ಬಾಲರಾಮನ ಚಿತ್ರ ಮೊದಲ ಬಾರಿ ಸಂಪೂರ್ಣ ಅನಾವರಣ

| Published : Jan 20 2024, 02:02 AM IST / Updated: Jan 20 2024, 09:18 AM IST

Ayodhya rama

ಸಾರಾಂಶ

ನೂತನವಾಗಿ ನಿರ್ಮಿಸಲಾದ ಭವ್ಯ ರಾಮಮಂದಿರಕ್ಕೆಂದು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿರುವ 5 ವರ್ಷದ ಬಾಲರಾಮನ ವಿಗ್ರಹದ ಸಂಪೂರ್ಣ ನೋಟ ಶುಕ್ರವಾರ ಅನಾವರಣಗೊಂಡಿದೆ.

ಅಯೋಧ್ಯೆ: ಇಲ್ಲಿ ನೂತನವಾಗಿ ನಿರ್ಮಿಸಲಾದ ಭವ್ಯ ರಾಮಮಂದಿರಕ್ಕೆಂದು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿರುವ 5 ವರ್ಷದ ಬಾಲರಾಮನ ವಿಗ್ರಹದ ಸಂಪೂರ್ಣ ನೋಟ ಶುಕ್ರವಾರ ಅನಾವರಣಗೊಂಡಿದೆ. 

ವಿಗ್ರಹವು ಕೈಯಲ್ಲಿ ಬಿಲ್ಲುಬಾಣ ಹಿಡಿದು ನಿಂತಿರುವ ಭಂಗಿಯಲ್ಲಿದೆ. ಇದು ಮಂದಿರಕ್ಕೆ ತರುವ ಮುನ್ನ ಮೂರ್ತಿ ಕೆತ್ತುವ ಸ್ಥಳದಲ್ಲಿ ತೆಗೆದ ಫೋಟೋ ಆಗಿದ್ದು, ಇದರಲ್ಲಿ ರಾಮ ವಿಗ್ರಹದ ಸಂಪೂರ್ಣ ದರ್ಶನವಾಗಿದೆ.

ಇನ್ನು ಗರ್ಭಗುಡಿಗೆ ತಂದು ಕೂರಿಸಿದ ಬಳಿಕ ತೆಗೆದಿರುವ ಮತ್ತೊಂದು ಚಿತ್ರದಲ್ಲಿ ರಾಮನ ಮುಖಕ್ಕೆ ಬಟ್ಟೆ ಕಟ್ಟಿ ಪೂಜಿಸಲಾಗಿರುವ ನೋಟವಿದೆ. 

ಭವ್ಯ ಮಂದಿರಕ್ಕೆ ಸರಿಸಾಟಿಯಾಗುವಂತೆ ಕೆತ್ತಲಲ್ಪಟ್ಟಿರುವ 4.5 ಅಡಿ ಎತ್ತರದ ವಿಗ್ರಹವು ಬಾಲ ರಾಮನ ಮಂದಸ್ಮಿತ ಮುಖವನ್ನು ಹೊಂದಿದೆ ಹಾಗೂ ಸುಂದರವಾದ ಪ್ರಭಾವಳಿಯನ್ನು ಹೊಂದಿದೆ. 

ಪ್ರಭಾವಳಿ ಮೇಲ್ಭಾಗದಲ್ಲಿ ರಾಮ ಸೂರ್ಯವಂಶಕ್ಕೆ ಸೇರಿದ್ದನ್ನು ಸೂಚಿಸುವ ಸೂರ್ಯನ ವಿಗ್ರಹವಿದೆ. ಉಳಿದಂತೆ ಪ್ರಭಾವಳಿಯಲ್ಲಿ ಓಂ, ಸ್ವಸ್ತಿಕ, ಶಂಕ-ಚಕ್ರ, ವಿಷ್ಣುವಿನ ದಶಾವತಾರದ ಸುಂದರ ಚಿತ್ರಣವಿದೆ. ಪ್ರಭಾವಳಿ ಮೈಸೂರು ಶೈಲಿಯಲ್ಲಿದ್ದರೆ, ಆಭರಣ ಮತ್ತು ಇತರೆ ಕೆತ್ತನೆಗಳು ಹೊಯ್ಸಳ ಶೈಲಿಯಲ್ಲಿದೆ.

