ಬಂಧಿತ ವ್ಯಕ್ತಿ ಹುದ್ದೆ ತ್ಯಜಿಸಬೇಕು ಅಂತ ಕಾನೂನು ಹೇಳಲ್ಲ: ತಜ್ಞರು

| Published : Mar 23 2024, 01:01 AM IST / Updated: Mar 23 2024, 12:50 PM IST

jail prisoner
ಬಂಧಿತ ವ್ಯಕ್ತಿ ಹುದ್ದೆ ತ್ಯಜಿಸಬೇಕು ಅಂತ ಕಾನೂನು ಹೇಳಲ್ಲ: ತಜ್ಞರು
Share this Article
  • FB
  • TW
  • Linkdin
  • Email

ಸಾರಾಂಶ

ಕೇಜ್ರಿವಾಲ್‌ ಸಿಎಂ ಹುದ್ದೆಯಲ್ಲಿರಲು ಕಾನೂನು ಸಮಸ್ಯೆ ಇಲ್ಲ. ಅವರು ದೋಷಿ ಅಂತ ಸಾಬೀತಾದರೆ ಮಾತ್ರ ಅನರ್ಹರಾಗುತ್ತಾರೆ ಎಂದು ತಜ್ಞರು ತಿಳಿಸಿದ್ದಾರೆ.

ಪಿಟಿಐ ನವದೆಹಲಿ

ಅಬಕಾರಿ ಹಗರಣ ಸಂಬಂಧ ಬಂಧನಕ್ಕೆ ಒಳಗಾಗಿ ಒಂದು ದಿನ ಕಳೆದರೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿಲ್ಲ. 

ಮತ್ತೊಂದೆಡೆ, ಅವರು ರಾಜೀನಾಮೆ ನೀಡುವುದಿಲ್ಲ, ಅಗತ್ಯ ಬಿದ್ದರೆ ಜೈಲಿನಿಂದಲೇ ಆಡಳಿತ ನಡೆಸುತ್ತಾರೆ ಎಂದು ಅವರ ಪಕ್ಷ ಆಪ್‌ ಹೇಳುತ್ತಿದೆ.

ಹಾಗಾದರೆ ಬಂಧನಕ್ಕೊಳಗಾದ ಜನಪ್ರತಿನಿಧಿಗಳು ರಾಜೀನಾಮೆ ನೀಡಬೇಕಿಲ್ಲವೇ ಎಂದು ಕಾನೂನು ತಜ್ಞರನ್ನು ಪ್ರಶ್ನಿಸಿದಾಗ, ‘ಇಲ್ಲ’ ಎಂದು ಅವರು ಹೇಳುತ್ತಾರೆ.

ಬಂಧಿತರಾದ ಬಳಿಕ ಯಾವುದೇ ವ್ಯಕ್ತಿ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬಾರದು ಎಂದು ಕಾನೂನು ಹೇಳುವುದಿಲ್ಲ ಎಂದು ಹಿರಿಯ ನ್ಯಾಯವಾದಿ ಗೋಪಾಲ್‌ ಶಂಕರನಾರಾಯಣ ಅವರು ತಿಳಿಸಿದ್ದಾರೆ. 

ಕಾನೂನಿನಲ್ಲಿ ಸಮಸ್ಯೆ ಇಲ್ಲ ನಿಜ, ಆದರೆ ಆಡಳಿತಾತ್ಮಕವಾಗಿ ಅದು ಅಸಾಧ್ಯವಾದ ಕೆಲಸ ಎಂದು ಮತ್ತೊಬ್ಬ ಹಿರಿಯ ವಕೀಲ ವಿಕಾಸ್‌ ಸಿಂಗ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ, ಯಾವುದೇ ಶಾಸಕ ದೋಷಿ ಎಂದು ಸಾಬೀತಾದರೆ ಅನರ್ಹಗೊಳ್ಳುತ್ತಾರೆ. ತನ್ಮೂಲಕ ಮಂತ್ರಿ ಸ್ಥಾನದಿಂದ ಪದಚ್ಯುತಗೊಳ್ಳುತ್ತಾರೆ ಎಂದು ಇಬ್ಬರೂ ತಿಳಿಸಿದ್ದಾರೆ.

