16ಕ್ಕಿಂತ ಕಮ್ಮಿ ವಯಸ್ಸಿನ ಮಕ್ಕಳಿನ್ನು ಜಾಲತಾಣ ಬಳಸಂಗಿಲ್ಲ : ಮೇಲ್ಮನೆ ಸೆನೆಟ್‌ ಸಹಮತ

| Published : Nov 29 2024, 01:02 AM IST / Updated: Nov 29 2024, 04:38 AM IST

ಸಾರಾಂಶ

16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮದ ಬಳಕೆಯನ್ನು ನಿಷೇಧ ಮಾಡುವ ಮಸೂದೆಗೆ ಆಸ್ಟ್ರೇಲಿಯಾದ ಮೇಲ್ಮನೆ ಸೆನೆಟ್‌ ಸಹಮತ ಸೂಚಿಸಿದೆ

ಮೆಲ್ಬರ್ನ್‌: 16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮದ ಬಳಕೆಯನ್ನು ನಿಷೇಧ ಮಾಡುವ ಮಸೂದೆಗೆ ಆಸ್ಟ್ರೇಲಿಯಾದ ಮೇಲ್ಮನೆ ಸೆನೆಟ್‌ ಸಹಮತ ಸೂಚಿಸಿದೆ. ಈ ಮೂಲಕ ಮಸೂದೆಗೆ ಸಂಸತ್ತಿನ ಅನುಮೋದನೆ ಸಿಕ್ಕಂತೆ ಆಗಿದೆ. ಇದರೊಂದಿಗೆ ಇಂಥ ಕಾನೂನನ್ನು ಜಾರಿಗೆ ತಂದ ಮೊದಲ ದೇಶ ಎಂಬ ಖ್ಯಾತಿಗೆ ಆಸ್ಟ್ರೇಲಿಯಾ ಪಾತ್ರವಾಗಿದೆ.

ಹೊಸ ಕಾನೂನಿನ ಅಡಿಯಲ್ಲಿ 16 ವರ್ಷದ ಒಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್‌, ಎಕ್ಸ್‌, ಟಿಕ್‌ಟಾಕ್‌, ಇನ್ಸ್‌ಟಾಗ್ರಾಂ, ಸ್ನಾಪ್‌ ಚಾಟ್‌, ರೆಡ್ಡಿಟ್‌ ಮುಂತಾದವುಗಳನ್ನು ಬಳಸಬಾರದು. ಮಕ್ಕಳ ಬಳಕೆಯನ್ನು ತಡೆಯಲು ಆ್ಯಪ್‌ಗಳೇ ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ಒಂದು ವರ್ಷಗಳ ಸಮಯ ನೀಡಲಾಗುವುದು. ಅಂದರೆ 2025ರ ನವೆಂಬರ್‌ನಿಂದ ಹೊಸ ನಿಯಮ ಜಾರಿಗೆ ಬರಲಿದೆ. ಒಂದು ವೇಳೆ ನಿಯಮ ಪಾಲನೆಗೆ ವಿಫಲವಾದಲ್ಲಿ ಅಂಥ ಕಂಪನಿಗಳಿಗೆ 275 ಕೋಟಿ ರು. ದಂಡ ವಿಧಿಸುವ ಅವಕಾಶವನ್ನು ಕಾನೂನಿನಡಿ ಕಲ್ಪಿಸಲಾಗಿದೆ. ಈ ಕಾನೂನಿಗೆ ಬುಧವಾರ ಕೆಳಮನೆ ಹೌಸ್‌ ಆಫ್‌ ರೆಪ್ರೆಸೆಂಟ್‌ಟೇಟೀವ್ಸ್‌ ಅನುಮೋದನೆ ನೀಡಿತ್ತು.