ಎರಡು ಚಿತ್ರ ಬಿಡುಗಡೆ: ಗುರುವಾರ ತಡರಾತ್ರಿ ಬಿಡುಗಡೆ ಮಾಡಲಾದ ಫೋಟೋದಲ್ಲಿ ಗರ್ಭಗುಡಿಯಲ್ಲಿ ಕೂರಿಸಲಾದ ರಾಮನ ಚಿತ್ರವನ್ನು ತೋರಿಸಲಾಗಿತ್ತು. ಇದರಲ್ಲಿ ರಾಮನ ಮುಖಕ್ಕೆ ಬಟ್ಟೆಯನ್ನು ಕಟ್ಟಲಾಗಿತ್ತು. 

ಇನ್ನು ಶುಕ್ರವಾರ ಬೆಳಗಗ್ಗೆ ಇನ್ನೊಂದು ಚಿತ್ರವನ್ನು ವಿಎಚ್‌ಪಿ ಬಿಡುಗಡೆ ಮಾಡಿತ್ತು. ಅದರಲ್ಲಿ ರಾಮನ ಕಣ್ಣಿಗೆ ಮಾತ್ರ ಹಳದಿ ಬಟ್ಟೆ ಕಟ್ಟಲಾಗಿತ್ತು ಹಾಗೂ ವಿಗ್ರಹಕ್ಕೆ ಗುಲಾಬಿ ಬಣ್ಣದ ಮಾಲೆ ಹಾಕಿ ಪೂಜೆ ಮಾಡಲಾಗಿತ್ತು.

ಇನ್ನು ಶುಕ್ರವಾರ ಸಂಜೆ ಇನ್ನೊಂದು ಚಿತ್ರ ಸೋಷಿಯಲ್‌ ಮೀಡಿಯಾಗಳಲ್ಲಿ ಬಿಡುಗಡೆ ಆಗಿ ವೈರಲ್‌ ಆಗಿದೆ. ಈ ಚಿತ್ರವು ವಿಗ್ರಹದ ಸಂಪೂರ್ಣ ದರ್ಶನ ಮಾಡಿಸಿದೆ. ವಿಗ್ರಹ ಕೆತ್ತುವ ಶೆಡ್‌ನಲ್ಲಿ ತೆಗೆದಿದ್ದು ಎನ್ನಲಾದ ಈ ಫೋಟೋದಲ್ಲಿ ರಾಮನ ಮಂದಸ್ಮಿತ ಮುಖ, ಇಡೀ ವಿಗ್ರಹ ಮತ್ತು ಸಂಪೂರ್ಣ ಪ್ರಭಾವಳಿ ನೋಡಬಹುದು.

ಇನ್ನು ರಾಮನ ಎರಡೂ ಕೈಯಲ್ಲಿ ಇಡಲಾಗುವ ಬಿಲ್ಲು ಮತ್ತು ಬಾಣವನ್ನು ಚಿನ್ನದಲ್ಲಿ ತಯಾರಿಸಲಾಗಿದ್ದು, ಅದನ್ನು ಪ್ರತ್ಯೇಕವಾಗಿ ವಿಗ್ರಹಕ್ಕೆ ಜೋಡಿಸಿರುವ ದೃಶ್ಯಗಳು ಕೂಡಾ ಶುಕ್ರವಾರ ಸಂಜೆಯೇ ಬಿಡುಗಡೆಯಾದ ಇನ್ನೊಂದು ಫೋಟೋದಲ್ಲಿ ಇದೆ.

ಪ್ರತಿಷ್ಠಾಪನೆಗೂ ಮುನ್ನ ವಿಗ್ರಹದ ಮುಖ ತೋರಿಸಬಹುದೇ?
ಸದ್ಯ ಬಿಡುಗಡೆಯಾಗಿರುವ ರಾಮನ ಮುಖ ತೋರಿಸುವ ಫೋಟೋವನ್ನು ವಿಗ್ರಹವನ್ನು ಕೆತ್ತುವ ಸಂದರ್ಭದಲ್ಲಿ ತೆಗೆದಿದ್ದು. 

ಈ ಸಮಯದಲ್ಲಿ ಯಾರು ಬೇಕಾದರೂ ನೋಡಬಹುದು. ಇದಕ್ಕೆ ಅಡ್ಡಿಯಲ್ಲ. ಆದರೆ ವಿಗ್ರಹವನ್ನು ತಂದು ಗರ್ಭಗುಡಿಯಲ್ಲಿ ಕೂರಿಸಿ ಅದಕ್ಕೆ ವಿವಿಧ ಪೂಜಾ ವಿಧಿವಿಧಾನಗಳನ್ನು ನಡೆಸುವ ಮುನ್ನ ಮುಖಕ್ಕೆ ಬಟ್ಟೆ ಕಟ್ಟಲಾಗುತ್ತದೆ. 

