ಸಾರಾಂಶ
ಈಶಾನ್ಯದ ಪುಟ್ಟ ರಾಜ್ಯ ಮಿಜೋರಾಂಗೆ ಸಂಪರ್ಕ ಕಲ್ಪಿಸುವ ಬೈರಾಬಿ-ಸೈರಾಂಗ್ ಹೊಸ ರೈಲು ಮಾರ್ಗ ಉದ್ಘಾಟನೆಯಾಗಿದೆ
ಮಧುಕರ ನಾರಾಯಣ
ಐಜ್ವಾಲ್ (ಮಿಜೋರಾಂ) : ಹಲವು ವಿಶೇಷತೆಗಳನ್ನು ಒಳಗೊಂಡಿರುವ, ಈಶಾನ್ಯದ ಪುಟ್ಟ ರಾಜ್ಯ ಮಿಜೋರಾಂಗೆ ಸಂಪರ್ಕ ಕಲ್ಪಿಸುವ ಬೈರಾಬಿ-ಸೈರಾಂಗ್ ಹೊಸ ರೈಲು ಮಾರ್ಗ ಉದ್ಘಾಟನೆಯಾಗಿದೆ. ಹಲವು ಸವಾಲುಗಳ ನಡುವೆ ಈ ಯೋಜನೆಯನ್ನು ಕೇವಲ 11 ವರ್ಷಗಳಲ್ಲಿ ಪೂರ್ಣಗೊಳಿಸಲಾಗಿದೆ. ಈ ಯೋಜನೆ ರೈಲ್ವೆ ಇಲಾಖೆಯ ತಾಂತ್ರಿಕ ಕೌಶಲಕ್ಕೆ ಸಾಕ್ಷಿಯಾಗಿದೆ.
ಅಸ್ಸಾಂ ರಾಜ್ಯದ ಸಿಲ್ಚಾರದಿಂದ ಮಿಜೋರಾಂನ ಸೈರಾಂಗ ವರೆಗೆ ಹೊಸ ರೈಲು ಮಾರ್ಗ ನಿರ್ಮಾಣವಾಗಿದ್ದರಿಂದ ಹಲವು ಅನುಕೂಲವಾಗಲಿದೆ. ಮಿಜೋರಾಂನ ರಾಜಧಾನಿ ಐಜ್ವಾಲ್ ಹಾಗೂ ಇತರ ಪ್ರದೇಶಗಳಿಗೆ ಕಡಿಮೆ ವೆಚ್ಚದಲ್ಲಿ ಸುಲಭ ಸಂಚಾರ ಸಾಧ್ಯವಾಗಲಿದೆ. ವ್ಯಾಪಾರ ಮತ್ತು ಸರಕು ಸಾಗಣೆ ಚಟುವಟಿಕೆಗೆ ಉತ್ತೇಜನ ಸಿಗಲಿದೆ. ಐಜ್ವಾಲ್ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಬಹುದಾಗಿದೆ. ಬೈರಾಬಿ– ಸೈರಾಂಗ್ ನಡುವೆ ರಸ್ತೆ ಸಂಚಾರಕ್ಕೆ 7 ಗಂಟೆ ತಗುಲಲಿದ್ದು, ರೈಲು ಮಾರ್ಗದಿಂದ 3 ಗಂಟೆಗೆ ಇಳಿಕೆಯಾಗಲಿದೆ.
ಮಿಜೋರಾಂನ ಅರಣ್ಯ ಉತ್ಪನ್ನಗಳು, ಹಸ್ತಕಲೆಗಳು, ತೋಟಗಾರಿಕೆ ಉತ್ಪನ್ನಗಳ ಸಾಗಾಟ ಸುಲಭವಾಗಲಿದೆ.
ಯೋಜನೆಯ ವಿಶೇಷತೆಗಳು: ಸಂಪೂರ್ಣ ರೈಲು ಮಾರ್ಗವು ದಟ್ಟ ಅರಣ್ಯ, ಕಠಿಣ ಗುಡ್ಡಗಾಡು ಮತ್ತು ಆಳವಾದ ಕಣಿವೆಗಳ ಮೂಲಕ ಸಾಗುತ್ತದೆ. 70 ಮೀ. ಗಿಂತಲೂ ಎತ್ತರದ 6 ಸೇತುವೆಗಳಿವೆ. ಗರಿಷ್ಠ 114 ಮೀ. ಎತ್ತರ (ಕುತುಬ್ ಮಿನಾರ್‌ಗಿಂತ ಹೆಚ್ಚು)ದ ಸೇತುವೆಯೂ ಸೇರಿದೆ. ಅತ್ಯಂತ ಕಠಿಣ ಭೂಪರಿಸ್ಥಿತಿಯುಳ್ಳ 45 ಸುರಂಗ ಮಾರ್ಗಗಳಿವೆ. ಎಲ್ಲ ಸುರಂಗಗಳಲ್ಲಿ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ಅಳವಡಿಸಲಾಗಿದೆ.
