ಸಾರಾಂಶ
ಚಂಡೀಗಢ: ‘ರೈತ ಪ್ರತಿಭಟನೆಗಳ ವೇಳೆ ಅತ್ಯಾಚಾರಗಳು ನಡೆದಿದ್ದವು’ ಎಂಬ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಾಣಾವತ್ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ಅಕಾಲಿ ದಳ (ಅಮೃತಸರ) ಮುಖಂಡ ಮಾಜಿ ಸಂಸದ ಸಿಮ್ರನ್‌ಜಿತ್ ಸಿಂಗ್ ಮಾನ್ ವಿವಾದಿತ ಹೇಳಿಕೆ ನೀಡಿದ್ದಾರೆ. ‘ಕಂಗನಾ ಅತ್ಯಾಚಾರ ವಿಷಯದಲ್ಲಿ ಅನುಭವಿ’ ಎಂಬುದೇ ಆ ವಿವಾದಿತ ಹೇಳಿಕೆ
‘3 ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುವ ವೇಳೆ ಹೆಣಗಳು ಬಿದ್ದಿದ್ದವು ಹಾಗೂ ಅತ್ಯಾಚಾರ ನಡೆದಿದ್ದವು’ ಎಂದು ಇತ್ತೀಚೆಗೆ ಟೀವಿ ಸಂದರ್ಶನದಲ್ಲಿ ಕಂಗನಾ ಹೇಳಿದ್ದರು. ಈ ಹೇಳಿಕೆ ಬಗ್ಗೆ ಕಂಗನಾಗೆ ಬಿಜೆಪಿ ಖುದ್ದು ಛೀಮಾರಿ ಹಾಕಿತ್ತು. ಈ ಬಗ್ಗೆ ಗುರುವಾರ ಪತ್ರಕರ್ತರು ಮಾನ್ ಅವರನ್ನು ಪ್ರಶ್ನಸಿದಾಗ ‘ಅತ್ಯಾಚಾರ ಹೇಗೆ ಸಂಭವಿಸುತ್ತದೆ ಎಂದು ಅವರನ್ನೇ (ಕಂಗನಾ ಅವರನ್ನೇ) ಕೇಳಿ. ಇದರಿಂದ ಜನರಿಗೂ ತಿಳಿವಳಿಕೆ ಬರುತ್ತದೆ. ಏಕೆಂದರೆ ಅತ್ಯಾಚಾರ ವಿಷಯದಲ್ಲಿ ಅವರು (ಕಂಗನಾ) ತುಂಬಾ ಅನುಭವಿ’ ಎಂದರು.
ಕಂಗನಾ ತಿರುಗೇಟು: ಇದಕ್ಕೆ ತಿರುಗೇಟು ನೀಡಿರುವ ಕಂಗನಾ, ‘ಅತ್ಯಾಚಾರವನ್ನು ನಿಕೃಷ್ಟವಾಗಿ ಕಾಣುವುದನ್ನು ಭಾರತ ಎಂದಿಗೂ ನಿಲ್ಲಿಸುವುದಿಲ್ಲ’ ಎಂದು ಬೇಸರಿಸಿದ್ದಾರೆ.
ನಡ್ಡಾ ಜತೆ ಕಂಗನಾ ಭೇಟಿ: ಈ ನಡುವೆ ವಿವಾದಿತ ಹೇಳಿಕೆ ನೀಡಿ ಛೀಮಾರಿಗೆ ಒಳಗಾಗಿದ್ದ ಕಂಗನಾ ಗುರುವಾರ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದರು. ಈ ವೇಳೆ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದರು ಎನ್ನಲಾಗಿದೆ.
ಕಾಶ್ಮೀರದಲ್ಲಿ ಗಡಿ ನುಸುಳುವಿಕೆ ಪ್ರಯತ್ನ ವಿಫಲ: 3 ಉಗ್ರರ ಹತ್ಯೆ
ಶ್ರೀನಗರ: ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿರುವ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಮೂಲಕ ಒಳ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ನುಸುಳುಕೋರರ ಪ್ರಯತ್ನವನ್ನು ವಿಫಲಗೊಳಿಸಿರುವ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.‘ಒಬ್ಬ ಉಗ್ರ ತಂಗ್ಧಾರ್ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿದ್ದ. ಉಳಿದ ಇಬ್ಬರನ್ನು ಮಾಛಲ್ ಮತ್ತು ಕುಪ್ವಾರಾ ಪ್ರದೇಶಗಳಲ್ಲಿ ನಡೆಯುತ್ತಿರುವ ಒಳನುಸುಳುವಿಕೆ ವಿರೋಧಿ ಕಾರ್ಯಾಚರಣೆಯಲ್ಲಿ ಹತ್ಯೆಗೈಯ್ಯಲಾಗಿದ್ದು, ಅವರಿಂದ ಎರಡು ಎಕೆ ರೈಫಲ್, ಒಂದು ಪಿಸ್ತೂಲ್, ನಾಲ್ಕು ಹ್ಯಾಡ್ ಗ್ರೆನೇಡ್ ಹಾಗೂ ಅನ್ಯ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಚಿನಾರ್ ಕೋರ್ ಪಡೆ ಹೇಳಿದೆ.
