ಭಾರತೀಯ ಸೇನೆಯ ಆಪರೇಷನ್‌ ಸರ್ವಶಕ್ತಿಗೆ ರೆಡಿ

| Published : Jan 14 2024, 01:34 AM IST / Updated: Jan 14 2024, 12:41 PM IST

ಸಾರಾಂಶ

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ತಡೆಯುವ ಪ್ರಮುಖ ಹೆಜ್ಜೆಯಾಗಿ, ಭಾರತೀಯ ಸೇನೆಯು ‘ಆಪರೇಷನ್ ಸರ್ವಶಕ್ತಿ’ ಎಂಬ ವಿಶೇಷ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಿದೆ.

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ತಡೆಯುವ ಪ್ರಮುಖ ಹೆಜ್ಜೆಯಾಗಿ, ಭಾರತೀಯ ಸೇನೆಯು ‘ಆಪರೇಷನ್ ಸರ್ವಶಕ್ತಿ’ ಎಂಬ ವಿಶೇಷ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಿದೆ.

ಇತ್ತೀಚೆಗೆ ಗಡಿಯ ಪೀರ್‌ ಪಂಜಾಲ್‌ ಎಂಬಲ್ಲಿ ಒಳನುಸುಳುವಿಕ ಯತ್ನ ಹೆಚ್ಚಿವೆ. ಪೂಂಛ್‌-ರಜೌರಿ ವಲಯದಲ್ಲಿ ಸೇನಾಪಡೆಗಳ ಮೇಲೆ ದಾಳಿಗಳೂ ಹೆಚ್ಚಾಗಿವೆ. ಇತ್ತೀಚೆಗೆ ವಿವಿಧ ಉಗ್ರ ದಾಳಿಗಳಲ್ಲಿ ಸುಮಾರು 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. 

ಈ ಹಿನ್ನೆಲೆಯಲ್ಲಿ ಒಳನುಸುಳುವಿಕೆ ತಡೆಗೆ ಹಾಗೂ ಈಗಾಗಲೇ ನುಗ್ಗಿ ದಾಳಿ ನಡೆಸುತ್ತಿರುವ ಉಗ್ರರ ವಿರುದ್ಧ ‘ಆಪರೇಷನ್‌ ಸರ್ವಶಕ್ತಿ’ ಆರಂಭಕ್ಕೆ ತೀರ್ಮಾನಿಸಲಾಗಿದೆ.ಸೇನೆಯ ಚಿನಾರ್‌ ಕೋರ್‌, ವೈಟ್‌ ನೈಟ್‌ ಕೋರ್‌ ಪಡೆಗಳು, ಜಮ್ಮ-ಕಾಶ್ಮೀರ ಪೊಲೀಸ್, ಸಿಆರ್‌ಪಿಎಫ್, ವಿಶೇಷ ಕಾರ್ಯಾಚರಣೆ ಪಡೆ ಮತ್ತು ಗುಪ್ತಚರ ಸಂಸ್ಥೆಗಳು ಪರಸ್ಪರ ಸಮನ್ವಯ ಸಾಧಿಸಿ ಉಗ್ರರ ಮೇಲೆ ಮುಗಿಬೀಳುವುದೇ ‘ಆಪರೇಷನ್‌ ಸರ್ವಶಕ್ತಿ’. 

ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ರಕ್ಷಣಾ ಪಡೆ ಮುಖ್ಯಸ್ಥರ ಜತೆ ಸಭೆ ನಡೆಸಿ ಈ ಕಾರ್ಯಾಚರಣೆಗೆ ಸೂಚಿಸಿದ್ದಾರೆ.

ಈ ಕಾರ್ಯಾಚರಣೆಗಳು 2003ರಲ್ಲಿ ಪೀರ್ ಪಂಜಾಲ್‌ನಲ್ಲಿ ನಡೆದ ‘ಆಪರೇಷನ್ ಸರ್ಪವಿನಾಶ್’ ಮಾದರಿಯಲ್ಲಿರುತ್ತವೆ. ಆಗ ನಡೆಸಲಾದ ಕಾರ್ಯಾಚರಣೆ ಬಳಿಕ ಭಯೋತ್ಪಾದಕ ಚಟುವಟಿಕೆಗಳು ಬಹುತೇಕ ಕಣ್ಮರೆಯಾಗಿದ್ದವು. ಆದರೆ ಪಾಕ್ ಚಿತಾವಣೆ ಬಳಿಕ ಹಲವು ವರ್ಷ ಬಳಿಕ ಮತ್ತೆ ಆರಂಭವಾಗಿದ್ದವು.