ಸಾರಾಂಶ
ದಿಬ್ರೂಗಢ (ಅಸ್ಸಾಂ): ಕರ್ನಾಟಕವು ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿದೆ. ಅದೇ ರೀತಿ ದೇಶಕ್ಕೆ ಕೊಡುಗೆ ನೀಡುವ ರಾಜ್ಯವನ್ನಾಗಿ ಅಸ್ಸಾಂ ರಾಜ್ಯವನ್ನೂ ಅಭಿವೃದ್ಧಿಪಡಿಸುವುದು ನನ್ನ ಗುರಿ ಎಂದು ಬಿಜೆಪಿ ಆಡಳಿತವಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ. ಈ ಮೂಲಕ ಕರ್ನಾಟಕದ ಅಭಿವೃದ್ಧಿ ಪಥವನ್ನು ಹೊಗಳಿದ್ದಾರೆ.
ಭಾನುವಾರ ಇಲ್ಲಿ ನಡೆದ 76ನೇ ಗಣರಾಜ್ಯೊತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಹಿಮಂತ ಬಿಸ್ವ ಶರ್ಮಾ, ‘ಈ ಹಿಂದೆ ಅಸ್ಸಾಂ ಬೇರೆಯವರ ಮೇಲೆ ಅವಲಂಬಿತವಾದ ರಾಜ್ಯವಾಗಿತ್ತು ಮತ್ತು ಅದೇ ನಮ್ಮ ಗುರುತಾಗಿತ್ತು. ಆದರೆ ಈಗ ನಾವು ಕರ್ನಾಟಕ ಮತ್ತು ತಮಿಳುನಾಡಿನಂತೆ ಕೊಡುಗೆ ನೀಡುವ ರಾಜ್ಯವಾಗಬೇಕಿದೆ. ಅದನ್ನು ಸಾಧಿಸುವುದೇ ನನ್ನ ಗುರಿ’ ಎಂದು ಹೇಳಿದರು.
ಜೊತೆಗೆ ಈ ಕನಸು ನನಸು ಮಾಡಲು ‘ಉದ್ಯಮಗಳನ್ನು ಪ್ರೋತ್ಸಾಹಿಸಲು ಮತ್ತು ಬೆಂಬಲಿಸಲು ಅಸ್ಸಾಂನಲ್ಲಿ ಸ್ಟಾರ್ಟಪ್ ಇಲಾಖೆ ಸ್ಥಾಪಿಸಲಾಗುವುದು. ಮೂಲಸೌಕರ್ಯ, ಎಲೆಕ್ಟ್ರಾನಿಕ್ಸ್, ನವೀಕರಿಸಬಹುದಾದ ಇಂಧನ, ಪ್ರವಾಸೋದ್ಯಮ ಮತ್ತು ಲಾಜಿಸ್ಟಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಫೆಬ್ರವರಿ 25-26ರಂದು, ಅಡ್ವಾಂಟೇಜ್ ಅಸ್ಸಾಂ 2.0 ಶೃಂಗಸಭೆಯನ್ನು ರಾಜ್ಯ ಆಯೋಜಿಸುತ್ತಿದೆ. ಅಸ್ಸಾಂನ ಭವಿಷ್ಯಕ್ಕಾಗಿ ನಮ್ಮನ್ನು ನಾವು ಪರಿವರ್ತಿಸಿಕೊಳ್ಳಬೇಕಿದೆ. ಇದೇ ನನ್ನ ಗುರಿ’ ಎಂದರು.