ಇಂದು ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಆಪ್ ನಾಯಕಿ ಆತಿಶಿ ಪ್ರಮಾಣವಚನ : ಸಂಪುಟಕ್ಕೆ 6 ಜನ

| Published : Sep 21 2024, 01:55 AM IST / Updated: Sep 21 2024, 06:57 AM IST

atishi marlena

ಸಾರಾಂಶ

ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಆಪ್ ನಾಯಕಿ ಆತಿಶಿ ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ನವದೆಹಲಿ: ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಆಪ್ ನಾಯಕಿ ಆತಿಶಿ ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆತಿಶಿ ನೇತೃತ್ವದ ಸಚಿವ ಸಂಪುಟದಲ್ಲಿ ಆಪ್‌ ಶಾಸಕ ಮುಖೇಶ್‌ ಅಹ್ಲಾವತ್‌ ಹೊಸದಾಗಿ ಸೇರ್ಪಡೆಯಾಗಲಿದ್ದು, ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರ ಸಚಿವ ಸಂಪುಟದಲ್ಲಿದ್ದ ನಾಲ್ವರು ಸಚಿವರನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಅತಿಶಿ ಮತ್ತು ಇತರೆ ಐವರು ಸಚಿವರಿಗೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಶನಿವಾರ ಪ್ರಮಾಣ ವಚನ ಬೋಧಿಸಲಿದ್ದಾರೆ.

ದೆಹಲಿ ಮದ್ಯ ಹಗರಣದಲ್ಲಿ ಜೈಲು ಪಾಲಾಗಿ ಇತ್ತೀಚೆಗೆ ಜಾಮೀನು ಪಡೆದು ಹೊರಬಂದಿದ್ದ ಅರವಿಂದ್ ಕೇಜ್ರಿವಾಲ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಆತಿಶಿ ಅವರನ್ನು ನೂತನ ಸಿಎಂ ಆಗಿ ಆಯ್ಕೆ ಮಾಡಲಾಗಿತ್ತು.

ದೆಹಲಿ ಸಂಪುಟಕ್ಕೆ 10 ಜನರ ನೇಮಕಕ್ಕೆ ಅವಕಾಶ ಇದ್ದರೂ ಆಪ್‌ ಸಿಎಂ ಸೇರಿ 6 ಜನರನ್ನು ಮಾತ್ರ ನೇಮಿಸಿದೆ.

