಶಿಂಧೆ ಸಾವನ್ನಪ್ಪಿದ್ದಾನೆ.

ಈತನ ದಾಳಿಯಿಂದ ಪೊಲೀಸ್‌ ಅಧಿಕಾರಿ ಕೂಡ ಗಾಯಗೊಂಡಿದ್ದಾರೆ, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.ಶಿಂಧೆ ಶಾಲೆಯ ಅಟೆಂಡರ್ ಆಗಿದ್ದ. ಆ.17ರಂದು ಶಾಲಾ ಬಾಲಕಿ ಮೇಲೆ ಶೌಚಾಲಯದಲ್ಲೇ ರೇಪ್‌ ಮಾಡಿದ್ದ.

==

ಹೈಕಮಾಂಡ್‌ ವಿರುದ್ಧ ಕುಮಾರಿ ಸೆಲ್ಜಾ ಗರಂ: ಚು.ಪ್ರಚಾರಕ್ಕೆ ಗೈರು

ಚಂಡೀಗಢ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಹಂಚಿಕೆ ವೇಳೆ ತಮ್ಮ ಮಾತಿಗೆ ಮನ್ನಣೆ ನೀಡಿಲ್ಲ ಮತ್ತು ತಮ್ಮನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಿಲ್ಲ ಎಂದು ಬೇಸರಗೊಂಡಿರುವ ಕಾಂಗ್ರೆಸ್‌ ನಾಯಕಿ ಕುಮಾರಿ ಸೆಲ್ಜಾ, ಪ್ರಚಾರದಿಂದ ದೂರವೇ ಉಳಿದಿದ್ದಾರೆ. ಅದರ ಬೆನ್ನಲ್ಲೇ ಪಕ್ಷ ಸೇರುವಂತೆ ಅವರಿಗೆ ಬಿಜೆಪಿ ನಾಯಕರು ಆಹ್ವಾನ ಕೂಡಾ ನೀಡಿದ್ದಾರೆ. ಮತ್ತೊಂದೆಡೆ ದಲಿತ ನಾಯಕಿಯನ್ನು ಕಾಂಗ್ರೆಸ್‌ ಅವಮಾನಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ದೂರಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಸೇರ್ಪಡೆ ವದಂತಿ ತಳ್ಳಿಹಾಕಿರುವ ಸೆಲ್ಜಾ, ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾವೆಲ್ಲಾ ಶ್ರಮಿಸುತ್ತಿದ್ದೇವೆ. ನಾವು ಕಾಂಗ್ರೆಸ್‌ ಬಿಡುವ, ಬಿಜೆಪಿ ಸೇರುವ ಯಾವುದೇ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

==

ಮಲ್ಲಿಕಾರ್ಜುನ ಖರ್ಗೆ ಅಸ್ವಸ್ಥ, ಹರ್ಯಾಣ ಪ್ರಚಾರಕ್ಕೆ ಗೈರು

ಚಂಡೀಗಢ: ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನಲಾಗಿದ್ದು, ಅವರು ಹರ್ಯಾಣ ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯದಿಂದ ದೂರ ಉಳಿದಿದ್ದಾರೆ.ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಹರ್ಯಾಣ ಕಾಂಗ್ರೆಸ್‌ ನಾಯರು,‘ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವೈದ್ಯರು ಪ್ರಯಾಣ ಮಾಡದಂತೆ ಹಾಗೂ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದ್ದಾರೆ. ಈ ಕಾರಣ ಅವರು ಸೋಮವಾರ ಯಾವುದೇ ಚುನಾವಣೆ ರ್‍ಯಾಲಿಯಲ್ಲಿ ಭಾಗವಹಿಸುವುದಿಲ್ಲ’ ಎಂದಿದ್ದಾರೆ.

ಅ.5ರಂದು ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.