2000 ಪಾಕ್‌ ಸೈನಿಕರ ಓಡಿಸಿದ್ದ 120 ಭಾರತೀಯ ಯೋಧರು!

| N/A | Published : May 12 2025, 12:00 AM IST / Updated: May 12 2025, 04:45 AM IST

indian army

ಸಾರಾಂಶ

ಭಾರತೀಯ ಸೇನೆಯ ಗಾತ್ರ, ಶಸ್ತ್ರಾಸ್ತ್ರ, ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯದಲ್ಲಿ ಯಾರೂ ಸರಿಸಾಟಿಯಿಲ್ಲ ಎಂಬುದನ್ನು ಜಗತ್ತಿಗೇ ತೋರಿಸಿದ ಯುದ್ಧವೊಂದು ಪಾಕಿಸ್ತಾನದೊಂದಿಗೆ ಬಾಂಗ್ಲಾದ ವಿಮೋಚನೆಗಾಗಿ 1971ರ ಡಿ.4ರಂದು ನಡೆದಿತ್ತು.

 ನವದೆಹಲಿ: ಭಾರತೀಯ ಸೇನೆಯ ಗಾತ್ರ, ಶಸ್ತ್ರಾಸ್ತ್ರ, ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯದಲ್ಲಿ ಯಾರೂ ಸರಿಸಾಟಿಯಿಲ್ಲ ಎಂಬುದನ್ನು ಜಗತ್ತಿಗೇ ತೋರಿಸಿದ ಯುದ್ಧವೊಂದು ಪಾಕಿಸ್ತಾನದೊಂದಿಗೆ ಬಾಂಗ್ಲಾದ ವಿಮೋಚನೆಗಾಗಿ 1971ರ ಡಿ.4ರಂದು ನಡೆದಿತ್ತು.

ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾ)ದ ಪರವಾಗಿ ಭಾರತ ಯುದ್ಧಕ್ಕೆ ಧುಮುಕಿತ್ತು. ಎಲ್ಲರ ಗಮನ ಅತ್ತ ಕಡೆಯೇ ನೆಟ್ಟಿತ್ತು. ಹೀಗಿರುವಾಗ ಪಾಕಿಸ್ತಾನ ತನ್ನ ಕುತಂತ್ರಿ ಬುದ್ಧಿಯನ್ನು ತೋರಿಸಿತ್ತು.

ಪಾಕಿಸ್ತಾನದ ಪ್ರಧಾನಿಯಾಗಿದ್ದ ಯಾಹ್ಯಾ ಖಾನ್‌ಗೆ, ಬಾಂಗ್ಲಾ ಭಾಗ ಕೈತಪ್ಪುವುದು ಬಹುತೇಕ ಖಚಿತವಾಗಿತ್ತು. ಹಾಗಾಗಿ ಭಾರತದ ಪಶ್ಚಿಮ ಭಾಗದ ಒಂದಿಷ್ಟು ಜಾಗವನ್ನು ಆಕ್ರಮಿಸಿಕೊಂಡು, ಬಳಿಕ ಸಂಧಾನದ ಸಮಯದಲ್ಲಿ ಅದನ್ನು ಮರಳಿಸಿ ಬಾಂಗ್ಲಾವನ್ನು ಉಳಿಸಿಕೊಳ್ಳುವುದು ಆತನ ಯೋಜನೆಯಾಗಿತ್ತು.

ಇದರ ಭಾಗವಾಗಿ ಆತ 40 ಟ್ಯಾಂಕ್‌, ಭಾರೀ ಫಿರಂಗಿಗಳೊಂದಿಗೆ 2,000 ಸೈನಿಕರನ್ನು ರಾಜಸ್ಥಾನದ ಲೊಂಗೇವಾಲಾ ಪ್ರದೇಶಕ್ಕೆ ಕಳುಹಿಸಿದ್ದ. ಆದರೆ ಇತ್ತ ಆ ಪ್ರದೇಶದಲ್ಲಿ ಗಡಿ ಕಾಯುತ್ತಿದ್ದುದು ಮೇ. ಕುಲ್ದೀಪ್‌ ಸಿಂಗ್‌ ಚಾಂದ್‌ಪುರಿ ಅವರ ನೇತೃತ್ವದ ಪಂಜಾಬ್‌ ರೆಜಿಮೆಂಟ್‌ನ 23ನೇ ಬೆಟಾಲಿಯನ್‌ನ 120 ಭಾರತೀಯ ಸೈನಿಕರು.

