ಸಿಖ್ಖರ ಪರಮೋಚ್ಚ ಧಾರ್ಮಿಕ ಸ್ಥಳ ಸ್ವರ್ಣಮಂದಿರದಲ್ಲಿ ಬಾದಲ್‌ ಹತ್ಯೆಗೆ ಉಗ್ರನ ವಿಫಲ ಯತ್ನ

| Published : Dec 05 2024, 12:33 AM IST / Updated: Dec 05 2024, 04:32 AM IST

Sukhbir singh badal

ಸಾರಾಂಶ

ಸಿಖ್ಖರ ಪರಮೋಚ್ಚ ಧಾರ್ಮಿಕ ಸ್ಥಳವಾದ ಸ್ವರ್ಣಮಂದಿರ ಆವರಣದಲ್ಲಿ ಬುಧವಾರ ಪಂಜಾಬ್‌ ಮಾಜಿ ಉಪಮುಖ್ಯಮಂತ್ರಿ ಹಾಗೂ ಸುಖಬೀರ್ ಸಿಂಗ್‌ ಬಾದಲ್‌ ಅವರ ಮೇಲೆ ಖಲಿಸ್ತಾನಿ ಉಗ್ರನೊಬ್ಬ ಗುಂಡು ಹಾರಿಸಿ ಹತ್ಯೆ ಯತ್ನ ನಡೆಸಿದ್ದಾನೆ. ಆದರೆ ಮಫ್ತಿಯಲ್ಲಿದ್ದ ಪೊಲೀಸರು ಆತನನ್ನು ತಡೆದ ಕಾರಣ ಹತ್ಯೆ ಯತ್ನ ವಿಫಲಗೊಂಡಿದೆ.

ಅಮೃತಸರ: ಸಿಖ್ಖರ ಪರಮೋಚ್ಚ ಧಾರ್ಮಿಕ ಸ್ಥಳವಾದ ಸ್ವರ್ಣಮಂದಿರ ಆವರಣದಲ್ಲಿ ಬುಧವಾರ ಪಂಜಾಬ್‌ ಮಾಜಿ ಉಪಮುಖ್ಯಮಂತ್ರಿ ಹಾಗೂ ಸುಖಬೀರ್ ಸಿಂಗ್‌ ಬಾದಲ್‌ ಅವರ ಮೇಲೆ ಖಲಿಸ್ತಾನಿ ಉಗ್ರನೊಬ್ಬ ಗುಂಡು ಹಾರಿಸಿ ಹತ್ಯೆ ಯತ್ನ ನಡೆಸಿದ್ದಾನೆ.

 ಆದರೆ ಮಫ್ತಿಯಲ್ಲಿದ್ದ ಪೊಲೀಸರು ಆತನನ್ನು ತಡೆದ ಕಾರಣ ಹತ್ಯೆ ಯತ್ನ ವಿಫಲಗೊಂಡಿದೆ.ದಾಳಿಕೋರ ನರೈನ್ ಸಿಂಗ್ ಚೌರಾ (68) ಎಂಬಾತನನ್ನು ಬಂಧಿಸಲಾಗಿದ್ದು, ಈತ ಖಲಿಸ್ತಾನಿ ಉಗ್ರ ಸಂಘಟನೆಯಾದ ಬಬ್ಬರ್ ಖಾಲ್ಸಾಗೆ ಸೇರಿದವ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆಯಿಂದ ಪಂಜಾಬ್‌ನ ಕಾನೂನು ಸುವ್ಯವಸ್ಥೆ ಬಗ್ಗೆ ನಾನಾ ಪ್ರಶ್ನೆಗಳು ಎದ್ದಿದ್ದು, ಆಡಳಿತಾರೂಢ ಆಪ್‌ ಹಾಗೂ ವಿಪಕ್ಷಗಳ ನಡುವೆ ರಾಜಕೀಯ ವಾಕ್ಸಮರ ನಡೆದಿದೆ.

