ಸಾರಾಂಶ
ನ್ಯೂಯಾರ್ಕ್/ವಾಷಿಂಗ್ಟನ್: ಭಾರತ, ಚೀನಾ ಸೇರಿ ಹಲವು ದೇಶಗಳ ವಿರುದ್ಧ ತೆರಿಗೆಗೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಏ.2ರಿಂದಲೇ ಈ ದೇಶಗಳ ಮೇಲೆ ರೆಸಿಪ್ರೋಕಲ್ ತೆರಿಗೆ (ಪ್ರತಿ ತೆರಿಗೆ) ಹಾಕುವುದಾಗಿ ಘೋಷಿಸಿದ್ದಾರೆ.
ಟ್ರಂಪ್ ಅವರ ಈ ನಿರ್ಧಾರದಿಂದಾಗಿ ಅಮೆರಿಕಕ್ಕೆ ರಫ್ತು ಆಗುವ ಭಾರತದ ಉತ್ಪನ್ನಗಳು ಅಮೆರಿಕನ್ನರಿಗೆ ದುಬಾರಿಯಾಗುವ ಮೂಲಕ ಭಾರತೀಯ ಉತ್ಪನ್ನಗಳಿಗೆ ಬೇಡಿಕೆ ಕುಸಿಯುವ ಆತಂಕ ಮನೆಮಾಡಿದೆ.
ಮಂಗಳವಾರ ಅಮೆರಿಕದ ಕಾಂಗ್ರೆಸ್‌ನ ಜಂಟಿ ಕಲಾಪವನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಸುಂಕ ಹೇರಿಕೆ ಘೋಷಣೆ ಮಾಡಿದ್ದಾರೆ. ಅನ್ಯ ದೇಶಗಳು ನಮ್ಮ ವಿರುದ್ಧ ದಶಕಗಳಿಂದ ಹೆಚ್ಚಿನ ತೆರಿಗೆ ವಿಧಿಸುತ್ತಾ ಬಂದಿವೆ. ಇದೀಗ ನಮ್ಮ ಸರದಿ. ನಾವೀಗ ಆ ದೇಶಗಳ ವಿರುದ್ಧ ತೆರಿಗೆ ಹಾಕುತ್ತೇವೆ. ಯುರೋಪಿಯನ್ ಯೂನಿಯನ್, ಚೀನಾ, ಬ್ರೆಜಿಲ್, ಭಾರತ, ಮೆಕ್ಸಿಕೋ, ಕೆನಡಾ ಮತ್ತಿತರ ದೇಶಗಳು ನಾವು ಅವರ ಮೇಲೆ ವಿಧಿಸುವುದಕ್ಕಿಂತ ಹೆಚ್ಚಿನ ತೆರಿಗೆಯನ್ನು ನಮ್ಮ ಉತ್ಪನ್ನಗಳ ಮೇಲೆ ವಿಧಿಸುತ್ತಿವೆ. ಭಾರತವು ಅಮೆರಿಕದ ವಾಹನಗಳ ಮೇಲೆ ಶೇ.100ಕ್ಕಿಂತಲೂ ಹೆಚ್ಚಿನ ತೆರಿಗೆ ವಿಧಿಸುತ್ತಿದೆ. ಇದು ನ್ಯಾಯಸಮ್ಮತವಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಚೀನಾವು ನಮ್ಮ ಉತ್ಪನ್ನಗಳ ಮೇಲೆ ಸರಾಸರಿ ದುಪ್ಪಟ್ಟು ಹಾಗೂ ದಕ್ಷಿಣ ಕೊರಿಯಾವು ಸರಾಸರಿ ನಾಲ್ಕುಪಟ್ಟು ಹೆಚ್ಚು ತೆರಿಗೆ ವಿಧಿಸುತ್ತಿದೆ. ನಾಲ್ಕು ಪಟ್ಟು ಅಂದರೆ ಯೋಚನೆ ಮಾಡಿ. ಆದರೂ ನಾವು ದಕ್ಷಿಣ ಕೊರಿಯಾಗೆ ಮಿಲಿಟರಿ ನೆರವು ಸೇರಿ ಬೇರೆ ರೀತಿಯಲ್ಲಿ ಸಹಾಯ ನೀಡುತ್ತಿದ್ದೇವೆ. ಇದು ಸರಿಯಾದ ವ್ಯವಸ್ಥೆಯಲ್ಲ ಎಂದರು.
ಪ್ರತಿ ತೆರಿಗೆಯು ಏ.2ರಿಂದಲೇ ಜಾರಿಗೆ ಬರಲಿದೆ. ಅವರು ನಮಗೆ ಎಷ್ಟು ತೆರಿಗೆ ಹಾಕುತ್ತಾರೋ ಅವರ ಮೇಲೂ ಅಷ್ಟೇ ತೆರಿಗೆ ಹಾಕುತ್ತೇವೆ. ಒಂದು ವೇಳೆ ಅವರು ಹಣಕಾಸೇತರ ತೆರಿಗೆ ಹಾಕಿ ಅವರ ಮಾರುಕಟ್ಟೆಯಿಂದ ನಮ್ಮನ್ನು ಹೊರಗಿಟ್ಟರೆ, ನಮ್ಮ ಮಾರುಕಟ್ಟೆಯಿಂದ ಅವರನ್ನು ಹೊರಗಿಡಲು ನಾವೂ ಹಣಕಾಸೇತರ ಅಡೆತಡೆಗಳನ್ನು ಸೃಷ್ಟಿಸುತ್ತೇವೆ ಎಂದರು.
ಈ ರೀತಿಯ ತೆರಿಗೆಯಿಂದ ನಾವು ಶತಕೋಟಿಯಷ್ಟು ಡಾಲರ್‌ಗಳನ್ನು ಉಳಿಸುತ್ತೇವೆ. ಇದು ಈವರೆಗೆ ನೋಡದ ರೀತಿಯಲ್ಲಿ ನಮ್ಮಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ. ನಾನು ಇದನ್ನು ಚೀನಾ ವಿರುದ್ಧ ಮಾಡಿದ್ದೇನೆ, ಇತರರ ವಿರುದ್ಧವೂ ಮಾಡಿದ್ದೇನೆ. ಆದರೆ ಬೈಡೆನ್ ಸರ್ಕಾರ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.
ಪ್ರತಿತೆರಿಗೆ ಅಂದರೆ ಏನು?ವಿದೇಶದಿಂದ ಬರುವ ಉತ್ಪನ್ನಗಳಿಗೆ ಪ್ರತಿ ದೇಶವೂ ಸುಂಕ ವಿಧಿಸುತ್ತದೆ. ಸಾಮಾನ್ಯವಾಗಿ ಇದು ದೇಶದಿಂದ ದೇಶಕ್ಕೆ ಬೇರೆ ಬೇರೆ ದರದಲ್ಲಿರುತ್ತದೆ. ಅಮೆರಿಕದಿಂದ ಬರುವ ಉತ್ಪನ್ನಗಳಿಗೆ ಭಾರತ ದುಬಾರಿ ಸುಂಕ ಹೇರುತ್ತಿದೆ, ಆದರೆ ಭಾರತದ ಉತ್ಪನ್ನಗಳಿಗೆ ಅಮೆರಿಕ ಕಡಿಮೆ ಸುಂಕ ವಿಧಿಸುತ್ತಿದೆ ಎಂಬುದು ಟ್ರಂಪ್ ವಾದ. ಹೀಗಾಗಿ ತಮ್ಮ ದೇಶದ ಉತ್ಪನ್ನಗಳಿಗೆ ದುಬಾರಿ ಸುಂಕ ನಿಗದಿಗೊಳಿಸಿರುವ ದೇಶಗಳ ವಿರುದ್ಧ ಟ್ರಂಪ್ ‘ರೆಸಿಪ್ರೋಕಲ್’ (ಪ್ರತಿ ತೆರಿಗೆ) ಹೇರುತ್ತಿದ್ದಾರೆ.
ಭಾರತಕ್ಕೆ ವಾರ್ಷಿಕ 60000 ಕೋಟಿ ಹೊರೆ ಸಂಭವ
ನವದೆಹಲಿ: ಭಾರತದ ಮೇಲೆ ಏ.2ರಿಂದ ಹೆಚ್ಚುವರಿ ತೆರಿಗೆ ವಿಧಿಸುವ ಅಮೆರಿಕ ನಿರ್ಧಾರದಿಂದ ಭಾರತಕ್ಕೆ ವಾರ್ಷಿಕ ಹೆಚ್ಚುವರಿ 60000 ಕೋಟಿ ರು. ತೆರಿಗೆ ಹೊರೆ ಬೀಳಬಹುದು ಎಂದು ಅಂದಾಜಿಸಲಾಗಿದೆ. ಅದರಲ್ಲೂ ಅಮೆರಿಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನ ರಫ್ತು ಮಾಡುವ ಕೃಷಿ, ಆಟೋಮೊಬೈಲ್, ಆಭರಣ, ಔಷಧ ವಲಯದ ಮೇಲೇ ಹೆಚ್ಚಿನ ಹೊರೆ ಬೀಳಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. 2024ರಲ್ಲಿ ಭಾರತವು ಅಮೆರಿಕಕ್ಕೆ 6 ಲಕ್ಷ ಕೋಟಿ ರು.ಗೂ ಹೆಚ್ಚಿನ ಮೌಲ್ಯದ ಉತ್ಪನ್ನ ರಫ್ತು ಮಾಡಿತ್ತು.