 ಉದ್ಯೋಗಿಗಳ ಕ್ಷೇಮ ಖಚಿತ ಆಗುವವರೆಗೂ ವಿರಮಿಸಲ್ಲ: ‘ಇವೈ’ ಅಧ್ಯಕ್ಷರ ಭರವಸೆ

ನವದೆಹಲಿ: ಯಂಗ್‌ ಆ್ಯಂಡ್‌ ಅರ್ನೆಸ್ಟ್‌ ಕಂಪನಿಯ 26 ವರ್ಷದ ಮಹಿಳಾ ಉದ್ಯೋಗಿ ಆರ್ನಾ ಸೆಬಾಸ್ಟಿನ್ ಪೆರಾಯಿಲ್ ಕೆಲಸದ ಒತ್ತಡದಿಂದ ಸಾವನ್ನಪ್ಪಿದ್ದಾಳೆ ಎಂಬ ಆರೋಪದ ಬೆನ್ನಲ್ಲೇ ‘ಕೆಲಸದ ಸ್ಥಳದಲ್ಲಿ ಗೌರವಯುತ ವಾತಾವರಣ ಸೃಷ್ಟಿಸುವ ವಿಶ್ರಾಂತಿಸುವುದಿಲ್ಲ’ ಎಂದು ಕಂಪನಿಯ ಭಾರತೀಯ ವಿಭಾಗದ ಮುಖ್ಯಸ್ಥ ರಾಜೀವ್ ಮೇಮಾನಿ ಭರವಸೆ ನೀಡಿದ್ದಾರೆ.ಅನ್ನಾ ತಾಯಿ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ಲಿಂಕ್ಡ್‌ ಇನ್‌ನಲ್ಲಿ ಪೋಸ್ಟ್ ಮಾಡಿರುವ ಮೇಮಾನಿ, ಒಬ್ಬ ತಂದೆಯಾಗಿ ನಾನು ಅನ್ನಾ ತಾಯಿ ದುಃಖ ಅರ್ಥ ಮಾಡಿಕೊಳ್ಳಬಲ್ಲೆ. ಅವರ ಶೂನ್ಯತೆ ತುಂಬುವುದಕ್ಕೆ ಸಾಧ್ಯವಿಲ್ಲ. ಅನ್ನಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸದಿರುವುದಕ್ಕೆ ನಾನು ವಿಷಾದಿಸುತ್ತೇನೆ. ಹಿಂದೆ ಈ ರೀತಿ ಘಟನೆ ನಡೆದಿರಲಿಲ್ಲ. ಮತ್ತೆಂದೂ ಈ ಘಟನೆ ನಡೆಯಲ್ಲ. ನಮ್ಮ ಕಂಪನಿಯಲ್ಲಿ ಕೆಲಸ ಮಾಡುವವರ ಯೋಗಕ್ಷೇಮ ನನ್ನ ಮೊದಲ ಆದ್ಯತೆಯಾಗಿದೆ. ಅದು ನನ್ನ ವೈಯಕ್ತಿಕ ಹಿತಾಸಕ್ತಿಯೂ ಹೌದು. ನಾನು ಕೆಲಸದ ಸ್ಥಳದಲ್ಲಿ ಗೌರವಯುತ ವಾತಾವರಣ ಸ್ಥಾಪಿಸಲು ಪ್ರಯತ್ನಿಸುತ್ತೇನೆ ಮತ್ತು ಅಲ್ಲಿಯವರೆಗೆ ವಿರಮಿಸುವುದಿಲ್ಲ’ ಎಂದು ಬರೆದಿದ್ದಾರೆ.ದಿನಕ್ಕೆ 16 ತಾಸು, ವಾರಾಂತ್ಯದಲ್ಲೂ ಕೆಲಸದ ಒತ್ತಡ ತಾಳಲಾಗದೆ ಕಳೆದ ಆಗಸ್ಟ್‌ನಲ್ಲಿ ಅನ್ನಾ ಸಾವನ್ನಪ್ಪಿದ್ದರು ಎಂದು ಅವರ ತಾಯಿ ಇತ್ತೀಚೆಗೆ ಆರೋಪಿಸಿದ್ದರು. 

ಕಾರವಾರ ನೌಕಾ ನೆಲೆಗೆ ಐಎನ್ಎಸ್‌ ವಿಕ್ರಾಂತ್‌ ಸೇರ್ಪಡೆ

ಮುಂಬೈ: ಸ್ವದೇಶಿ ವಿಮಾನವಾಹಕ ನೌಕೆ ಐಎನ್ಎಸ್‌ ವಿಕ್ರಾಂತ್‌, ಕರ್ನಾಟಕದ ಕಾರವಾರದಲ್ಲಿರುವ ನೌಕಾ ನೆಲೆಗೆ ಸೇರ್ಪಡೆಯಾಗಿದೆ. ಈ ಮೂಲಕ ಅರಬ್ಬೀ ಸಮುದ್ರ ಕಡಲ ತೀರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ನೌಕಾ ನೆಲೆಗೆ ಐಎನ್‌ಎಸ್‌ ವಿಕ್ರಾಂತ್‌ ಸೇರ್ಪಡೆಯಾಗಿರುವುದನ್ನು ನೌಕಾ ಪಡೆ ಅಧಿಕಾರಿಗಳು ಅಧಿಕೃತಗೊಳಿಸಿದ್ದಾರೆ. ಈ ಮೂಲಕ ಐಎನ್ಎಸ್‌ ವಿಕ್ರಾಂತ್‌ ಮತ್ತು ಐಎನ್ಎಸ್‌ ವಿಕ್ರಮಾದಿತ್ಯ ನೌಕಪಡೆಗಳನ್ನು ಕಾರವಾರದ ನೌಕಾ ನೆಲೆಗೆ ಸೇರಿದಂತಾಗಿದೆ.‘ ಭಾರತದ ಸ್ವದೇಶಿ ವಿಮಾನ ವಾಹಕ ಐಎನ್ಎಸ್‌ ವಿಕ್ರಾಂತ್‌ ಪಶ್ಚಿಮ ನೌಕಾಪಡೆಗೆ ಸೇರ್ಪಡೆಯಾಗಿದೆ. ಇದು ಕಡಲ ಶಕ್ತಿಯ ಮತ್ತು ಸ್ವ್ಯಾರ್ಡ್‌ ಆರ್ಮಿಯ ಶಕ್ತಿಯನ್ನು ಹೆಚ್ಚಿಸುತ್ತದೆ. ಅರಬ್ಬೀ ಸಮುದ್ರದಲ್ಲಿ ಕಾರ್ಯಾಚರಣೆಗೆ ಐಎನ್ಎಸ್‌ ವಿಕ್ರಮಾದಿತ್ಯ ನೇತೃತ್ವದ ಕ್ಯಾರಿಯ ಫೈಟರ್‌ ತಂಡಕ್ಕೆ ಐಎನ್ಎಸ್‌ ವಿಕ್ರಾಂತ್‌ ಸೇರಿಕೊಂಡಿದೆ’ ಎಂದು ಪಶ್ಚಿಮ ನೌಕಾ ಕಮಾಂಡ್‌ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ.

ಅಮೆರಿಕದ ಧ್ರುವಿ ಪಟೇಲ್‌ 2024ರ ಮಿಸ್‌ ಇಂಡಿಯಾ ವರ್ಲ್ಡ್‌ವೈಡ್‌ ವಿಜೇತೆ

ವಾಷಿಂಗ್ಟನ್‌: ಭಾರತ ಬಿಟ್ಟು ಬೇರೆ ದೇಶಗಳಲ್ಲಿ ನೆಲೆಸಿರುವ ಯುವತಿಯರಿಗಾಗಿ ಆಯೋಜಿಸುವ ಮಿಸ್‌ ಇಂಡಿಯಾ ವರ್ಲ್ಡ್‌ವೈಡ್‌ ಸ್ಪರ್ಧೆಯಲ್ಲಿ ಈ ಬಾರಿ ಅಮೆರಿಕದ ವಿದ್ಯಾರ್ಥಿನಿ ಧ್ರುವಿ ಪಟೇಲ್‌ ವಿಜೇತರಾಗಿದ್ದಾರೆ. ನ್ಯೂಜೆರ್ಸಿಯ ಎಡಿಸನ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಪಟೇಲ್‌ ಅವರನ್ನು ವಿಜೇತರನ್ನಾಗಿ ಘೋಷಿಸಿ ಕಿರೀಟವನ್ನು ಅಲಂಕರಿಸಲಾಯಿತು. ಇದೇ ಸ್ಪರ್ಧೆಯಲ್ಲಿದ್ದ ಸುರಿನಾಮ್‌ನ ಲಿಸಾ ಅಬ್ಡೋಲ್ಹಾಕ್ ಅವರು ಎರಡು ಮತ್ತು ನೆದರ್ಲೆಂಡ್‌ನ ಮಾಳವಿಕಾ ಶರ್ಮಾ ಮೂರನೇ ಸ್ಥಾನ ಪಡೆದರು.

