ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಹರ್ಯಾಣ ಸರ್ಕಾರದಿಂದಲೇ ಕೇಸು : ಕೋರ್ಟ್‌ನಿಂದ ಸಮನ್ಸ್‌

| N/A | Published : Jan 30 2025, 12:31 AM IST / Updated: Jan 30 2025, 05:37 AM IST

ಸಾರಾಂಶ

ಹರ್ಯಾಣ ಬಿಜೆಪಿಗರು ಯಮುನಾ ನದಿ ನೀರಿಗೆ ವಿಷ ಬೆರೆಸಿದ್ದಾರೆ ಎಂದು ಆರೋಪಿಸಿದ ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರ ವಿರುದ್ಧ ಹರ್ಯಾಣ ಸರ್ಕಾರ ಸೋನಿಪತ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. 

ನವದೆಹಲಿ: ಹರ್ಯಾಣ ಬಿಜೆಪಿಗರು ಯಮುನಾ ನದಿ ನೀರಿಗೆ ವಿಷ ಬೆರೆಸಿದ್ದಾರೆ ಎಂದು ಆರೋಪಿಸಿದ ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರ ವಿರುದ್ಧ ಹರ್ಯಾಣ ಸರ್ಕಾರ ಸೋನಿಪತ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. ಅದರ ಬೆನ್ನಲ್ಲೇ ಈ ಸಂಬಂಧ ಫೆ.17ರೊಳಗೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್‌ ಸಮನ್ಸ್‌ ಜಾರಿಗೊಳಿಸಿದೆ.

‘ಹರ್ಯಾಣ ಸರ್ಕಾರ ಯಮುನಾ ನದಿಗೆ ವಿಷ ಬೆರೆಸಿದೆ ಎಂದು ಕೇಜ್ರಿವಾಲ್‌ ಅವರು ಉದ್ದೇಶಪೂರ್ವಕವಾಗಿ ಸುಳ್ಳುಸುದ್ದಿ ಹಬ್ಬಿಸಿ ಆ ಪ್ರದೇಶದ ಜನರಲ್ಲಿ ಆತಂಕ ಸೃಷ್ಟಿಸಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಪರಿಗಣಿಸಿದ ಕೋರ್ಟ್‌, ‘ನಿಗದಿತ ದಿನಾಂಕದೊಳಗೆ ವಿಚಾರಣೆಗೆ ಹಾಜರಾಗದಿದ್ದಲ್ಲಿ, ಕೇಜ್ರಿವಾಲ್‌ಗೆ ಈ ಬಗ್ಗೆ ಹೇಳಲು ಏನೂ ಇಲ್ಲ ಎಂದುಕೊಂಡು ಕಾನೂನು ಪ್ರಕ್ರಿಯೆ ಮುಂದುವರೆಸಲಾಗುವುದು’ ಎಂದು ಹೇಳಿದೆ.

ಯಮುನಾ ನೀರು ಕುಡಿದು ಕೇಜ್ರಿಗೆ ಸಿಎಂ ಸೈನಿ ಸವಾಲು

ನವದೆಹಲಿ: ಯಮುನಾ ನದಿ ನೀರಿಗೆ ವಿಷ ಬೆರೆಸಲಾಗಿದೆ ಎಂದು ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಆರೋಪಿಸಿದ ಬೆನ್ನಲ್ಲೇ, ಹರ್ಯಾಣ ಸಿಎಂ ನಯಾಬ್‌ ಸಿಂಗ್‌ ಅವರು ಯಮುನಾ ತಟಕ್ಕೆ ತೆರಳಿ ಆ ನೀರನ್ನು ಸೇವಿಸಿ ತಿರುಗೇಟು ನೀಡಿದ್ದಾರೆ. ಈ ವೇಳೆ ಮಾತನಾಡಿದ ಸೈನಿ, ‘ಕೇಜ್ರಿವಾಲ್‌ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಜನ ಮನದಲ್ಲಿ ಭಯದ ಸೃಷ್ಟಿಸುತ್ತಿದ್ದಾರೆ. ಹರ್ಯಾಣದ ಬಿಜೆಪಿ ಸರ್ಕಾರ ನದಿಗೆ ವಿಷ ಸೇರಿಸಿದೆ ಎನ್ನುವ ಮೂಲಕ ಸಾಮೂಹಿಕ ನರಮೇಧದ ಮಾತಾಡಿದ್ದಾರೆ. ಇಂದು ನಾನು ಯಮುನಾ ನದಿಯ ದಡಕ್ಕೆ ಬಂದು ಅದೇ ನೀರನ್ನು ಸೇವಿಸಿದೆ. ಜಲಸಂಪನ್ಮೂಲ ಅಧಿಕಾರಿಗಳು ನೀರಿನ ಮಾದರಿ ಪರೀಕ್ಷಿಸಿದ್ದು, ವಿಷಕಾರಿ ಅಂಶ ಪತ್ತೆಯಾಗಿಲ್ಲ’ ಎಂದರು.