ಟ್ರಂಪ್ ತೆರಿಗೆ ದಾಳಿ ತಡೆಗೆ ಭಾರತ ಸಂಧಾನ ಮಾರ್ಗ
ನವದೆಹಲಿ: ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಿಸಿರುವ ತೆರಿಗೆ ದಾಳಿ ತಡೆಯಲು ಭಾರತ ಸಂಧಾನ ಮಾರ್ಗ ಅನುಸರಿಸುವ ಸಾಧ್ಯತೆ ಇದೆ. ಇತ್ತೀಚಿನ ಮೋದಿ ಅಮೆರಿಕ ಭೇಟಿ ವೇಳೆ ಉಭಯ ದೇಶಗಳು ವರ್ಷಾಂತ್ಯದ ವೇಳೆ ಬಹು ವಲಯ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಒಮ್ಮತಕ್ಕೆ ಬಂದಿದ್ದವು. ಜೊತೆಗೆ 2030ರ ವೇಳೆಗೆ ಉಭಯ ದೇಶಗಳ ವಹಿವಾಟನ್ನು 500 ಶತಕೋಟಿ ಡಾಲರ್‌ಗೆ ತಲುಪಿಸುವ ಇರಾದೆಯನ್ನೂ ವ್ಯಕ್ತಪಡಿಸಿದ್ದವು. ಜೊತೆಗೆ ಅಮೆರಿಕದ ಹಲವು ಉತ್ನನ್ನಗಳಿಗೆ ಭಾರತ ಸುಂಕ ಕಡಿತ ಕೂಡಾ ಮಾಡಿತ್ತು. ಇದರ ಭಾಗವಾಗಿ ಮುಂದಿನ ದಿನಗಳಲ್ಲಿ ಅಮೆರಿಕದ ಜೊತೆ ಮತ್ತಷ್ಟು ಮಾತುಕತೆ ನಡೆಸಿ, ತೆರಿಗೆ ದಾಳಿ ತಪ್ಪಿಸುವ ಮಾರ್ಗವನ್ನು ಸರ್ಕಾರ ಅನ್ವೇಷಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
- ಕೆನಡಾ, ಮೆಕ್ಸಿಕೋ, ಚೀನಾದ ಬಳಿಕ ಭಾರತಕ್ಕೆ ಡೊನಾಲ್ಡ್ ಶಾಕ್- ಅಮೆರಿಕಕ್ಕೆ ಭಾರತ ಉತ್ಪನ್ನಗಳ ರಫ್ತು ದುಬಾರಿಯಾಗುವುದು ನಿಶ್ಚಿತ- ತನ್ಮೂಲಕ ಭಾರತೀಯ ವಸ್ತುಗಳಿಗೆ ಅಮೆರಿಕದಲ್ಲಿ ಬೇಡಿಕೆ ಕುಸಿತ
ಏ.1 ಮೂರ್ಖರ ದಿನ, ಅದಕ್ಕೇ 2ರಿಂದ ಜಾರಿ!
ಭಾರತ ಸೇರಿ ವಿವಿಧ ದೇಶಗಳ ಮೇಲೆ ಪ್ರತಿ ತೆರಿಗೆಯನ್ನು ಏ.2ರಿಂದಲೇ ಹೇರಲು ಯಾಕೆ ನಿರ್ಧರಿಸಿದೆ ಎಂಬುದಕ್ಕೂ ಟ್ರಂಪ್ ಕಾರಣ ಕೊಟ್ಟಿದ್ದಾರೆ. ನಾವು ಏ.1ರಿಂದಲೇ ಪ್ರತಿ ತೆರಿಗೆ ಜಾರಿಗೆ ಉದ್ದೇಶಿಸಿದ್ದೆವು. ಆದರೆ ಏ.1 ಮೂರ್ಖರ ದಿನ ಆಗಿರುವ ಹಿನ್ನೆಲೆಯಲ್ಲಿ ವಿನಾಕಾರಣ ಟೀಕೆ ಬೇಡ ಎಂಬ ಕಾರಣಕ್ಕೆ ಏ.2ರಿಂದಲೇ ಪ್ರತಿತೆರಿಗೆ ಜಾರಿ ಮಾಡಲು ನಿರ್ಧರಿಸಿದೆವು ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಭಾರತಕ್ಕೆ ₹60 ಸಾವಿರ ಕೋಟಿ ಹೊರೆ ಸಾಧ್ಯತೆ
ನವದೆಹಲಿ: ಭಾರತದ ಮೇಲೆ ಏ.2ರಿಂದ ಹೆಚ್ಚುವರಿ ತೆರಿಗೆ ವಿಧಿಸುವ ಅಮೆರಿಕ ನಿರ್ಧಾರದಿಂದ ಭಾರತಕ್ಕೆ ವಾರ್ಷಿಕ ಹೆಚ್ಚುವರಿ 60000 ಕೋಟಿ ರು. ತೆರಿಗೆ ಹೊರೆ ಬೀಳಬಹುದು ಎಂದು ಅಂದಾಜಿಸಲಾಗಿದೆ.--
ಭಾರತದ ನಡೆ ಏನು?
- ಅಮೆರಿಕ ಜೊತೆ ಮುಂದಿನ ದಿನಗಳಲ್ಲಿ ಮಾತುಕತೆ ನಡೆಸುವುದು- ಚೀನಾ, ಮತ್ತಿತರ ದೇಶಗಳ ರೀತಿ ಸಂಘರ್ಷ ಬದಲು ಸಂಧಾನ ಮಾರ್ಗ- ತೆರಿಗೆ ದಾಳಿ ತಪ್ಪಿಸುವುದು ಹೇಗೆಂದು ಮಾರ್ಗ ಹುಡುಕಲು ಚಿಂತನೆ