ಸಾರಾಂಶ
ಅಸ್ಸಾಂ ವಿಧಾನಸಭೆಯಲ್ಲಿ ಮುಸ್ಲಿಂ ಶಾಸಕರಿಗೆ ನೀಡಲಾಗುತ್ತಿದ್ದ 'ಜುಮ್ಮಾ ವಿರಾಮ'ವನ್ನು ರದ್ದುಗೊಳಿಸಲಾಗಿದೆ. 1937ರಿಂದ ಜಾರಿಯಲ್ಲಿದ್ದ ಈ ಪದ್ಧತಿಯನ್ನು ಸ್ಪೀಕರ್ ಸಮಿತಿಯು ತೆಗೆದುಹಾಕಿದೆ. ಸಂವಿಧಾನದ ಜಾತ್ಯತೀತ ತತ್ವಕ್ಕೆ ಗೌರವ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪೀಕರ್ ಹೇಳಿದ್ದಾರೆ.
ಗುವಾಹಟಿ: ಅಸ್ಸಾಂ ವಿಧಾನಸಭೆಯಲ್ಲಿ ಪ್ರತಿ ಶುಕ್ರವಾರ 2 ತಾಸು ಮುಸ್ಲಿಂ ಶಾಸಕರಿಗೆ ನೀಡುತ್ತಿದ್ದ ‘ಜುಮ್ಮಾ ವಿರಾಮ’ (ನಮಾಜ್ ಬ್ರೇಕ್) ರದ್ದುಪಡಿಸಲಾಗಿದೆ. ಮುಸ್ಲಿಂ ಮದುವೆ ಮತ್ತು ವಿಚ್ಛೇದನಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕೆಂಬ ಮಸೂದೆ ಅಂಗೀಕಾರ ಮಾಡಿದ ಮರುದಿನವೇ ಈ ನಿರ್ಧಾರ ಹೊರಬಿದ್ದಿದೆ.
ಪ್ರತಿ ಶುಕ್ರವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮುಸ್ಲಿಂ ಶಾಸಕರು ನಮಾಜ್ ಮಾಡುವುದಕ್ಕೆ ಅನುಕೂಲವಾಗಲಿ ಎಂದು ಸದನವನ್ನು ಮುಂದೂಡುವ ಪದ್ಧತಿ ಅಸ್ಸಾಂ ವಿಧಾನಸಭೆಯಲ್ಲಿ 1937ರಿಂದ ಜಾರಿಯಲ್ಲಿತ್ತು. ಊಟದ ಬಳಿಕ ಸದನ ಮತ್ತೆ ಆರಂಭವಾಗುತ್ತಿತ್ತು. ಆದರೆ, ಸ್ಪೀಕರ್ ಅವರ ಸಮಿತಿಯು ಸದನದ ನಡಾವಳಿಗೆ ತಿದ್ದುಪಡಿ ತಂದು 87 ವರ್ಷಗಳಿಂದ ಜಾರಿಯಲ್ಲಿದ್ದ ಈ ವಿರಾಮವನ್ನು ತೆಗೆದುಹಾಕಿದೆ.‘ವಾರದ ಬೇರೆ ದಿನಗಳಂದು ನಮಾಜ್ ಬ್ರೇಕ್ ಇರಲಿಲ್ಲ. ಹಾಗೆಯೇ, ಬ್ರಿಟಿಷ್ ಕಾಲದ ಈ ಪಳೆಯುಳಿಕೆಯಂತಹ ಪದ್ಧತಿ ಮುಂದುವರೆಯುವ ಅಗತ್ಯವಿರಲಿಲ್ಲ. ಸಂವಿಧಾನದ ಜಾತ್ಯತೀತ ತತ್ವಕ್ಕೆ ಗೌರವ ನೀಡಲು ಈ ಪದ್ಧತಿ ರದ್ದುಪಡಿಸಲಾಗಿದೆ’ ಎಂದು ಸ್ಪೀಕರ್ ಬಿಸ್ವಜಿತ್ ಡೈಮೇರಿ ಡೋಂಗ್ರಿಯಾ ಹೇಳಿದ್ದಾರೆ.
ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಇದನ್ನು ಸ್ವಾಗತಿಸಿದ್ದು, ‘1937ರಲ್ಲಿ ಮುಸ್ಲಿಂ ಲೀಗ್‌ನ ಸಯ್ಯದ್ ಸಾದುಲ್ಲಾ ಈ ಪದ್ಧತಿ ಪರಿಚಯಿಸಿದ್ದರು. ಇದರ ರದ್ದತಿ ಐತಿಹಾಸಿಕ’ ಎಂದಿದ್ದಾರೆ.