ಬಬ್ಬರ್‌ ಖಾಲ್ಸಾ ಉಗ್ರ ನರೈನ್‌ ಸಿಂಗ್‌ ಚೌರಾ

ಅಮೃತಸರ: ಪಂಜಾಬ್‌ ಮಾಜಿ ಡಿಸಿಎಂ ಸುಖಬೀರ್‌ ಬಾದಲ್‌ ಹತ್ಯೆಗೆ ಯತ್ನಿಸಿದ ನರೈನ್‌ ಸಿಂಗ್ ಚೌರಾ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಚೌರಾ ಎಂಬ ಹಳ್ಳಿಯ ನಿವಾಸಿ. ಈತನ ಊರು ಸ್ವರ್ಣಮಂದಿರದಿಂದ 60 ಕಿ.ಮೀ. ದೂರದಲ್ಲಿದೆ.ಚೌರಾ ನಿಷೇಧಿತ ಖಲಿಸ್ತಾನ್ ಪರ ಗುಂಪು ಬಬ್ಬರ್ ಖಾಲ್ಸಾ ಅಥವಾ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ನೊಂದಿಗೆ ಸಂಬಂಧ ಹೊಂದಿದ್ದಾನೆ.

68 ವರ್ಷದ ಈತ ಚಂಡೀಗಢದ 2004ರ ಬುರೈಲ್ ಜೈಲ್ ಬ್ರೇಕ್ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದಾನೆ. ಇದರಲ್ಲಿ 4 ಕೈದಿಗಳು 104 ಅಡಿ ಸುರಂಗವನ್ನು ಅಗೆದು ಜೈಲಿನಿಂದ ತಪ್ಪಿಸಿಕೊಂಡಿದ್ದರು. ಅವರೆಂದರೆ ಬಬ್ಬರ್ ಖಾಲ್ಸಾ ಮುಖ್ಯಸ್ಥ ಜಗತಾರ್ ಸಿಂಗ್ ಹವಾರಾ, ಪಂಜಾಬ್ ಮಾಜಿ ಸಿಎಂ ಬಿಯಾಂತ್ ಸಿಂಗ್ ಅವರ ಹಂತಕರಾದ ಪರಮ್‌ಜಿತ್ ಸಿಂಗ್ ಭೋರಾ ಮತ್ತು ಜಗತಾರ್ ಸಿಂಗ್ ತಾರಾ ಮತ್ತು ಕೊಲೆ ಅಪರಾಧಿ ದೇವಿ ಸಿಂಗ್.ಈ ನಡುವೆ ಪ್ರಕರಣವೊಂದರಲ್ಲಿ 2013ರಲ್ಲಿ ಚೌರಾನನ್ನು ಬಂಧಿಸಲಾಗಿತ್ತು. 5 ವರ್ಷಗಳ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಪಂಜಾಬ್‌ನಲ್ಲಿ ಅನೇಕ ಹತ್ಯೆ ಯತ್ನಗಳುಪಂಜಾಬ್‌ನಲ್ಲಿ ರಾಜಕೀಯ ನಾಯಕರ ಹತ್ಯೆ ಹಾಗೂ ಹತ್ಯೆ ಯತ್ನಗಳು ಮೊದಲಲ್ಲ. ಖಲಿಸ್ತಾನಿ ಉಗ್ರರು ಪ್ರತ್ಯೇಕ ಖಲಿಸ್ತಾನಿ ದೇಶಕ್ಕೆ ಬೇಡಿಕೆ ಇಟ್ಟು ಹೋರಾಟ ನಡೆಸುತ್ತಿರುವ ಕಾರಣ ಪಂಜಾಬಲ್ಲಿ ರಾಜಕೀಯ ರಕ್ತಪಾತ ಸಾಮಾನ್ಯವಾಗಿದೆ. 1995ರಲ್ಲಿ ಅಂದಿನ ಪಂಜಾಬ್‌ ಸಿಎಂ ಬೇಅಂತ್ ಸಿಂಗ್‌ ಅವರನ್ನು ಖಲಿಸ್ತಾನಿ ಉಗ್ರರು ಹತ್ಯೆ ಮಾಡಿದ್ದರು. ಅಲ್ಲದೆ ಅನೇಕ ಬಾರಿ ಇಂಥ ಯತ್ನಗಳು ನಡೆದಿದ್ದವು.