ಒಟ್ಟೂ 51.38 ಕಿಮೀ ಉದ್ದದ ಮಾರ್ಗದಲ್ಲಿ 11.78 ಕಿಮೀ (ಶೇ. 23) ಸೇತುವೆ ಇದೆ. 88 ಸಣ್ಣ ಸೇತುವೆ, 55 ದೊಡ್ಡ ಸೇತುವೆ, 10 ರಸ್ತೆ ಮೇಲ್ಸೇತುವೆ ಸೇರಿ 153 ಸೇತುವೆಗಳಿವೆ. ಮಾರ್ಗದ ಶೇ. 31ರಷ್ಟು ಭಾಗ ಅಂದರೆ 15.885 ಕಿಮೀ ಸುರಂಗ ಮಾರ್ಗ ಒಳಗೊಂಡಿದೆ. 48 ಸುರಂಗಗಳಲ್ಲಿ 1.868 ಕಿಮೀ ಸುರಂಗ ಅತಿ ಉದ್ದದ್ದಾಗಿದೆ. ಸುರಂಗ ಮುಖಭಾಗಗಳಲ್ಲಿ ಮಿಜೋರಾಂ ಸಂಸ್ಕೃತಿ ಪ್ರತಿಬಿಂಬಿಸುವ ಕಲಾತ್ಮಕ ಚಿತ್ರಗಳಿವೆ. ಕೆಲವೆಡೆ 65 ಮೀ ಎತ್ತರದ ವರೆಗೆ ತಡೆಗೋಡೆ ನಿರ್ಮಿಸಲಾಗಿದೆ. ಮಳೆಯಿಂದಾಗಿ ಭೂಕುಸಿತ ತಡೆಯಲು ಗುಡ್ಡಗಳನ್ನು ಸೂಕ್ತ ರಕ್ಷಣಾ ಯೋಜನೆಗಳೊಂದಿಗೆ ಬಲಪಡಿಸಲಾಗಿದೆ.
ರೈಲು ಜಾಲಕ್ಕೆ ಸಂಪರ್ಕ: 2014ರ ನವೆಂಬರ್ 29ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಿಜೋರಾಂನಲ್ಲಿ ಈ ಯೋಜನೆಗೆ ಶಿಲಾನ್ಯಾಸ ಮಾಡಿದರು.
2016ರ ಮಾರ್ಚ್ 21ರಂದು ಅಸ್ಸಾಂನಿಂದ ಬೈರಾಬಿ ವರೆಗೆ ರೈಲು ಮಾರ್ಗವನ್ನು ಬ್ರಾಡ್ ಗೇಜ್‌ಗೆ ಪರಿವರ್ತನೆ ಮಾಡಲಾಯಿತು. ಮಿಜೋರಾಂನಲ್ಲಿ ಬೈರಾಬಿಗೆ ಮೊದಲ ಸರಕು ರೈಲು ತಲುಪಿತು. 2025ರ ಜೂ. 10ರಂದು ಹೋರ್ಟೋಕಿಯಿಂದ ಸೈರಾಂಗ್ ತನಕದ ಅಂತಿಮ ಹಂತ 51.38 ಕಿ.ಮೀ ಮಾರ್ಗವನ್ನು ಪೂರ್ಣಗೊಳಿಸಲಾಯಿತು. ಇದರೊಂದಿಗೆ ಐಜಾಲ್ ನಗರವು ಮೊದಲ ಬಾರಿಗೆ ಭಾರತೀಯ ರೈಲ್ವೆ ಜಾಲಕ್ಕೆ ಸಂಪರ್ಕ ಹೊಂದಿತು. ಶೀಘ್ರದಲ್ಲೇ ಈ ಮಾರ್ಗವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ತಾಂತ್ರಿಕ ವಿವರ: ಒಟ್ಟು ಯೋಜನೆ ಉದ್ದ – 51.38 ಕಿ.ಮೀ. ವೇಗ ಸಾಮರ್ಥ್ಯ – 100 ಕಿ.ಮೀ./ಗಂಟೆ ಒಟ್ಟು ನಿಲ್ದಾಣಗಳು – 4 (ಹೋರ್ಟೋಕಿ, ಕವನ್‌ಪುವಿ, ಮುಆಲ್ಖಾಂಗ್ ಮತ್ತು ಸೈರಾಂಗ್ – ಎಲ್ಲವೂ ಮಿಜೋರಾಂನಲ್ಲಿ) ಯೋಜನೆಯ ಒಟ್ಟು ವೆಚ್ಚ – ₹8071 ಕೋಟಿ