ಸಾರಾಂಶ
ನವದೆಹಲಿ: ಆಫ್ರಿಕನ್ ಆನೆಗಳ ರೀತಿ ಏಷ್ಯನ್ ಆನೆಗಳೂ ತಮ್ಮ ಸತ್ತ ಮರಿಗಳನ್ನು ಅತ್ಯಂತ ಗೌರವಯುತವಾಗಿ ಹೂಳುವ ಮೂಲಕ ಅಂತ್ಯ ಸಂಸ್ಕಾರ ಮಾಡುತ್ತವೆ ಎಂಬ ವಿಷಯ ಭಾರತೀಯ ಅರಣ್ಯ ಸೇವೆ ಅಧಿಕಾರಿಯೊಬ್ಬರು ವನ್ಯಜೀವಿ ಸಂಶೋಧಕರ ಜೊತೆ ನಡೆಸಿದ ಜಂಟಿ ಅಧ್ಯಯನದಲ್ಲಿ ಕಂಡುಬಂದಿದೆ.
ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್ ಮತ್ತು ವನ್ಯಜೀವಿ ಸಂಶೋಧಕ ಆಕಾಶ್‌ದೀಪ್ ರಾಯ್ ಅವರ ಸಂಶೋಧನೆಯ ಅಂಶಗಳನ್ನು ‘ಥ್ರೆಟನ್ಡ್ ಟೆಕ್ಸಾ’ ಎಂಬ ಜರ್ನಲ್ ಪ್ರಕಟಿಸಿದೆ.
ವರದಿ ಅನ್ವಯ ‘ಆನೆಗಳು ಪ್ರಮುಖವಾಗಿ ಟೀ ಎಸ್ಟೇಟ್‌ಗಳನ್ನು ತಮ್ಮ ಕಾರಿಡಾರ್ ಮಾಡಿಕೊಂಡಿರುತ್ತವೆ. ನೀರಿಲ್ಲದ ಟೀ ಎಸ್ಟೇಟ್ ಪ್ರದೇಶದಲ್ಲಿ ಆನೆಗಳು ತಮ್ಮ ಮರಿಗಳನ್ನು ಹೂಳಲು ಇಚ್ಛೆ ಪಡುತ್ತವೆ.
ಮರಿಯಾನೆಗಳು ಸತ್ತ ಕಾರಣ ಭಿನ್ನವಾಗಿದ್ದರೂ ಹೂಳುವ ಪದ್ಧತಿಯಲ್ಲಿ ಬದಲಾವಣೆ ಮಾಡಲು ಹಿರಿಯ ಆನೆಗಳು ಬಯಸುವುದಿಲ್ಲ ಎಂದು ವರದಿ ಉಲ್ಲೇಖಿಸಿದೆ.
ಹೇಗೆ ಅಂತ್ಯಸಂಸ್ಕಾರ?
ಸತ್ತ ಮರಿಗಳನ್ನು ಆನೆಗಳು ತಮ್ಮ ಸೊಂಡಿಲಿನಲ್ಲಿ ಜನವಸತಿ ಇಲ್ಲದ ಪ್ರದೇಶಕ್ಕೆ ಕೊಂಡೊಯ್ಯುತ್ತವೆ. ಪ್ರಮುಖವಾಗಿ ಅವುಗಳು ತಮ್ಮ ಮರಿಯಾನೆಗಳನ್ನು ಹೂಳುವಾಗ ಕಾಲು ಮೇಲೆ ಬರುವಂತೆ ಹೂಳಿ ಮಣ್ಣು ಮುಚ್ಚುತ್ತವೆ. ಬಳಿಕ ಹೂಳಿದ ಜಾಗದಲ್ಲಿ ಆನೆಗಳು ಓಡಾಡುವುದಿಲ್ಲ ಎಂಬುದಾಗಿ ವರದಿ ಉಲ್ಲೇಖಿಸಿದೆ.
ಏಷ್ಯನ್ ಆನೆಗಳು ತಮ್ಮ ಸತ್ತ ಮರಿಗಳನ್ನು ಹೂಳುತ್ತಿರುವ ಐದು ಉದಾಹರಣೆಗಳನ್ನು ಉಲ್ಲೇಖಿಸಿ ಅವುಗಳ ಪ್ರಕ್ರಿಯೆಯನ್ನು ವಿವರಿಸಿದ್ದಾರೆ. ತಮ್ಮ ಸಂಶೋಧನೆಯಲ್ಲಿ ಪ್ರಮುಖವಾಗಿ ಉತ್ತರ ಬಂಗಾಳದ ಹಿಮಾಲಯ ತಪ್ಪಲಿನಲ್ಲಿ ನಡೆದಿರುವ ಜೀವಂತ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಿ ವರದಿ ಮಾಡಿದ್ದಾರೆ.