ಎಲ್ಲ ರೀತಿ ಯುದ್ಧಕ್ಕೂನಾವು ಸಿದ್ಧ - ಬೆದರಿಕೆ, ಹೆದರಿಕೆಗೆಲ್ಲ ಜಗ್ಗೋದಿಲ್ಲ: ಚೀನಾ

| N/A | Published : Mar 06 2025, 01:31 AM IST / Updated: Mar 06 2025, 05:00 AM IST

ಸಾರಾಂಶ

 ಶೇ.20ರಷ್ಟು ಹೆಚ್ಚುವರಿ ಸುಂಕ ಹೇರುವ   ಟ್ರಂಪ್‌ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚೀನಾ

‘ಬೆದರಿಕೆ, ಹೆದರಿಕೆ ನಮ್ಮ ಬಳಿ ನಡೆಯಲ್ಲ. ಅಮೆರಿಕವು ಯುದ್ಧವನ್ನು ಬಯಸಿದರೆ, ಅದು ತೆರಿಗೆ, ವ್ಯಾಪಾರ ಅಥವಾ ಇನ್ಯಾವುದೇ ಯುದ್ಧವಾದರೂ ನಾವು ಕೊನೆಯ ತನಕ ಹೋರಾಡಲು ಸಿದ್ಧ’  

 ಬೀಜಿಂಗ್‌: ತನ್ನ ಉತ್ಪನ್ನಗಳ ಮೇಲೆ ಶೇ.20ರಷ್ಟು ಹೆಚ್ಚುವರಿ ಸುಂಕ ಹೇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚೀನಾ, ‘ಬೆದರಿಕೆ, ಹೆದರಿಕೆ ನಮ್ಮ ಬಳಿ ನಡೆಯಲ್ಲ. ಅಮೆರಿಕವು ಯುದ್ಧವನ್ನು ಬಯಸಿದರೆ, ಅದು ತೆರಿಗೆ, ವ್ಯಾಪಾರ ಅಥವಾ ಇನ್ಯಾವುದೇ ಯುದ್ಧವಾದರೂ ನಾವು ಕೊನೆಯ ತನಕ ಹೋರಾಡಲು ಸಿದ್ಧ’ ಎಂದು ಅಮೆರಿಕಕ್ಕೆ ನೇರ ಪಂಥಾಹ್ವಾನ ನೀಡಿದೆ.

ಚೀನಾ ರಫ್ತು ಮಾಡುವ ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ಹೇರುವ ಕುರಿತು ಟ್ರಂಪ್‌ ಘೋಷಣೆ ಬೆನ್ನಲ್ಲೇ ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು, ‘ಫೆಂಟನಿಲ್ ಔಷಧ ವಿಷಯವು ಅಮೆರಿಕಕ್ಕೆ ಸುಂಕವನ್ನು ಹೆಚ್ಚಿಸಲು ಒಂದು ನೆಪವಷ್ಟೇ. ಅಮೆರಿಕದಲ್ಲಿ ಫೆಂಟನಿಲ್ ಬಿಕ್ಕಟ್ಟಿಗೆ ಅಮೆರಿಕವೇ ಹೊರತೂ ಬೇರಾರೂ ಕಾರಣರಲ್ಲ. ಆದರೆ ಅಮೆರಿಕವು ಚೀನಾದ ಮೇಲೆ ಆರೋಪ ಹೊರಿಸಲು ಯತ್ನಿಸುತ್ತಿದೆ’ ಎಂದು ಕಿಡಿಕಾರಿದ್ದಾರೆ.

ಜೊತೆಗೆ, ‘ಸುಂಕ ಹೆಚ್ಚಳದ ಮೂಲಕ ಚೀನಾವನ್ನು ಮೇಲೆ ಬ್ಲ್ಯಾಕ್‌ಮೇಲ್ ಮಾಡುವ ಮತ್ತು ಒತ್ತಡ ಹೇರುವ ಪ್ರಯತ್ನವನ್ನು ಮಾಡುತ್ತಿದೆ. ಆದರೆ ಬೆದರಿಕೆ ನಮ್ಮನ್ನು ಹೆದರಿಸುವುದಿಲ್ಲ. ಇದು ಚೀನಾದೊಂದಿಗೆ ಸರಿಯಾದ ರೀತಿಯಲ್ಲಿ ವ್ಯವಹರಿಸುವ ಮಾರ್ಗವಲ್ಲ. ಅಮೆರಿಕ ಬಯಸುವ ಯಾವುದೇ ಯುದ್ಧವಾದರೂ ಕೊನೆಯವರೆಗೆ ಹೋರಾಡಲು ಸಿದ್ಧ’ ಎಂದಿದ್ದಾರೆ.

ಚೀನಾವು ಅಮೆರಿಕದ ಉತ್ಪನ್ನಗಳಿಗೆ ಭಾರೀ ಪ್ರಮಾಣದ ತೆರಿಗೆ ಹೇರುತ್ತಿದೆ ಎಂದು ಆರೋಪಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನಾದ ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ಹೇರುವ ನಿರ್ಧಾರವನ್ನು ಮಂಗಳವಾರ ಪ್ರಕಟಿಸಿದ್ದರು.