ಕುಪ್ವಾರ ಪೊಲೀಸರು ನೀಡಿದ್ದ ಖಚಿತ ಮಾಹಿತಿಯನ್ನಾಧರಿಸಿ ಆ.28ರಂದು ಕುಮ್ಕಡಿ ಮತ್ತು ಕರ್ನಾಹ್ ಪ್ರದೇಶಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಗುಂಡಿನ ಚಕಮಕಿ ನಡೆದಿತ್ತು. ಬೆಳಗ್ಗೆ ಹೋಗಿ ಪರಿಶೀಲಿಸಿದಾಗ ಎರಡು ದೇಹಗಳು ಪತ್ತೆಯಾಗಿದ್ದವು.
==
ಛತ್ತೀಸ್‌ಗಢ: ಎನ್‌ಕೌಂಟರ್‌ನಲ್ಲಿ 3 ಮಹಿಳಾ ನಕ್ಸಲ್ ಹತ್ಯೆ
ನಾರಾಯಣಪುರ(ಛತ್ತೀಸ್‌ಗಢ): ಇಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳಾ ನಕ್ಸಲರು ಹತರಾಗಿರುವ ಘಟನೆ ಗುರುವಾರ ನಡೆದಿದೆ. ನಾರಾಯಣಪುರ ಮತ್ತು ಕನ್ಕೇರ್ ಜಿಲ್ಲೆಗಳ ಗಡಿಯಲ್ಲಿ ನಕ್ಸಲರು ಅಡಿಗಿರುವ ಮಾಹಿತಿಯನ್ನಾಧರಿಸಿ ವಿಶೇಷ ಕಾರ್ಯಪಡೆ, ಜಿಲ್ಲಾ ಮೀಸಲು ಸಿಬ್ಬಂದಿ ಹಾಗೂ ಗಡಿ ಭದ್ರತಾ ಪಡೆಯ ಸಿಬ್ಬಂದಿಯನ್ನೊಳಗೊಂಡ ಜಂಟಿ ಸೇನಾ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿತ್ತು. ಆ ಸಂದರ್ಭದಲ್ಲಿ ಅಭೂಜ್ಮಾದ್ ಅರಣ್ಯ ಪ್ರದೇಶದಲ್ಲಿ ಬೆಳಗ್ಗೆ ಎಂಟು ಗಂಟೆಯ ಸುಮಾರಿಗೆ ನಕ್ಸಲರೊಂದಿಗೆ ಗುಂಡಿನ ಚಕಮಕಿ ನಡೆದಿದೆ.
ಈ ವರೆಗೆ ಘಟನಾ ಸ್ಥಳದಿಂದ ಸಮವಸ್ತ್ರ ದರಿಸಿದ ಮೂವರು ಮಹಿಳಾ ನಕ್ಸಲರ ದೇಹಗಳು ಹಾಗೂ ಆಯುಧಗಳ ಸಂಗ್ರಹವನ್ನು ವಶಪಡಿಸಿಕೊಂಡಿದ್ದು, ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಈ ಮೂಲಕ ಕಳೆದೊಂದು ವರ್ಷದಲ್ಲಿ 145 ಮಂದಿ ನಕ್ಸಲರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ.
==
ಸ್ವಾತಂತ್ರ್ಯ ಹರಣ: ತಾಲಿಬಾನ್ ವಿರುದ್ಧ ಸಿಡಿದೆದ್ದ ಮಹಿಳೆಯರು!
ಕಾಬೂಲ್: ಮಹಿಳೆಯರು ಸಾರ್ವಜನಿಕವಾಗಿ ಬುರ್ಖಾ ಇಲ್ಲದ ಕಾಣಿಸಿಕೊಳ್ಳುವಂತಿಲ್ಲ, ಸಾರ್ವಜನಿಕವಾಗಿ ಹಾಡುವಂತಿಲ್ಲ ಎಂಬುದೂ ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದ ತಾಲಿಬಾನ್ ಸರ್ಕಾರದ ವಿರುದ್ಧ ಆಫ್ಘಾನಿಸ್ತಾನದ ಮಹಿಳೆಯರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೈಬಾ ಸುಲೇಮಾನಿ ಎಂಬಾಕೆ ಕನ್ನಡಿಯ ಎದುರು ನಿಂತು ಸಿಂಗರಿಸಿಕೊಳ್ಳುತ್ತ ತಾಲಿಬಾನ್ ವಿರುದ್ಧ ಹಾಡುತ್ತಿರುವ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡು, ‘ನೀವು ನನ್ನ ಧ್ವನಿಯನ್ನು ನಗ್ನ ಎನ್ನಬಹುದು, ಆದರೆ ನಾನು ಸ್ವಾತಂತ್ರ್ಯದ ಗೀತೆ ಹಾಡುತ್ತಿರುತ್ತೇನೆ’ ಎಂದು ಬರೆದುಕೊಂಡಿದ್ದಾರೆ.ತನ್ನನ್ನು ತಾನು ಆಪ್ಘಾನಿಸ್ತಾನದ ಪತ್ರಕರ್ತೆಯೆಂದು ಹೇಳಿಕೊಂಡಿರುವ ಜಹಾನ್‌ಜೆಬ್ ವೆಸಾ ಎಂಬಾಕೆ ಮಹಿಳೆಯರ ಗುಂಪೊಂದು ತಾಲಿಬಾನ್ ನೀತಿ ವಿರುದ್ಧ ಹಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.