ಪಂಜಾಬ್‌ ಗವರ್ನರ್‌ ಬನ್ವಾರಿಲಾಲ್ ಪುರೋಹಿತ್‌ ರಾಜೀನಾಮೆ

| Published : Feb 04 2024, 01:32 AM IST / Updated: Feb 04 2024, 11:37 AM IST

ಸಾರಾಂಶ

ಪಂಜಾಬ್ ರಾಜ್ಯಪಾಲ ಹಾಗೂ ಚಂಡೀಗಢದ ಆಡಳಿತಾಧಿಕಾರಿ ಬನ್ವಾರಿಲಾಲ್ ಪುರೋಹಿತ್ ಅವರು ದಿಢೀರನೇ ತಮ್ಮ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ.

ಚಂಡೀಗಢ: ಪಂಜಾಬ್ ರಾಜ್ಯಪಾಲ ಹಾಗೂ ಚಂಡೀಗಢದ ಆಡಳಿತಾಧಿಕಾರಿ ಬನ್ವಾರಿಲಾಲ್ ಪುರೋಹಿತ್ ಅವರು ದಿಢೀರನೇ ತಮ್ಮ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ.

ಮಸೂದೆಗಳಿಗೆ ಸಹಿ ಹಾಕದೇ ವಿಳಂಬ ಮಾಡುತ್ತಿದ್ದಾರೆ ಎಂದು ಪಂಜಾನ್‌ನ ಆಪ್‌ ಸರ್ಕಾರ ಬನ್ವಾರಿಲಾಲ್‌ ವಿರುದ್ಧ ಆರೋಪ ಮಾಡಿತ್ತು. ಹೀಗಾಗಿ ಇತ್ತೀಚೆಗೆ ಸರ್ಕಾರ ಹಾಗೂ ಬನ್ವಾರಿಲಾಲ್‌ ಮಧ್ಯೆ ತೀವ್ರ ಜಟಾಪಟಿ ನಡೆದಿತ್ತು. 

ಅಲ್ಲದೆ, ಮಸೂದೆಗೆ ಸಹಿ ವಿಳಂಬ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಕೂಡ ಪುರೋಹಿತ್‌ಗೆ ಚಾಟಿ ಬೀಸಿತ್ತು. ಅದರ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ.

ಅದಾಗ್ಯೂ ತಮ್ಮ ವೈಯಕ್ತಿಕ ಕಾರಣದಿಂದಾಗಿ ರಾಜೀನಾಮೆ ನೀಡಿದ್ದಾಗಿ ಅವರು ಘೋಷಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿರುವ ಪುರೋಹಿತ್‌ ‘ನನ್ನ ವೈಯಕ್ತಿಕ ಕಾರಣಗಳು ಮತ್ತು ಇತರ ಕೆಲವು ಬದ್ಧತೆಗಳಿಂದಾಗಿ ನಾನು ಪಂಜಾಬ್ ರಾಜ್ಯಪಾಲ ಮತ್ತು ಕೇಂದ್ರಾಡಳಿತ ಪ್ರದೇಶ, ಚಂಡೀಗಢದ ಆಡಳಿತಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ಅದನ್ನು ಸ್ವೀಕರಿಸಿ’ ಎಂದು ಬರೆದಿದ್ದಾರೆ.

ಸುಪ್ರೀಂ ಚಾಟಿ ಬೀಸಿತ್ತು:ಇನ್ನು ಮಸೂದೆಗೆ ಸಹಿ ಹಾಕದ ಆರೋಪದಡಿ ಬನ್ವಾರಿಲಾಲ್‌ ವಿರುದ್ಧ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 

ಈ ವೇಳೆ ಸುಪ್ರೀಂ ಕೂಡ, ಮಸೂದೆಗೆ ಸಹಿ ಹಾಕದೆ ವಿಳಂಬ ಮಾಡುವುದನ್ನು ವಿರೋಧಿಸಿ ಕಿಡಿಕಾರಿತ್ತು. 2016 ರಿಂದ 2017 ರವರೆಗೆ ಅಸ್ಸಾಂ ಹಾಗೂ 2017 ರಿಂದ 2021 ರವರೆಗೆ ತಮಿಳುನಾಡು ರಾಜ್ಯಪಾಲರಾಗಿ ಪುರೋಹಿತ್‌ ಸೇವೆ ಸಲ್ಲಿಸಿದ್ದಾರೆ.

ಅಲ್ಲದೇ ಮಹಾರಾಷ್ಟ್ರದ ನಾಗ್ಪುರದಿಂದ 1984, 1989 ಮತ್ತು 1996ರಲ್ಲಿ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.