ಅಯೋಧ್ಯೆಗೆ ಜ.22ರಂದು ನೂರಾರು ವಿಮಾನ ಲಗ್ಗೆ

| Published : Dec 27 2023, 01:32 AM IST / Updated: Dec 27 2023, 11:21 AM IST

ಸಾರಾಂಶ

ವಿಮಾನ ಪಾರ್ಕಿಂಗ್‌ಗೆ ಅಯೋಧ್ಯೆ ವಿಮಾನ ನಿಲ್ದಾಣದಲ್ಲಿ ಸ್ಥಳಾಭಾವ ಹಿನ್ನೆಲೆಯಲ್ಲಿ ಪಕ್ಕದ ಜಿಲ್ಲೆಗಳ ಏರ್‌ಪೋರ್ಟಲ್ಲಿ ಪಾರ್ಕಿಂಗ್‌ ಮಾಡಲು ಚಿಂತನೆ ನಡೆಸಲಾಗಿದೆ. ಇದರ ಅಂಗವಾಗಿ ಖಾಸಗಿ ವಿಮಾನಗಳನ್ನು ವಾರಾಣಸಿ, ಪ್ರಯಾಗ್‌ರಾಜ್‌, ಗೋರಖಪುರದಲ್ಲಿ ನಿಲುಗಡೆ ಮಾಡಲಾಗುತ್ತದೆ.

ಅಯೋಧ್ಯೆ: ಶ್ರೀರಾಮ ಮಂದಿರ ಪ್ರತಿಷ್ಠಾಪನೆ ಜ.22ರಂದು ಗಣ್ಯರನ್ನು ಹೊತ್ತ ನೂರಾರು ಬಾಡಿಗೆ ವಿಮಾನಗಳು ಇಲ್ಲಿನ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ. ಆದರೆ ಅಷ್ಟು ವಿಮಾನಗಳು ಇಲ್ಲಿ ನಿಲ್ಲಿಸಲು ಸ್ಥಳಾವಕಾಶ ಇಲ್ಲದ ಕಾರಣ ಅಕ್ಕಪಕ್ಕದ ಜಿಲ್ಲೆಗಳ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿದೆ.

ರಾಮ ಮಂದಿರ ಪ್ರತಿಷ್ಠಾಪನೆಗೆ ದೇಶದ ಸಾವಿರಾರು ಗಣ್ಯರಿಗೆ ಆಹ್ವಾನವಿದ್ದು, ಅವರಲ್ಲಿ ಹಲವು ಖಾಸಗಿ ವಿಮಾನದಲ್ಲಿ ಬರುವ ನಿರೀಕ್ಷೆ ಇದೆ. ಈ ವಿಮಾನಗಳು ಅಯೋಧ್ಯೆ ನಿಲ್ದಾಣದಲ್ಲಿ ಗಣ್ಯರನ್ನು ಇಳಿಸಿ ನಂತರ ವಾರಾಣಸಿ, ಗೋರಖಪುರ, ಪ್ರಯಾಗ್‌ರಾಜ್‌ ಸೇರಿ ಹಲವು ಸಮೀಪದ ಏರ್‌ಪೋರ್ಟಲ್ಲಿ ತಂಗಲಿವೆ. ಕಾರ್ಯಕ್ರಮ ಮುಗಿದ ಬಳಿಕ ಮತ್ತೆ ಅಯೋಧ್ಯೆಗೆ ತೆರಳಿ ಗಣ್ಯರನ್ನು ಹತ್ತಿಸಿಕೊಂಡು ಆಯಾ ಸ್ಥಳಗಳಿಗೆ ವಾಪಸಾತ್ತವೆ. ಇದರಿಂದಾಗಿ ಅಯೋಧ್ಯೆಯಲ್ಲಿ ವಿಮಾನಗಳ ಆಗಮನ ನಿರ್ಗಮನ ತೊಂದರೆ ಆಗುವುದಿಲ್ಲ ಎಂದು ಮೂಲಗಳು ಹೇಳಿವೆ.

ಇದನ್ನು ಹೊರತುಪಡಿಸಿ ಈಗಾಗಲೇ ಇಂಡಿಗೋ, ಏರ್‌ ಇಂಡಿಯಾ ಬೆಂಗಳೂರು ಸೇರಿ ದೇಶದ ಹಲವು ನಗರಗಳಿಂದ ಅಯೋಧ್ಯೆಗೆ ನೇರ ವಿಮಾನವನ್ನು ಆಯೋಜಿಸುವುದಾಗಿ ತಿಳಿಸಿವೆ.