ಹರ್ಯಾಣದಿಂದ ದೆಹಲಿಗೆ ಬರುವ ನೀರು ವಿಷಕಾರಿ: ಆಯೋಗಕ್ಕೆ ಕೇಜ್ರಿ ಉತ್ತರ

ನವದೆಹಲಿ: ಹರ್ಯಾಣದಿಂದ ದೆಹಲಿಗೆ ಬರುವ ಯಮುನಾ ನದಿ ನೀರಿಗೆ ಬಿಜೆಪಿ ವಿಷ ಬೆರೆಸುತ್ತಿದೆ ಎಂಬ ಹೇಳಿಕೆ ಸಂಬಂಧ ಚುನಾವಣಾ ಆಯೋಗ ನೀಡಿದ್ದ ನೋಟಿಸ್‌ಗೆ ಪ್ರತಿಕ್ರಿಯಿಸಿದ ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌, ‘ಆ ನೀರು ಅತೀ ಕಲುಷಿತ ಹಾಗೂ ಆರೋಗ್ಯಕ್ಕೆ ವಿಪರೀತ ವಿಷಕಾರಿಯಾಗಿದೆ’ ಎಂದು ಹೇಳಿದ್ದಾರೆ.‘ನಗರದಲ್ಲಿ ಕುಡಿಯುವ ನೀರಿನ ತುರ್ತು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಉಂಟಾಗಿರುವ ಕಾರಣ ನನ್ನ ಸಾರ್ವಜನಿಕ ಕರ್ತವ್ಯದ ಭಾಗವಾಗಿ ಹರ್ಯಾಣದಿಂದ ಬರುವ ನೀರು ವಿಷಕಾರಿಯಾಗಿದೆ ಎಂದು ತಿಳಿಸಿದೆ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಕೇಜ್ರಿವಾಲ್‌ ಹೇಳಿಕೆ ಕುರಿತು ಬಿಜೆಪಿ ನೀಡಿದ ದೂರಿನನ್ವಯ ಚುನಾವಣಾ ಆಯೋಗ ನೋಟಿಸ್‌ ನೀಡಿತ್ತು.

ದೆಹಲಿ ಪ್ರವೇಶದ ಬಳಿಕವೇ ಯಮುನಾ ಕಲುಷಿತ: ವರದಿ

ನವದೆಹಲಿ: ಹರ್ಯಾಣದಿಂದ ದೆಹಲಿಗೆ ಹರಿಯುವ ಯಮುನಾ ನದಿಗೆ ವಿಷ ಬೆರೆಸಲಾದ ಬಗ್ಗೆ ಆಪ್‌ ಹಾಗೂ ಬಿಜೆಪಿ ನಡುವೆ ವಾಕ್ಸಮರ ನಡೆಯುತ್ತಿರುವ ಹೊತ್ತಿನಲ್ಲೇ, ಯಮುನಾ ನದಿಯು ದೆಹಲಿ ಪ್ರವೇಶಿಸಿದ ಬಳಿಕವೇ ಅಧಿಕ ಕಲುಷಿತವಾಗುತ್ತಿದೆ ಎಂದು ವರದಿಯೊಂದರಿಂದ ತಿಳಿದುಬಂದಿದೆ.ಇದರ ಪ್ರಕಾರ, ಯಮುನಾ ನದಿ ಪಲ್ಲಾದಿಂದ ದೆಹಲಿ ಪ್ರವೇಶಿಸಿದ ಬಳಿಕ ಅದರ ನೀರಿನಲ್ಲಿ ಇರಬೇಕಾದ ಆಮ್ಲಜನಕದ ಮಟ್ಟ ಹಾಗೂ ಅಮೋನಿಯಾ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗುತ್ತಿದೆ. ಪ್ರತಿ ಲೀಟರ್‌ ನೀರಿನಲ್ಲಿ 2 ಮಿ.ಗ್ರಾಂ. ಇರುತ್ತಿದ್ದ ಆಮ್ಲಜನಕವು ದೆಹಲಿಯಿಂದ ನಿರ್ಗಮಿಸುವಾಗ ಪ್ರತಿ ಲೀಟರ್‌ಗೆ 85 ಮಿ.ಗ್ರಾಂ. ಆಗಿರುತ್ತದೆ. ಪ್ರತಿ ಲೀಟರ್‌ಗೆ 5.5 ಮಿ.ಗ್ರಾಂ. ಇದ್ದ ಅಮೋನಿಯಾ, 56.1 ಮಿ.ಗ್ರಾಂ. ಆಗುತ್ತದೆ. ಇದರಿಂದ, ನದಿಯ ಸ್ವಚ್ಛತೆಯನ್ನು ಕಾಪಾಡುವಲ್ಲಿ ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಪ್‌ನ ಅಸಮರ್ಥತೆಯನ್ನು ತೋರಿಸುತ್ತದೆ ಎನ್ನಲಾಗಿದೆ.