ರೆಮೆಲ್‌’ ಅಬ್ಬರಕ್ಕೆ ಬಂಗಾಳ ತತ್ತರ

| Published : May 27 2024, 05:35 AM IST

Remal

ಸಾರಾಂಶ

‘ರೆಮೆಲ್‌’ ಭಾನುವಾರ ತಡರಾತ್ರಿ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದೆ. ಗಂಟೆಗೆ 135 ಕಿ.ಮೀ.ವರೆಗೂ ವೇಗದಲ್ಲಿ ಲಗ್ಗೆ ಇಟ್ಟ ಈ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್‌, ಅರುಣಾಚಲಪ್ರದೇಶ ಹಾಗೂ ತ್ರಿಪುರದಲ್ಲಿ ಧಾರಾಕಾರ ಮಳೆಯಾಗುತ್ತಿದೆ. 

ಕೋಲ್ಕತಾ : ಬಂಗಾಳ ಕೊಲ್ಲಿಯಲ್ಲಿ ಎದ್ದಿದ್ದ ಈ ವರ್ಷದ ಮೊದಲ ಚಂಡಮಾರುತ ‘ರೆಮೆಲ್‌’ (ಒಮಾನ್‌ ಭಾಷೆಯಲ್ಲಿ ಮರಳು ಎಂದರ್ಥ) ಭಾನುವಾರ ತಡರಾತ್ರಿ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದೆ. ಗಂಟೆಗೆ 135 ಕಿ.ಮೀ.ವರೆಗೂ ವೇಗದಲ್ಲಿ ಲಗ್ಗೆ ಇಟ್ಟ ಈ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್‌, ಅರುಣಾಚಲಪ್ರದೇಶ ಹಾಗೂ ತ್ರಿಪುರದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಬಾಂಗ್ಲಾದೇಶದಲ್ಲೂ ಭರ್ಜರಿ ಮಳೆ ಸುರಿಯುತ್ತಿದೆ.

ಪಶ್ಚಿಮ ಬಂಗಾಳದ ಸಾಗರ ದ್ವೀಪ ಹಾಗೂ ಬಾಂಗ್ಲಾದೇಶದ ಖೇಪುಪಾರ ನಡುವಣ ಪ್ರದೇಶದಲ್ಲಿ ಚಂಡಮಾರುತ ಅಪ್ಪಳಿಸಿದೆ. ಈ ಚಂಡಮಾರುತದಿಂದ ಹಲವಾರು ಮರಗಳು ಬುಡಮೇಲಾಗಿವೆ. ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದು ತಿಳಿದು ಬರಬೇಕಿದೆ.

ಕೋಲ್ಕತಾ ಸೇರಿದಂತೆ ಬಂಗಾಳದಾದ್ಯಂತ ಭಾನುವಾರದಿಂದಲೇ ಮಳೆ ಸುರಿಯುತ್ತಿದೆ. ಮುನ್ನೆಚ್ಚರಿಕೆಯಾಗಿ ಹಲವಾರು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಭಾನುವಾರ ಮಧ್ಯಾಹ್ನದಿಂದಲೇ 21 ತಾಸುಗಳ ಕಾಲ ಕೋಲ್ಕತಾ ವಿಮಾನ ನಿಲ್ದಾಣವನ್ನು ಬಂದ್‌ ಮಾಡಿರುವುದರಿಂದ 394 ದೇಶಿ ಹಾಗೂ ವಿದೇಶಿ ವಿಮಾನಗಳ ಸಂಚಾರ ಸ್ಥಗಿತಗೊಂಡಿದೆ.

ಕೋಲ್ಕತಾದ ಶ್ಯಾಮ ಪ್ರಸಾದ್‌ ಮುಖರ್ಜಿ ಬಂದರಿನಲ್ಲಿ ಸರಕು ಹಾಗೂ ಕಂಟೇನರ್‌ ನಿರ್ವಹಣೆ ಸೇವೆಯನ್ನು ಭಾನುವಾರ ಸಂಜೆಯಿಂದ 12 ತಾಸುಗಳ ಕಾಲ ಸ್ಥಗಿತಗೊಳಿಸಲಾಗಿದೆ.

ಚಂಡಮಾರುತ ಭೂಸ್ಪರ್ಶ ಮಾಡಿದ್ದರೂ ಸೋಮವಾರ ದಿನವಿಡೀ ಧಾರಾಕಾರ ಮಳೆಯಾಗಲಿದೆ. ಸಮುದ್ರದಲ್ಲಿ ಅಲೆಗಳ ಎತ್ತರ 1 ಮೀಟರ್‌ವರೆಗೂ ತಲುಪುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶ ತೀರದ ತಗ್ಗುಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಮೀನುಗಾರರು ಸದ್ಯಕ್ಕೆ ಸಮುದ್ರಕ್ಕೆ ಇಳಿಯಬಾರದು ಎಂದು ಮುನ್ನೆಚ್ಚರಿಕೆ ಸಾರಲಾಗಿದೆ.

ಚಂಡಮಾರುತ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತ ತಪ್ಪಿಸಲು ಬಂಗಾಳದಲ್ಲಿ ಹೈಮಾಸ್ಟ್‌ ದೀಪಗಳನ್ನು ಕೆಳಕ್ಕೆ ಇಳಿಸಲಾಗಿತ್ತು. ಸಣ್ಣ ವಿಮಾನಗಳನ್ನು ಹಗ್ಗದಿಂದ ಬಿಗಿದು ಕಟ್ಟಲಾಗಿತ್ತು. ತುರ್ತಾಗಿ ಸ್ಪಂದಿಸಲು ನಿಯಂತ್ರಣ ಕೊಠಡಿಯನ್ನೂ ಸ್ಥಾಪಿಸಲಾಗಿದೆ.