ಬಾಂಗ್ಲನ್ನರಿಗೆ ಆಶ್ರಯ: ದೀದಿ ಹೇಳಿಕೆಗೆ ಬಾಂಗ್ಲಾ ಆಕ್ರೋಶ

| Published : Jul 25 2024, 01:25 AM IST

ಸಾರಾಂಶ

200ಕ್ಕೂಹೆಚ್ಚು ಜನ ಸಾವಿಗೀಡಾಗಿರುವ ಹಿಂಸಾಚಾರ ಪೀಡಿತ ಬಾಂಗ್ಲಾದೇಶದಿಂದ ನಿರಾಶ್ರಿತರು ಬಂದರೆ ಅವರಿಗೆ ಪ.ಬಂಗಾಳದಲ್ಲಿ ಆಶ್ರಯ ನೀಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆ ವಿವಾದಕ್ಕೀಡಾಗಿದೆ.

ಕೋಲ್ಕತಾ/ಢಾಕಾ: 200ಕ್ಕೂಹೆಚ್ಚು ಜನ ಸಾವಿಗೀಡಾಗಿರುವ ಹಿಂಸಾಚಾರ ಪೀಡಿತ ಬಾಂಗ್ಲಾದೇಶದಿಂದ ನಿರಾಶ್ರಿತರು ಬಂದರೆ ಅವರಿಗೆ ಪ.ಬಂಗಾಳದಲ್ಲಿ ಆಶ್ರಯ ನೀಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆ ವಿವಾದಕ್ಕೀಡಾಗಿದೆ. ಈ ಹೇಳಿಕೆ ಬಗ್ಗೆ ಬಾಂಗ್ಲಾದೇಶ ಸರ್ಕಾರವು ಢಾಕಾದಲ್ಲಿನ ಭಾರತೀಯ ರಾಯಭಾರ ಕಚೇರಿಗೆ ಆಕ್ಷೇಪ ಸಲ್ಲಿಸಿದೆ.‘ಬಾಂಗ್ಲಾದೇಶದ ಆಂತರಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಮತಾ ನೀಡಿದ ಹೇಳಿಕೆ ತಪ್ಪಿನಿಂದ ಕೂಡಿದೆ ಹಾಗೂ ಪ್ರಚೋದನಕಾರಿಯಾಗಿದೆ. ನಮ್ಮ ದೇಶದಲ್ಲಿ ಶಾಂತಿ ಮರುಸ್ಥಾಪನೆಗೆ ಯತ್ನಿಸುತ್ತಿದ್ದೇವೆ. ಈ ವೇಳೆ ಮಮತಾ ಬ್ಯಾನರ್ಜಿ ಅವರು ವಿದ್ಯಾರ್ಥಿಗಳ ಸಾವು ಹಾಗೂ ಇತರ ವಿಷಯಗಳ ಬಗ್ಗೆ ನೀಡಿರುವ ಹೇಳಿಕೆ ದಿಕ್ಕು ತಪ್ಪಿಸುವಂತಿದೆ. ಆಶ್ರಯ ನೀಡುವ ಬಗ್ಗೆ ಅವರು ಹೇಳಿರುವುದು ಆತಂಕಕಾರಿ. ಈ ಸಂದರ್ಭ ಬಳಸಿ ಉಗ್ರರು ಹಾಘೂ ಸಮಾಜಘಾತಕರು ಅಲ್ಲಿ ಸೇರಿಕೊಳ್ಳಬಹುದು’ ಎಂದು ಬಾಂಗ್ಲಾ ಸರ್ಕಾರ ಕಿಡಿಕಾರಿದೆ.ಜು.21ರಂದು ಹೇಳಿಕೆ ನೀಡಿದ್ದ ಮಮತಾ, ‘ನೆರೆಯ ದೇಶದಿಂದ ಸಂಕಷ್ಟದಲ್ಲಿರುವ ಜನರಿಗೆ ಬಂಗಾಳದ ಬಾಗಿಲಿಗೆ ಬಂದರೆ ನಮ್ಮ ಬಾಗಿಲು ತೆರೆದಿರುತ್ತದೆ ಹಾಗೂ ಅವರೊಗೆ ಆಶ್ರಯ ನೀಡುತ್ತದೆ’ ಎಂದಿದ್ದರು.

ಏತನ್ಮಧ್ಯೆ, ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ಅವರು ಬ್ಯಾನರ್ಜಿಯವರ ಅಭಿಪ್ರಾಯದ ಬಗ್ಗೆ ವರದಿ ಕೇಳಿದ್ದಾರೆ. ‘ಬಾಹ್ಯ ವ್ಯವಹಾರಗಳು ಕೇಂದ್ರಕ್ಕೆ ಸಂಬಂಧಿಸಿದ್ದು. ರಾಜ್ಯಗಳು ಮಾತನಾಡುವುದು ಸಾಂವಿಧಾನಿಕ ಉಲ್ಲಂಘನೆ’ ಎಂದು ರಾಜಭವನ ಹೇಳಿದೆ.