1988ರ ಬಳಿಕ ಸ್ವರ್ಣಮಂದಿರದಲ್ಲಿ ಮೊದಲ ಅತಿದೊಡ್ಡ ದಾಳಿ

ಅಮೃತಸರ: ಅಕಾಲಿ ದಳ ನಾಯಕ ಸುಖಬೀರ್‌ ಸಿಂಗ್ ಬಾದಲ್ ಅವರ ಮೇಲೆ ಬುಧವಾರ ನಡೆದ ಗುಂಡಿನ ದಾಳಿಯು, 1988ರಲ್ಲಿ ನಡೆದ ಆಪರೇಶನ್‌ ಬ್ಲ್ಯಾಕ್‌ ಥಂಡರ್-2 ನಂತರ ಸ್ವರ್ಣಮಂದಿರದಲ್ಲಿ ನಡೆದ ಅತಿದೊಡ್ಡ ದಾಳಿಯಾಗಿದೆ. 1984ರಲ್ಲಿಗಿಲ್ಲಿ ಆಪರೇಶನ್‌ ಬ್ಲೂಸ್ಟಾರ್‌ ನಡೆದಿತ್ತು. ಆಗ ಖಲಿಸ್ತಾನಿ ಉಗ್ರ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಮತ್ತು ಇತರ ಸಿಖ್ ಉಗ್ರಗಾಮಿಗಳನ್ನು ಮಟ್ಟಹಾಕಲು ಸಶಸ್ತ್ರ ಪಡೆಗಳು ನಡೆಸಿದ್ದವು. ನಂತರ 1986ರಲ್ಲಿ ಸ್ವರ್ಣಮಂದಿರದಲ್ಲಿ ಅವಿತಿದ್ದ ಉಗ್ರರ ಹೊರಹಾಕಲು ಆಪರೇಶನ್‌ ಬ್ಲ್ಯಾಕ್‌ ಥಂಡರ್-1 ಹಾಗೂ 1988ರಲ್ಲಿ ಆಪರೇಶನ್‌ ಬ್ಲ್ಯಾಕ್‌ ಥಂಡರ್-2 ನಡೆದಿದ್ದವು.

ಬಾದಲ್‌ ಬದುಕಿಸಿದ್ದು ಎಎಸ್ಐ ಜಸ್ಬೀರ್ ಸಿಂಗ್‌

ಪಿಟಿಐ ಚಂಡೀಗಢಅಮೃತಸರ ಸ್ವರ್ಣಮಂದಿರದಲ್ಲಿ ಖಲಿಸ್ತಾನಿ ಉಗ್ರನಿಂದ ಗುಂಡಿನ ದಾಳಿಗೆ ಯತ್ನ ನಡೆದಾಗ ಮಾಜಿ ಡಿಸಿಎಂ ಸುಖಬೀರ್‌ ಬಾದಲ್‌ ಅವರನ್ನು ಬದುಕಿಸಿದ್ದು ಪಂಜಾಬ್‌ ಪೊಲೀಸ್‌ ಎಎಸ್ಐ ಜಸ್ಬೀರ್ ಸಿಂಗ್‌.

ದಾಳಿಕೋರ ತನ್ನ ಜೇಬಿಂದ ಗನ್‌ ತೆಗೆದು ಬಾದಲ್‌ರತ್ತ ಬಂದಾಗ ಅದನ್ನು ಮಫ್ತಿಯಲ್ಲಿ ರಕ್ಷಣೆಗಿದ್ದ ಜಸ್ಬೀರ್‌ ಸಿಂಗ್‌ ಗಮನಿಸಿದ್ದಾರೆ ಹಾಗೂ ತಕ್ಷಣ ಆತನ ಮೇಲೆರಗಿ ದಾಳಿಕೋರನ ಕೈ ಹಿಡಿದಿದ್ದಾರೆ. ಆಗ ನರೈನ್‌ ಗಲಿಬಿಲಿಯಲ್ಲೇ ಗುಂಡು ಹಾರಿಸಿದ್ದು, ಗುಂಡು ಬಾದಲ್‌ಗೆ ತಾಗದೇ ಹಿಂಭಾಗದ ಗೋಡೆಗೆ ತಗುಲಿದೆ. ಬಳಿಕ ಅಲ್ಲಿದ್ದ ಎಲ್ಲರೂ ಸೇರಿ ನರೈನ್‌ನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.