ಸಾರಾಂಶ
ಪಿಟಿಐ ನವದೆಹಲಿ
‘ನಾನು ಜೈಲಿಗೆ ಹೋದರೂ ಪರವಾಗಿಲ್ಲ. ಅಭಿವೃದ್ಧಿ ಕೆಲಸಗಳು ದಿಲ್ಲಿಯಲ್ಲಿ ನಿರಂತರವಾಗಿ ಮುಂದುವರಿಯಲಿವೆ’ ಎಂದು ಆಪ್ ನೇತಾರ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ದಿಲ್ಲಿ ಅಬಕಾರಿ ಹಗರಣದಲ್ಲಿ 5 ಸಮನ್ಸ್ ಗಳಿಗೆ ಗೈರು ಹಾಜರಾಗಿ ಕೇಜ್ರಿವಾಲ್ ಅವರು ತನಿಖೆಗೆ ಅಸಹಕಾರ ತೋರುತ್ತಿದ್ದಾರೆ ಎಂದು ಅರೋಪಿಸಿ ಜಾರಿ ನಿರ್ದೇಶನಾಲಯ (ಇ.ಡಿ.), ಕೇಜ್ರಿವಾಲ್ ವಿರುದ್ಧ ಕೋರ್ಟ್ ಮೊರೆ ಹೋದ ಬೆನ್ನಲ್ಲೇ ಅವರ ಈ ಹೇಳಿಕೆ ಬಂದಿದೆ.
ದಿಲ್ಲಿಯಲ್ಲಿ ಭಾನುವಾರ 2 ಶಾಲೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಕೇಜ್ರಿವಾಲ್, ‘ಮನೀಷ್ ಸಿಸೋಡಿಯಾ ಅವರು ಶಾಲೆಗಳನ್ನು ನಿರ್ಮಿಸಿದ್ದರಿಂದ ಅವರನ್ನು ಜೈಲಿಗೆ ತಳ್ಳಲಾಯಿತು.
ಮೊಹಲ್ಲಾ ಚಿಕಿತ್ಸಾಲಯಗಳನ್ನು ನಿರ್ಮಿಸಿದ ಕಾರಣಕ್ಕಾಗಿ ಸತ್ಯೇಂದ್ರ ಜೈನ್ ಅವರನ್ನು ಜೈಲಿಗೆ ಕಳುಹಿಸಲಾಯಿತು. ಇ.ಡಿ. ಮತ್ತು ಸಿಬಿಐನಂತಹ ಎಲ್ಲಾ ಕೇಂದ್ರೀಯ ಸಂಸ್ಥೆಗಳನ್ನು ಆಪ್ ನಾಯಕರ ಮೇಲೆ ಛೂಬಿಡಲಾಗಿದೆ ಎಂದು ಕಿಡಿಕಾರಿದರು.
‘ಆದರೆ ನೀವು ಕೇಜ್ರಿವಾಲ್ ಅವರನ್ನು ಜೈಲಿಗೆ ಹಾಕಿದರೂ, ಶಾಲೆಗಳು ಮತ್ತು ಮೊಹಲ್ಲಾ ಕ್ಲಿನಿಕ್‌ಗಳನ್ನು ನಿರ್ಮಿಸುವ ಮತ್ತು ದೆಹಲಿಯ ಜನರಿಗೆ ಉಚಿತ ಚಿಕಿತ್ಸೆ ನೀಡುವ ಕೆಲಸಗಳು ನಿಲ್ಲುವುದಿಲ್ಲ.
ನಾವು ಅವರ ಪಕ್ಷಕ್ಕೆ ಸೇರಬೇಕೆಂದು ಬಿಜೆಪಿ ಬಯಸುತ್ತದೆ. ಆದರೆ ನಾವು ತಲೆಬಾಗುವುದಿಲ್ಲ’ ಎಂದು ಸಿಡಿಮಿಡಿಗೊಂಡರು.