ಕತ್ತಲು ಕವಿಯುತ್ತಿದ್ದಂತೆ ಪಾಕ್‌ ಟ್ಯಾಂಕರ್‌ಗಳ ಸದ್ದು ಕೇಳಿ ಎಚ್ಚೆತ್ತ ಭಾರತೀಯ ಸೈನಿಕರು, ನಕಲಿ ಸ್ಫೋಟಕಗಳನ್ನು ಹರಡಿಟ್ಟು ಎದುರಾಳಿಗಳಲ್ಲಿ ಭೀತಿ ಹುಟ್ಟಿಸಿದರು. ಜೊತೆಗೆ ಶತ್ರು ಸೇನೆಯ ಟ್ಯಾಂಕ್‌ ಸಮೀಪಿಸುವುದನ್ನು ಕಾದರು. ಅವು 15-30 ಮೀಟರ್‌ ಸಮೀಪದಲ್ಲಿರುವಾಗ ಗುಂಡಿನ ಮಳೆಗರೆಯಲು ಶುರು ಮಾಡಿ, 2 ಟ್ಯಾಂಕ್‌ಗಳನ್ನು ಪುಡಿಗಟ್ಟಿದರು. ಕೆಲ ಇಂಧನ ಟ್ಯಾಂಕ್‌ಗಳಿಗೆ ಬೆಂಕಿ ಹತ್ತಿಕೊಂಡದ್ದು, ಭಾರತೀಯ ಪಡೆಗೆ ಲಾಭವಾಯಿತು.

ಆ ಸಂದರ್ಭದಲ್ಲಿ, ಭಾರತೀಯ ಪಡೆಗೆ ಪ್ರಕೃತಿಯೂ ಸಾಥ್‌ ನೀಡಿದಂತಿತ್ತು. ಪಾಕ್‌ ಟ್ಯಾಂಕ್‌ ಮರುಭೂಮಿಯ ಮರಳಿನಲ್ಲಿ ಹೂತು ಹೋಗಿದ್ದರಿಂದ ಮತ್ತು ಮುಂದೆ ತಂತಿ ಬೇಲಿ ಕಂಡಿದ್ದರಿಂದ ಪಾಕ್‌ ಸೇನೆ ಮುಂದುವರೆಯಲಿಲ್ಲ. ಇದರಿಂದ ಭಾರತೀಯ ಸೈನಿಕರಿಗೆ ಸಿದ್ಧತೆಗೆ ಸಮಯ ಸಿಕ್ಕಿತು. ಸೂರ್ಯೋದಯವಾಗುತ್ತಿದ್ದಂತೆ ಹಾರಿಬಂದ ಭಾರತೀಯ ವಾಯುಪಡೆಯ ಲೋಹದ ಹಕ್ಕಿಗಳನ್ನು ತಡೆಯುವುದು ಪಾಕಿಸ್ತಾನದ ಭೂಸೇನೆಗೆ ಸಾಧ್ಯವಾಗಲಿಲ್ಲ. ಬಳಿಕ ನಡೆದ 6 ಗಂಟೆಗಳ ಹೊಡೆದಾಟದಲ್ಲಿ ಪಾಕಿಸ್ತಾನ 36 ಟ್ಯಾಂಕ್‌, 100ಕ್ಕೂ ಅಧಿಕ ವಾಹನ ಹಾಗೂ ಸೈನಿಕರನ್ನು ಕಳೆದುಕೊಂಡಿತ್ತು. ಬಳಿಕ ಬೇರೆ ಆಯ್ಕೆಯಿಲ್ಲದೆ ಅಲ್ಲಿಂದ ಪಲಾಯನಗೈದಿತ್ತು. ಹೀಗೆ ಕೇವಲ 120 ಯೋಧರು 2000 ಪಾಕ್‌ ಯೋಧರ ತಂಡವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು.