ಸಾರಾಂಶ
ನವದೆಹಲಿ: ಹೈದರಾಬಾದ್ ಕ್ಷೇತ್ರದಿಂದ ಸಂಸದ ಹಾಗೂ ಎಐಎಂಐಎಂ ಪಕ್ಷದ ಸ್ಥಾಪಕ ಅಸಾದುದ್ದೀನ್ ಒವೈಸಿ ಸಂಸತ್ತಿನಲ್ಲಿ ಸಂಸದರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ’ಜೈ ಪ್ಯಾಲೆಸ್ತೀನ್’ ಎಂಬ ಘೋಷಣೆ ಕೂಗಿರುವುದು ವಿವಾದಕ್ಕೆ ಕಾರಣವಾಗಿದೆ.
ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪಿಸಿದ್ದಾರೆ ಹಾಗೂ ಸ್ಪೀಕರ್ ಜತೆ ಈ ಬಗ್ಗೆ ಚರ್ಚಿಸುವುದಾಗಿ ಸಂಸದೀಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.ಪ್ರಮಾಣವಚನ ಸ್ವೀಕಾರಕ್ಕೆ ಒವೈಸಿ ಹೆಸರನ್ನು ಕರೆದ ಕ್ಷಣ ಆಡಳಿತ ಪಕ್ಷದ ಕೆಲ ಸಂಸದರು ಜೈಶ್ರೀರಾಂ ಮತ್ತು ಭಾರತ್ ಮಾತಾ ಕಿ ಜೈ ಘೋಷಣೆಯನ್ನು ಕೂಗಿದರು. ಬಳಿಕ ಪ್ರಮಾಣ ಸ್ವೀಕರಿಸಿದ ಅಸಾದುದ್ದೀನ್, ಕೊನೆಯಲ್ಲಿ ‘ಜೈ ಭೀಮ್, ಜೈ ಎಂಐಎಂ, ಜೈ ಪ್ಯಾಲೆಸ್ತೀನ್, ಜೈ ತೆಲಂಗಾಣ, ಅಲ್ಲಾಹು ಅಕ್ಬರ್’ ಎಂದು ಕೂಗಿದರು. ಇದು ವಿವಾದಕ್ಕೆ ಕಾರಣವಾಯಿತು. ಸಂಸತ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದಾಗ ಆ ವಾಕ್ಯವನ್ನು ಕಡತದಿಂದ ತೆಗೆಯುವುದಾಗಿ ಸ್ಪೀಕರ್ ಪ್ರಕಟಿಸಿದರು.
ಒವೈಸಿ ಸಮರ್ಥನೆ:ಬಳಿಕ ಸಂಸತ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಕ್ರಮ ಸಮರ್ಥಿಸಿಕೊಂಡಿರುವ ಒವೈಸಿ ‘ಇತರರೂ ಸಹ ತಮಗೆ ತೋಚಿದ ಘೋಷಣೆಗಳನ್ನು ಕೂಗಿದ್ದಾರೆ. ನಾನು ದಮನಿತರ ಪರವಾಗಿ ದನಿ ಎತ್ತಿರುವೆ. ಅದರಲ್ಲಿ ತಪ್ಪೇನು? ಮಹಾತ್ಮಾ ಗಾಂಧಿ ಪ್ಯಾಲೆಸ್ತೀನ್ ಬಗ್ಗೆ ಏನು ಹೇಳಿದ್ದರು ನೋಡಿ.. ಅವರು ದಮನಿತರು’ ಎಂದರು.