ಜೈಲಿನಿಂದ ಅಸಾಧ್ಯ: ಈ ನಡುವೆ, ಜೈಲಿನಲ್ಲಿ ವಾರಕ್ಕೆ 2 ಸಲ ಮಾತ್ರ ಇತರರನ್ನು ಭೇಟಿ ಮಾಡಲು ಅವಕಾಶವಿದೆ. ಅದಕ್ಕೆ ನಿರ್ದಿಷ್ಟ ಸಮಯದ ಮಿತಿ ಇರುತ್ತದೆ. ಸ್ನೇಹಿತರು, ಆಪ್ತೇಷ್ಟರು, ಕುಟುಂಬಸ್ಥರು- ಹೀಗೆ ನಿರ್ದಿಷ್ಟ ಜನರಿಗೆ ಮಾತ್ರ ಭೇಟಿಗೆ ಅವಕಾಶ ಇರುತ್ತದೆ. 

ಇಂಥದ್ದರಲ್ಲಿ ಜೈಲಿನಲ್ಲಿ ದೈನಂದಿನ ಕರ್ತವ್ಯ ನಿರ್ವಹಣೆ ಕೇಜ್ರಿವಾಲ್‌ಗೆ ಅಸಾಧ್ಯ ಎಂದು ಮೂಲಗಳು ಹೇಳಿವೆ. ರಾಷ್ಟ್ರಪತಿ, ಗೌರ್ನರ್‌ಗಷ್ಟೇ ಬಂಧನದಿಂದ ವಿನಾಯಿತಿ; ಪ್ರಧಾನಿ, ಸಿಎಂಗಳಿಗೆ ಇಲ್ಲ.

ಸಂವಿಧಾನದ 361ನೇ ಪರಿಚ್ಛೇದದಡಿ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಗೆ ಬಂಧನ ಮತ್ತು ಕೋರ್ಟ್‌ಗಳ ವಿಚಾರಣೆಯಿಂದ ವಿನಾಯಿತಿ ಇದೆ.

ಆದರೆ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಅಂತಹ ಯಾವುದೇ ವಿನಾಯಿತಿ ಇಲ್ಲ ಎಂದು ತಜ್ಞರು ತಿಳಿಸಿದ್ದಾರೆ.ಗೃಹಬಂಧನಕ್ಕೆ ಅವಕಾಶ ಸಿಕ್ಕರೆ ಸಿಎಂ ಆಗಿ ಕೆಲಸ ಸಾಧ್ಯ

ಜೈಲಿನಿಂದ ಸಿಎಂ ಆಗಿ ಕೆಲಸ ಮಾಡಲು ಕೇಜ್ರಿವಾಲ್‌ಗೆ ಕೆಲವು ತೊಂದರೆಗಳಿವೆ. ಆದರೆ ಅವರು ಗೃಹಬಂಧನಕ್ಕೆ ಒಳಗಾದರೆ ಸಿಎಂ ಆಗಿ ಅನಿರ್ಬಂಧಿತವಾಗಿ ಕೆಲಸ ಮಾಡಬಹುದು ಎಂದು ಕೆಲವು ತಜ್ಞರು ಹೇಳಿದ್ದಾರೆ.

ಆದರೆ ಜೈಲಿನ ಬದಲು ಸಿಎಂ ಗೃಹಬಂಧನದಲ್ಲಿ ಇರಬಹುದು ಎಂದು ಅವಕಾಶ ನೀಡುವ ಅಧಿಕಾರ ಕೇವಲ ದಿಲ್ಲಿ ಉಪರಾಜ್ಯಪಾಲರಿಗೆ ಮಾತ್ರ ಇದೆ.

ದಿಲ್ಲಿ ಉಪರಾಜ್ಯಪಾಲಗೂ-ಕೇಜ್ರಿವಾಲ್‌ಗೂ ಎಣ್ಣೆ ಸೀಗೆಕಾಯಿ ಸಂಬಂಧವಿದೆ. ಹೀಗಾಗಿ ಉಪರಾಜ್ಯಪಾಲರು ಕೇಜ್ರಿವಾಲ್‌ಗೆ ಗೃಹಬಂಧನಕ್ಕೆ ಅವಕಾಶ ನೀಡುವುದು ಕಷ್ಟಸಾಧ್ಯ ಎಂದು ಅವರು ನುಡಿದಿದ್ದಾರೆ.