ಸಾರಾಂಶ
ಅಮೆರಿಕದ ತೆರಿಗೆ ಬಾಂಬ್ ಬೆನ್ನಲ್ಲೇ ಕಮ್ಯುನಿಸ್ಟ್ ಚೀನಾ ಇದೀಗ ಭಾರತದತ್ತ ಸ್ನೇಹದ ಹಸ್ತ ಚಾಚಿದೆ. ಏಕಾಧಿಕಾರ ಮತ್ತು ಪವರ್ ಪಾಲಿಟಿಕ್ಸ್ ಅನ್ನು ನವದೆಹಲಿ ಮತ್ತು ಬೀಜಿಂಗ್ ಜತೆ ಸೇರಿಕೊಂಡು ಎದುರಿಸುವ ಕಾಲ ಇದಾಗಿದೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.
ಬೀಜಿಂಗ್: ಅಮೆರಿಕದ ತೆರಿಗೆ ಬಾಂಬ್ ಬೆನ್ನಲ್ಲೇ ಕಮ್ಯುನಿಸ್ಟ್ ಚೀನಾ ಇದೀಗ ಭಾರತದತ್ತ ಸ್ನೇಹದ ಹಸ್ತ ಚಾಚಿದೆ. ಏಕಾಧಿಕಾರ ಮತ್ತು ಪವರ್ ಪಾಲಿಟಿಕ್ಸ್ ಅನ್ನು ನವದೆಹಲಿ ಮತ್ತು ಬೀಜಿಂಗ್ ಜತೆ ಸೇರಿಕೊಂಡು ಎದುರಿಸುವ ಕಾಲ ಇದಾಗಿದೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.
ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ ಸಭೆ ಬಳಿಕ ಶುಕ್ರವಾರ ಮಾತನಾಡಿದ ಅವರು, ಡ್ರ್ಯಾಗನ್ (ಚೀನಾ) ಮತ್ತು ಆನೆ (ಭಾರತ) ನರ್ತಿಸುವಂತೆ ಮಾಡುವುದು ಈಗಿನ ಸಂದರ್ಭದಲ್ಲಿ ಸೂಕ್ತ ಆಯ್ಕೆಯಾಗಿದೆ. ಪರಸ್ಪರ ವಿರೋಧದ ಬದಲು ಸಹಭಾಗಿತ್ವ ಪ್ರದರ್ಶಿಸುವುದು ಎರಡೂ ದೇಶಗಳ ಮೂಲಭೂತ ಹಿತದೃಷ್ಟಿಯಿಂದ ಲಾಭಕರ. ಏಷ್ಯಾದ ಎರಡು ಅತಿದೊಡ್ಡ ಆರ್ಥಿಕತೆಗಳು ಒಂದಾದರೆ ಗ್ಲೋಬಲ್ ಸೌಥ್ (ಬೆಳೆಯುತ್ತಿರುವ ದೇಶಗಳು) ನ ಭವಿಷ್ಯ ಉಜ್ವಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಪರಸ್ಪರ ಕಿತ್ತಾಡುವುದಕ್ಕಿಂತ ಪರಸ್ಪರ ಬೆಂಬಲಕ್ಕೆ ನಿಲ್ಲಲು ನಮ್ಮ ಮುಂದೆ ಅನೇಕ ಕಾರಣಗಳಿವೆ ಎಂದು ಚೀನಾ ಕಮ್ಯುನಿಸ್ಟ್ ಪಕ್ಷದ ಪ್ಯಾಲಿಟ್ ಬ್ಯುರೋದ ಸದಸ್ಯರೂ ಆಗಿರುವ ವಾಂಗ್ ಹೇಳಿದ್ದಾರೆ. 2020ರ ಗಲ್ವಾನ್ ಕಣಿವೆ ಗಲಾಟೆ ಬಳಿಕ ಭಾರತ ಮತ್ತು ಚೀನಾದ ಸಂಬಂಧ ಹದಗೆಟ್ಟಿತ್ತು. ಕಳೆದ ವರ್ಷಾಂತ್ಯದಿಂದ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಕೊಂಚ ಸುಧಾರಣೆ ಕಂಡಿತ್ತು.