ಬಳಿಕ ಪ್ರಾಣ ಪ್ರತಿಷ್ಠಾಪನೆ ವೇಳೆ ಬೆಳ್ಳಿಯ ಬಟ್ಟಲಿನಲ್ಲಿ ಬೆಣ್ಣೆ ಇಟ್ಟುಕೊಂಡು, ಚಿನ್ನದ ಸೂಜಿಯಿಂದ ಬೆಣ್ಣೆ ತೆಗೆದುಕೊಂಡು ಮೂರ್ತಿಯ ಕಣ್ಣಿನ ರೇಖೆಯನ್ನು ಬಿಡಿಸುತ್ತಾರೆ. ಇದನ್ನು ಕಣ್ಣಿನ ದೃಷ್ಟಿ ಇಡುವುದು ಅಥವಾ ನೇತ್ರೋನ್ಬಿನನ ಎನ್ನಲಾಗುತ್ತದೆ. 

ಈ ಪ್ರಕ್ರಿಯೆ ಬಳಿಕ ಎಲ್ಲರಿಗೂ ವಿಗ್ರಹ ನೋಡುವ ಅವಕಾಶ ಲಭ್ಯವಾಗುತ್ತದೆ ಎಂದು ಧಾರ್ಮಿಕ ತಜ್ಞರು ಹೇಳಿದ್ದಾರೆ.

ಮೂಲವಿಗ್ರಹವೂ ಮುಖ್ಯ ವಿಗ್ರಹ ಪೀಠದಲ್ಲೇ ಪ್ರತಿಷ್ಠಾಪನೆ
1949ರಿಂದಲೂ ಪೂಜಿಸಿಕೊಂಡು ಬರಲಾಗುತ್ತಿರುವ 6 ಇಂಚು ಎತ್ತರಿರುವ ರಾಮಲಲ್ಲಾ ವಿರಾಜ್‌ಮಾನ್‌ ಮೂರ್ತಿ ಮತ್ತು ರಾಮನ ಸೋದರರಾದ ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಹನುಮಂತನ ವಿಗ್ರಹಗಳನ್ನು ಕೂಡಾ ನೂತನ ವಿಗ್ರಹ ಕೂರಿಸುವ ಪೀಠದಲ್ಲೇ ಕೂರಿಸಲಾಗುವುದು ಎಂದು ಮೂಲಗಳು ಹೇಳಿವೆ.

ಸದ್ಯ ಈ ವಿಗ್ರಹಗಳನ್ನು ತಾತ್ಕಾಲಿಕ ಮಂದಿರದಲ್ಲಿ ಇರಿಸಿ ಪೂಜಿಸಲಾಗುತ್ತಿದೆ. ಪ್ರಾಣಪ್ರತಿಷ್ಠಾಪನೆಯ ದಿನ ವಿಗ್ರಹಗಳನ್ನು ತಂದು ನೂತನ ಮಂದಿರ ಗರ್ಭಗುಡಿಯಲ್ಲಿ ಕೂರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ರಾಮ್‌ಲಲ್ಲಾ ವಿರಾಜ್‌ಮಾನ್‌ ಮೂರ್ತಿ ಕೇವಲ 6 ಇಂಚು ಎತ್ತರವಿದೆ. ಆದರೆ ರಾಮಲಲ್ಲಾನ ವಿಗ್ರಹ 4.5 ಅಡಿ ಎತ್ತರವಿದೆ. ಜೊತೆಗೆ ಅದನ್ನು ಎತ್ತರದ ಪೀಠದ ಮೇಲೆ ಕೂರಿಸಿರುವ ಕಾರಣ ಅದು ನೆಲದಿಂದ ಸುಮಾರು 8 ಅಡಿ ಎತ್ತರದಲ್ಲಿ ದರ್ಶನ ನೀಡಲಿದೆ.

ಇಂದು ಏನೇನು ಕಾರ್ಯಕ್ರಮ?
ಶನಿವಾರ ರಾಮಮಂದಿರದ ಗರ್ಭಗುಡಿಯನ್ನು ಸರಯೂ ನದಿಯ ಪವಿತ್ರ ನೀರಿನಿಂದ ಸ್ವಚ್ಛಗೊಳಿಸಿ, ವಿವಿಧ ನದಿಗಳಿಂದ ತೆಗೆದ ನೀರಿನಿಂದ ತುಂಬಿಸಲಾದ 81 ಕಲಶಗಳಿಂದ ಪವಿತ್ರಗೊಳಿಸಲಾಗುವುದು. ನಂತರ ವಾಸ್ತು ಶಾಂತಿ ಮತ್ತು ಅನ್ನಾಧಿವಾಸಗಳು ನಡೆಯಲಿವೆ.