ಸಾರಾಂಶ
ನವದೆಹಲಿ: ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಾವು ದೇಶದ ಉದ್ದಗಲಕ್ಕೂ ನಡೆಸಿದ ಭಾರತ್ ಜೋಡೋ ಯಾತ್ರೆ ವೇಳೆ ತಾವು ನಡೆಸಿದ್ದ ‘ಜಿಯು ಜಿಟ್ಸು’ ಆತ್ಮರಕ್ಷಣಾ ಕಲೆಯ ಅಭ್ಯಾಸದ ವಿಡಿಯೋವೊಂದನ್ನು ಗುರುವಾರ ಹಂಚಿಕೊಂಡಿದ್ದಾರೆ.
ಆತ್ಮರಕ್ಷಣಾ ಕತೆ ಕಲಿಸುವ ಶಾಲೆ ಅಥವಾ ತರಬೇತಿ ಹಾಲ್ ಅನ್ನು ಡೋಜೋ ಎನ್ನಲಾಗುತ್ತದೆ.
ರಾಷ್ಟ್ರೀಯ ಕ್ರೀಡಾ ದಿನವಾದ ಗುರುವಾರ ಈ ವಿಡಿಯೋ ಹಂಚಿಕೊಂಡಿರುವ ರಾಹುಲ್, ಭಾರತ್ ಜೋಡೋ ಯಾತ್ರೆ ಅಂಗವಾಗಿ ದೇಶವ್ಯಾಪಿ ಯಾತ್ರೆ ನಡೆಸಿದ ಅವಧಿಯಲ್ಲಿ ನಾವು ಉಳಿದುಕೊಂಡಿದ್ದ ಸ್ಥಳದಲ್ಲಿ ನಿತ್ಯ ಸಂಜೆ ಜಿಯು- ಜಿಟ್ಸು ಅಭ್ಯಾಸ ಮಾಡುತ್ತಿದ್ದೆವು. ದೈಹಿಕ ಕ್ಷಮತೆ ಕಾಪಾಡಲು ಆರಂಭಿಸಿದ ಅಭ್ಯಾಸ ಕೊನೆಗೆ ಸಮುದಾಯ ಚಟುವಟಿಕೆಯಾಗಿ ಬದಲಾಯಿತು. ಅದು ನಮ್ಮೆಲ್ಲಾ ಯಾತ್ರಿಗಳನ್ನು, ಮಾರ್ಷಲ್ ಆರ್ಟ್ಸ್ ವಿದ್ಯಾರ್ಥಿಗಳನ್ನು ಒಂದುಗೂಡಿಸಿತು.
ನಮ್ಮ ಗುರಿ ಈ ಯುವ ಮನಸ್ಸುಗಳಲ್ಲಿ ಈ ಸೌಮ್ಯ ಕಲೆ ಮತ್ತು ಧ್ಯಾನದ ಸೌಹಾರ್ಧತೆಯನ್ನು ಸೇರಿಸುವುದಾಗಿದೆ. ಈ ಮೂಲಕ ಅವರ ಮನಸ್ಸುಗಳಲ್ಲಿ ಹಿಂಸೆಯನ್ನು ಸೌಮ್ಯತೆಯಾಗಿ ಪರಿವರ್ತಿಸುವ, ಸುರಕ್ಷಿತ ಮತ್ತು ಕರುಣಾಮಯಿ ಸಮಾಜ ನಿರ್ಮಾಣ ಮಾಡಲು ಹೊಸದೊಂದು ಆಯುಧ ನೀಡುವ ಉದ್ದೇಶ ನಮ್ಮದು. ವಿಶೇಷ ಸೂಚನೆ, ಶೀಘ್ರವೇ ಭಾರತ್ ಡೋಜೋ ಯಾತ್ರೆ ಬರಲಿದೆ’ ಎಂದು ಬರೆದುಕೊಂಡಿದ್ದಾರೆ.