84000 ದಾಟಿ ಸೆನ್ಸೆಕ್ಸ್ ದಾಖಲೆ: ₹6 ಲಕ್ಷ ಕೋಟಿ ಸಂಪತ್ತು ವೃದ್ಧಿ

ಮುಂಬೈ: ಅಮೆರಿಕದ ಕೇಂದ್ರೀಯ ಬ್ಯಾಂಕ್‌ನ ಬಡ್ಡಿದರ ಕಡಿತ ಶುಕ್ರವಾರವೂ ಭಾರತೀಯ ಷೇರುಪೇಟೆಗೆ ಬಲ ತುಂಬಿದೆ. ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕವಾದ ‘ಸೆನ್ಸೆಕ್ಸ್’ ಶುಕ್ರವಾರ 1359 ಅಂಕಗಳ ಭಾರೀ ಏರಿಕೆ ಕಂಡು 84544 ಅಂಕಗಳಲ್ಲಿ ಮುಕ್ತಾಯವಾಗಿದೆ. ಸೆನ್ಸೆಕ್ಸ್‌ 84000ರ ಗಡಿ ದಾಟಿದ್ದು ಇದೇ ಮೊದಲು. ಮಧ್ಯಂತರದಲ್ಲಿ ಒಂದು ಹಂತದಲ್ಲಿ ಸೆನ್ಸೆಕ್ಸ್‌ 1509 ಅಂಕಗಳವರೆಗೂ ತಲುಪಿತ್ತು. ಇನ್ನೊಂದೆಡೆ ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 375 ಅಂಕ ಏರಿ ದಾಖಲೆಯ 25,7905ಕ್ಕೆ ದಿನದ ವಹಿವಾಟು ಮುಗಿಸಿತು. ಮಧ್ಯಂತರದಲ್ಲಿ 433 ಅಂಕ ಏರಿ 25,849 ಅಂಕಕ್ಕೂ ಅದು ತಲುಪಿತ್ತು. ಬಾಂಬೆ ಷೇರುಪೇಟೆಯ ಭರ್ಜರಿ ಏರಿಕೆ ಕಾರಣ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 6.24 ಲಕ್ಷ ಕೋಟಿ ರು.ನಷ್ಟು ಏರಿದೆ

ಸುಪ್ರೀಂ ಕೋರ್ಟ್‌ ಅಧಿಕೃತ ಯುಟ್ಯೂಬ್‌ ಚಾನೆಲ್‌ ಹ್ಯಾಕ್‌!

ನವದೆಹಲಿ: ಭಾರತದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂಕೋರ್ಟ್‌ನ ಅಧಿಕೃತ ಯುಟ್ಯೂಬ್‌ ಚಾನೆಲ್‌ ಶುಕ್ರವಾರ ಹ್ಯಾಕ್‌ ಆಗಿದೆ. ಸಾಮಾನ್ಯವಾಗಿ ಸಾಂವಿಧಾನಿಕ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ವಿಚಾರಣೆಗಳನ್ನು ಲೈವ್‌ ಸ್ಟ್ರೀಮ್‌ ಮಾಡಲು ಬಳಸಿಕೊಳ್ಳುತ್ತಿದ್ದ ಯುಟ್ಯೂಬ್ ಚಾನೆಲ್‌ ಹ್ಯಾಕ್‌ ಆಗಿದ್ದು, ಇದರಲ್ಲಿ ಅಮೆರಿಕ ರಿಪ್ಪಲ್ ಲ್ಯಾಬ್ಸ್‌ ಕಂಪನಿ ಅಭಿವೃದ್ಧಿ ಪಡಿಸಿದ ಎಕ್ಸ್‌ಆರ್‌ಪಿ ಕ್ರಿಪ್ಟೋಕರೆನ್ಸಿ ಬಗ್ಗೆ ಪ್ರಸಾರ ಮಾಡಲಾಗಿದೆ. ‘Brad Garlinghouse: Ripple Responds To The SEC''''s $2 Billion Fine! XRP PRICE PREDICTION’ ಎಂಬ ಶೀರ್ಷಿಕೆ ಅಡಿಯಲ್ಲಿ ಶುಕ್ರವಾರ ವೀಡಿಯೊ ನೇರಪ್ರಸಾರವಾಗಿತ್ತು.